ನವದೆಹಲಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು. ಚಿತ್ರ: ಲಭ್ಯವಾದದ್ದು
ನವದೆಹಲಿ: ಮಹಿಳಾ ಮೀಸಲು ಮಸೂದೆ ಹಾಗೂ ಕ್ಷೇತ್ರ ಮರುವಿಂಗಡಣೆ ಮಸೂದೆಗಳಿಗೆ ಜಾತ್ಯತೀತ ಜನತಾದಳ (ಜೆಡಿಎಸ್) ಸಂಪೂರ್ಣ ಬೆಂಬಲ ನೀಡಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಹೇಳಿದ್ದಾರೆ. ಮರುವಿಂಗಡಣೆಯಿಂದ ಯಾವುದೇ ರಾಜ್ಯಕ್ಕೆ ಅನ್ಯಾಯವಾಗುವುದಿಲ್ಲ, ಕರ್ನಾಟಕದ ಲೋಕಸಭಾ ಕ್ಷೇತ್ರಗಳು ಶೇ.50ರಷ್ಟು ಹೆಚ್ಚಲಿವೆ ಎಂದೂ ಅವರು ತಿಳಿಸಿದರು.
ನವದೆಹಲಿಯಲ್ಲಿ ಶುಕ್ರವಾರ ಸಂಜೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕೆಂಬ ಕನಸು ನೆನೆಗುದಿಗೆ ಬಿದ್ದಿತ್ತು; ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ಮಸೂದೆ ಧ್ವನಿಮತದಿಂದ ಅಂಗೀಕಾರವಾಗಿ ಜಾರಿಗೆ ಬರಲಿದೆ ಎಂದರು.
ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಮಹಿಳಾ ಮೀಸಲು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಆದರೆ ಸಂಯುಕ್ತ ರಂಗದ ಮಿತ್ರಪಕ್ಷಗಳೇ ಒಪ್ಪಿಗೆ ನೀಡದ ಕಾರಣ ಅದು ಮುಂದುವರಿಯಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. 30 ವರ್ಷಗಳ ನಂತರ ನರೇಂದ್ರ ಮೋದಿ ಪ್ರಧಾನಿಯಾಗಿರುವಾಗ ಈ ಐತಿಹಾಸಿಕ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗುತ್ತಿದ್ದು, ತಮ್ಮ ನೇತೃತ್ವದ ಜೆಡಿಎಸ್ ಅದಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದರು.
ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗೀಕಾರವಾಗಿ ಜಾರಿಗೆ ಬಂದ ನಂತರ ಕರ್ನಾಟಕದ ಲೋಕಸಭಾ ಕ್ಷೇತ್ರಗಳು ಶೇ.50ರಷ್ಟು ಹೆಚ್ಚಲಿವೆ ಎಂದು ಕುಮಾರಸ್ವಾಮಿ ಹೇಳಿದರು. “ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಕರ್ನಾಟಕ ಮತ್ತು ಕನ್ನಡಿಗರ ಹಿತಾಸಕ್ತಿ ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಮಸೂದೆಯಿಂದ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ. ಲೋಕಸಭೆಯಲ್ಲಿ ಕನ್ನಡಿಗರ ಪ್ರಾತಿನಿಧ್ಯ ಗಣನೀಯವಾಗಿ ಹೆಚ್ಚಲಿದೆ,” ಎಂದರು. ಇದರಿಂದ ಲೋಕಸಭೆಯಲ್ಲಿ ಕನ್ನಡಿಗರ ಧ್ವನಿ ಕ್ಷೀಣವಾಗುವುದಿಲ್ಲ ಎಂದೂ ಹೇಳಿದರು.
ದಕ್ಷಿಣ ಭಾರತದ ರಾಜ್ಯಗಳಿಗೆ ಲೋಕಸಭೆಯಲ್ಲಿ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬುದರಲ್ಲಿ ಸತ್ಯಾಂಶವಿಲ್ಲ; ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದ ಈಗಿನ ಲೋಕಸಭಾ ಕ್ಷೇತ್ರಗಳು ಶೇ.50ರಷ್ಟು ಹೆಚ್ಚಲಿವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಮರುವಿಂಗಡಣೆ ಮಸೂದೆ ವಿಚಾರದಲ್ಲಿ ಕಾಂಗ್ರೆಸ್ ಅನಗತ್ಯವಾಗಿ ದೇಶವನ್ನು ಗೊಂದಲಕ್ಕೆ ದೂಡುತ್ತಿದೆ, ಮಹಿಳಾ ಮೀಸಲು ಮಸೂದೆ ಬಗ್ಗೆಯೂ ಸ್ಪಷ್ಟ ನಿಲುವು ಹೊಂದಿಲ್ಲ ಎಂದು ಅವರು ಆರೋಪಿಸಿದರು. ದೇಶದ ಎಲ್ಲ ಮಹಿಳೆಯರ ಹಿತ ಗಮನದಲ್ಲಿಟ್ಟುಕೊಂಡು ಮೋದಿ ನೇತೃತ್ವದ ಎನ್‌ಡಿಎ ಈ ಮಸೂದೆಯನ್ನು ಮಂಡಿಸುತ್ತಿದೆ; ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮುಕ್ತ ಮನಸ್ಸಿನಿಂದ ಬೆಂಬಲಿಸಬೇಕು. “ಇಲ್ಲವಾದರೆ ದೇಶದ ಜನರು ಅವರನ್ನು ಕ್ಷಮಿಸುವುದಿಲ್ಲ,” ಎಂದು ಎಚ್ಚರಿಸಿದರು.
ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಇಂತಹ ಪರಿವರ್ತನಾತ್ಮಕ ಹೆಜ್ಜೆ ಇರಿಸಿದ ಪ್ರಧಾನಿ ಮೋದಿ ಅವರನ್ನು ಮುಕ್ತಕಂಠದಿಂದ ಅಭಿನಂದಿಸುವುದಾಗಿ ಕುಮಾರಸ್ವಾಮಿ ಹೇಳಿದರು. ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಮತ್ತೊಮ್ಮೆ ಸಂಸತ್ತಿನಲ್ಲಿ ಮಂಡಿಸಲು ನಿರ್ಧರಿಸಲಾಗಿದೆ; ಎನ್‌ಡಿಎ ಭಾಗವಾಗಿ ಹಾಗೂ ರಾಷ್ಟ್ರಹಿತದ ದೃಷ್ಟಿಯಿಂದ ಎರಡೂ ಮಸೂದೆಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ತಿಳಿಸಿದರು.
ಕೆಲವು ಪಕ್ಷಗಳು ನಿರಾಧಾರವಾಗಿ ಜನರಿಗೆ ತಪ್ಪು ಮಾಹಿತಿ ನೀಡಿ ಮಸೂದೆ ಬಗ್ಗೆ ಅಸತ್ಯ ಹರಡುತ್ತಿವೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಈ ಅಪಪ್ರಚಾರಕ್ಕೆ ದೇಶಕ್ಕೆ ಉತ್ತರ ನೀಡಬೇಕು, ಎಲ್ಲ ಪಕ್ಷಗಳು ಸರ್ವಸಮ್ಮತವಾಗಿ ಎರಡೂ ಮಸೂದೆಗಳನ್ನು ಬೆಂಬಲಿಸಬೇಕು ಎಂದು ಒತ್ತಾಯಿಸಿದರು.
“ಮಹಿಳಾ ಮೀಸಲು ಮಸೂದೆ ಅಂಗೀಕಾರಕ್ಕೆ ಕಳೆದ ಮೂರು ದಶಕಗಳಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೇರಿದಂತೆ ಅನೇಕ ಮಹನೀಯರು ಬಹಳಷ್ಟು ಶ್ರಮಿಸಿದ್ದರು. ನರೇಂದ್ರ ಮೋದಿ ಅವರ ಬಲಿಷ್ಠ ನಾಯಕತ್ವದಲ್ಲಿ ಇದೆಲ್ಲವೂ ಸಾಕಾರವಾಗುತ್ತಿದೆ. ಅವರ ಸಂಪುಟ ಸಹೋದ್ಯೋಗಿಯಾಗಿ ನನಗೆ ಬಹಳ ಸಂತೋಷವಾಗಿದೆ,” ಎಂದು ಕುಮಾರಸ್ವಾಮಿ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ರಾಮ್ ಮೋಹನ್ ನಾಯ್ಡು, ಪೆಮ್ಮಸಾನಿ ಚಂದ್ರಶೇಖರ್, ಲೋಕಸಭೆಯ ಟಿಡಿಪಿ ನಾಯಕ ಲಾವು ಶ್ರೀಕೃಷ್ಣ ದೇವರಾಯಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿ:
