ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ
ಮೈಸೂರು:
ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಗೆ ಮೇಯರ್ ಪಟ್ಟ ಲಭಿಸಿದ್ದು ಬಿಜೆಪಿ ಗೆ ನಿರಾಸೆಯಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧಿಸಿವೆ. ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ ಅನ್ವರ್ ಬೇಗ್ ಅವರಿಗೆ ಉಪಮೇಯರ್ ಸ್ಥಾನ ಲಭಿಸಿದೆ.
ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ 43 ಮತಗಳ ಮೂಲಕ ಮೇಯರ್ ಸ್ಥಾನ ಅಲಂಕರಿಸಿದರು. ಬಿಜೆಪಿಯ ಸುನಂದಾ ಪಾಲನೇತ್ರ ಅವರಿಗೆ 26 ಮತ ಲಭಿಸಿವೆ.
ಪತ್ನಿಗೆ ಪಾಲಿಕೆಯಲ್ಲೇ ಮುತ್ತಿಟ್ಟು ಸಂಭ್ರಮಿಸಿದ ಪತಿ
ಕೊನೆ ಕ್ಷಣದಲ್ಲಿ ಪಾಲಿಕೆಯ ನೂತನ ಮೇಯರ್ ಆಗಿ ರುಕ್ಮಿಣಿ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಸಂತಸಗೊಂಡ ಅವರ ಪತಿ ಮಾದೇಗೌಡ ಪಾಲಿಕೆಯಲ್ಲಿಯೇ ಪತ್ನಿಯನ್ನು ಎತ್ತಿಕೊಂಡು ಮುತ್ತು ನೀಡಿ ಸಂಭ್ರಮಿಸಿದ್ದಾರೆ.
ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾತನಾಡಿದ ರುಕ್ಮಿಣಿ ಮಾದೇಗೌಡ, ನನಗೆ ನಿರೀಕ್ಷೆಯಂತೆ ಮೈಸೂರು ಮೇಯರ್ ಪಟ್ಟ ಒಲಿದಿದೆ. ಮುಂದಿನ ದಿನದಲ್ಲಿ ಎಲ್ಲರ ಸಲಹೆ ಪಡೆದು ಕಾರ್ಯ ನಿರ್ವಹಿಸುತ್ತೇನೆ. ನನ್ನನ್ನು ಆಯ್ಕೆ ಮಾಡಿದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಜಿಟಿ ದೇವೇಗೌಡ, ಸಾ ರಾ ಮಹೇಶ್ ಹಾಗೂ ಕಾಂಗ್ರೆಸ್ ಮುಖಂಡರಿಗೆ ಆಭಾರಿಯಾಗಿದ್ದೇನೆ ಎಂದರು.
ಡಿ.ಕೆ ಶಿವಕುಮಾರ್ ಅವರ ಪ್ರತಿಕ್ರಿಯೆ
ಈಗಾಗಲೇ ಮೈಸೂರು ಮೇಯರ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಒಪ್ಪಂದ ಆಗಿದೆ. ಕಾಂಗ್ರೆಸ್ ಗೆ 2 ವರ್ಷ ಹಾಗೂ ಜೆಡಿಎಸ್ ಗೆ 3 ವರ್ಷ ಮೇಯರ್ ಸ್ಥಾನ ಎಂದು ನಿರ್ಧರಿಸಲಾಗಿತ್ತು. ಆ ಪ್ರಕಾರ ಜೆಡಿಎಸ್ ನಡೆದುಕೊಳ್ಳಲಿದೆ ಎಂದು ನಾವು ಭಾವಿಸಿದ್ದೇವೆ. ನಾವು ನಮ್ಮ ಮಾತಿಗೆ ಬದ್ಧರಾಗಿದ್ದೇವೆ.
ಮೈತ್ರಿ ಮುರಿಯುವ ವಿಚಾರವಾಗಿ ಯಾರು ಏನು ಹೇಳಿದ್ದಾರೆ, ಏನು ಮಾಡಿದ್ದಾರೆ ಎಂಬುದನ್ನು ನಾನು ಪ್ರತ್ಯಕ್ಷವಾಗಿ ನೋಡಿ ತಿಳಿಯುವವರೆಗೂ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ.
ನಾನು ಯಾರ ಜತೆ ಬೇಕಾದರೂ ಮಾತನಾಡುತ್ತೇನೆ. ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದರೆ ಅದಕ್ಕಾಗಿ ಯಾರ ಜೊತೆಬೇಕಾದರೂ ಮಾತನಾಡುತ್ತೇನೆ. ಯಾರೂ ಕೂಡ ನನ್ನ ಮೇಲೆ ನಿರ್ಬಂಧ ಹೇರಿಲ್ಲ. ನಮಗೆ ಪಕ್ಷದ ತತ್ವ, ನಿಲುವು ಮುಖ್ಯ.