Home ಬೆಂಗಳೂರು ನಗರ ಸ್ಫೋಟದ ಆರೋಪಿಗಳನ್ನು ರಕ್ಷಿಸುತ್ತಿಲ್ಲ ; ಅನಾಹುತದಲ್ಲಿ ರಾಜಕಾರಣ ಸರಿಯಲ್ಲ

ಸ್ಫೋಟದ ಆರೋಪಿಗಳನ್ನು ರಕ್ಷಿಸುತ್ತಿಲ್ಲ ; ಅನಾಹುತದಲ್ಲಿ ರಾಜಕಾರಣ ಸರಿಯಲ್ಲ

33
0

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಕ್ರಮಕ್ಕೆ ಅವಕಾಶವೇ ಇಲ್ಲ : ಸಚಿವ ಸುಧಾಕರ್‌

ಬೆಂಗಳೂರು:

ಹಿರೇನಾಗವಲ್ಲಿ ಸ್ಫೋಟ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಇರಾದೆ ಸರ್ಕಾರಕ್ಕೆ ಇಲ್ಲ. ಮಾಲೀಕ ಸೇರಿದಂತೆ ಕೆಲವರನ್ನು ಈಗಾಗಲೇ ಬಂಧಿಸಿ ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಇಷ್ಟಾದರೂ ಕೆಲವರು ಘಟನೆಗೆ ರಾಜಕೀಯ ಲೇಪ ಹಚ್ಚುವ, ವೈಯಕ್ತಿಕ ಆರೋಪ ಮಾಡುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಉರಿವ ಮನೆಯಲ್ಲಿ ಗಳ ಇರಿಯುವ ಇಂತಹ ವರ್ತನೆ ಸಾರ್ವಜನಿಕ ಜೀವನದಲ್ಲಿ ಶೋಭೆ ತರುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ ಟೀಕಾಕಾರರಿಗೆ ತಿರುಗೇಟು ನೀಡಿದರು.

ಶಿವಮೊಗ್ಗ ಸ್ಫೋಟದ ಬಳಿಕ ಜಿಲ್ಲಾಡಳಿತದ ಜತೆ ಮೂರು ಸಭೆ ನಡೆಸಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ, ಸ್ಫೋಟಕಗಳ ಸರಬರಾಜು, ದಾಸ್ತಾನು ಮತ್ತು ಬಳಕೆ ಮೇಲೆ ಕಟ್ಟುನಿಟ್ಟು ಕ್ರಮ ತೆಗೆದುಕೊಳ್ಳುವಂತೆ ಹಾಗೂ ನಿಯಮಿತವಾಗಿ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದ್ದೆನು. ಆ ಹಿನ್ನಲೆಯಲ್ಲೇ ಅಧಿಕಾರಿಗಳು ಎಲ್ಲಾ ಕ್ವಾರಿಗಳಿಗೂ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ ಎಂದರು.

ಘಟನೆಗೆ ಕಾರಣವಾದ ಬ್ರಮರವರ್ಷಿಣಿ ಕ್ರಷರ್‌ಗೆ ಕಳೆದ ಏಳರಂದು ಎಸ್ಪಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಅದು ಸಕ್ರಮವಾಗಿ ನಡೆಯುತ್ತಿರುವ ಗಣಿ. ಆದರೆ ಸ್ಫೋಟಕಗಳ ದಾಸ್ತಾನು ಮತ್ತು ಬಳಕೆಯಲ್ಲಿ ಕಾನೂನು ಪಾಲನೆ ಮಾಡುತ್ತಿರಲಿಲ್ಲ. ಆ ಕಾರಣಕ್ಕೆ ಅದೇ ದಿನ ಕ್ವಾರಿಯನ್ನು ಸ್ಥಗಿತಗೊಳಿಸಲು ಆದೇಶಿಸಿ ದೂರು ದಾಖಲು ಮಾಡಲಾಗಿದೆ. ಮಾತ್ರವಲ್ಲ, ಮತ್ತೆ ಪರಿಶೀಲನೆಗಾಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಮಾಲೀಕ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸ್ಫೋಟಕಗಳನ್ನು ಸಮೀಪದ ಕುರುಚಲು ಕಾಡಿನಲ್ಲಿ ವಿಲೇವಾರಿ ಮಾಡಲು ಕೆಲಸಗಾರರಿಗೆ ಸೂಚನೆ ನೀಡಿದ್ದನಂತೆ, ಇದರಿಂದಾಗಿಯೇ ಅನಾಹುತ ಸಂಭವಿಸಿದೆ ಎಂದು ವಿವರಿಸಿದರು.

Chikkaballapur blast site

ಬೇರೆಡೆ ದಾಸ್ತಾನು ಮಾಡಲಾಗಿತ್ತು

ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕಗಳನ್ನು ಕ್ವಾರಿಯಿಂದ ಒಂದೂವರೆ ಕಿಲೋಮೀಟರ್‌ ದೂರದಲ್ಲಿರುವ ಕೊಠಡಿಯೊಂದರಲ್ಲಿ ಇರಿಸಿದ್ದ ಅಂಶ ಗೊತ್ತಾಗಿದೆ. ಪೊಲೀಸರ ದಾಳಿ ಬಳಿಕ ಹೆದರಿದ ಮಾಲೀಕರು ಅದನ್ನು ಸಮೀಪದ ಕಾಡಿನಲ್ಲಿ ಬಿಸಾಡುವಂತೆ ಹೇಳಿದ್ದರಿಂದ ಸಿಬ್ಬಂದಿಗಳು ಅದನ್ನು ತೆಗೆದುಕೊಂಡು ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ. ಕ್ಯಾಂಪ್‌ಫೈರ್‌ ಮಾದರಿಯಲ್ಲಿ ಬೆಂಕಿ ಹಚ್ಚಿಕೊಂಡು ಅಲ್ಲೇ ಎಲ್ಲರೂ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಬಳಿಕ ಸ್ಫೋಟಕಗಳನ್ನು ಅದೇ ಬೆಂಕಿಗೆ ಎಸೆದಿದ್ದಾರೆ. ಅದರಿಂದ ಅನಾಹುತ ಸಂಭವಿಸಿತು ಎಂದು ಬದುಕುಳಿದಿರುವ ಚಾಲಕ ನೀಡಿರುವ ಹೇಳಿಕೆ ಮತ್ತು ಸ್ಥಳ ಪರಿಶೀಲನೆ ನಡೆಸಿದ ತಜ್ಞರು ನೀಡಿದ ಮಾಹಿತಿಯಿಂದ ಬೆಳಕಿಗೆ ಬಂದಿದೆ ಎಂದರು.

ಇದು ವಾಸ್ತವ ಸಂಗತಿ. ಆದರೂ ಕೆಲ ನಾಯಕರು ಘಟನೆಗೆ ರಾಜಕೀಯ ಬೆರೆಸುವ ಮತ್ತು ವೈಯಕ್ತಿಕ ಆರೋಪ ಮಾಡುವ ಕೀಳು ಮಟ್ಟಕ್ಕೆ ಇಳಿದಿದ್ದು ದುರದೃಷ್ಟಕರ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಲ್ಲದೆ, ಗೃಹ, ಗಣಿ ಸಚಿವರು ಮತ್ತು ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದ್ದೇನೆ. ಮೃತಪಟ್ಟ ಕುಟುಂಬದ ಸದಸ್ಯರ ಮನೆಗಳಿಗೂ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಸಿಎಂ ಅವರ ಸೂಚನೆ ಮೇರೆಗೆ ತಲಾ ಐದು ಲಕ್ಷ ಪರಿಹಾರವನ್ನೂ ಪ್ರಕಟಿಸಲಾಗಿದೆ. ಒಂದು ವೇಳೆ ಆರೋಪಿಗಳನ್ನು ರಕ್ಷಿಸುವಂತಿದ್ದರೆ ಘಟನೆಯ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸುವ ಔಚಿತ್ಯ ಏನಿತ್ತು ಎಂದು ಪ್ರಶ್ನಿಸಿದರು.
ಅವಕಾಶವಿಲ್ಲ.

ಗಣಿಗಾರಿಕೆಗೆ ಮತ್ತು ನನಗೂ ತಳುಕು ಹಾಕಲು ಕೆಲವರು ಯತ್ನಿಸಿದ್ದಾರೆ. ಎಂದಿಗೂ ಆ ಪ್ರಯತ್ನ ಫಲ ನೀಡುವುದಿಲ್ಲ. ಕಾನೂನು ಬದ್ಧವಾಗಿ ನಡೆಯುವ ಗಣಿ ಚಟುವಟಿಕೆಗಳಿಗೆ ಮಾತ್ರ ಅವಕಾಶ ಇದೆಯೇ ಹೊರತು, ಅಕ್ರಮಗಳಿಗೆ ಜಿಲ್ಲೆಯಲ್ಲಿ ಎಂದಿಗೂ ಅವಕಾಶ ನೀಡುವುದಿಲ್ಲ. ಈಗಾಗಲೇ ಅನಾಹುತದ ಸಂಬಂಧ ಸರ್ಕಲ್‌ ಇನ್ಸ್‌ಪೆಕ್ಟರ್‌, ಸಬ್‌ಇನ್ಸ್‌ಪೆಕ್ಟರ್‌ ಅವರನ್ನು ಅಮಾನತು ಮಾಡಲಾಗಿದೆ. ಗಣಿ ಇಲಾಖೆ ಹಿರಿಯ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಸಚಿವ ಮುರುಗೇಶ್‌ ನಿರಾಣಿ ಅವರ ಜತೆ ಮಾತನಾಡಿರುವುದಾಗಿ ಸಚಿವ ಸುಧಾಕರ್‌ ವಿವರಿಸಿದರು.

LEAVE A REPLY

Please enter your comment!
Please enter your name here