ಬೆಂಗಳೂರು:
ಶಾಲೆ-ಕಾಲೇಜುಗಳು ಆರಂಭವಾದಾಗ ಸಮಯಕ್ಕೆ ಸರಿಯಾಗಿ ಬಸ್ ಸಂಚಾರಕ್ಕೆ ನಿರ್ದೇಶನ ನೀಡುವ ಜೊತೆಗೆ ಬಸ್ ಹೊಸ ಪಾಸ್ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ಅವರು ಧನ್ಯವಾದ ತಿಳಿಸಿದರು.
ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕೆಎಸ್‌ಆರ್‌ಟಿಸಿಗೆ ‘60 ವಸಂತಗಳ ಸಂಭ್ರಮ’ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಕುಂದು ಕೊರತೆಗಳ ನಿವಾರಣೆಗೆ ಅಭಿವೃದ್ಧಿಪಡಿಸಲಾಗಿರುವ ಆನ್‌ಲೈನ್ ವ್ಯವಸ್ಥೆಗೆ ಚಾಲನೆ ನೀಡಿ ಸಚಿವ ಬಿ.ಸಿ ನಾಗೇಶ್ ಮಾತನಾಡಿದರು.
‘ಶಾಲೆಗಳನ್ನು ಆರಂಭಿಸಬೇಕು ಎಂಬ ನಿರ್ಧಾರ ತೆಗೆದುಕೊಂಡಾಗ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಓಡಾಟಕ್ಕೆ ಬಸ್‌ಗಳ ವಿಚಾರ ಮೊದಲು ಚರ್ಚೆಗೆ ಬಂತು. ಪಾಸ್‌ಗಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು, ಸರತಿ ಸಾಲಿನಲ್ಲಿ ನಿಲ್ಲುವುದು ಸದ್ಯದ ಮಟ್ಟಿಗೆ ಸಮಸ್ಯೆ ಎನಿಸುತ್ತದೆ. ಸರಳ ಪರಿಹಾರ ಬೇಕು ಬೇಕಾಗಿತ್ತು. ಮುಖ್ಯಮಂತ್ರಿಗಳು, ಸಾರಿಗೆ ಸಚಿವರು, ಕೆಎಸ್‌ಆರ್‌ಟಿಸಿ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರ ಜೊತೆಗೆ ಚರ್ಚಿಸಿದಾಗ ಹಳೇ ಪಾಸ್ ಅಥವಾ ಶಾಲೆಯ ಗುರುತಿನ ಚೀಟಿ ತೋರಿಸಿದರೆ ಮಕ್ಕಳಿಗೆ ಬಸ್‌ನಲ್ಲಿ ಸಂಚರಿಸಲು ಅವಕಾಶ ಕಲ್ಪಿಸುವುದಾಗಿ ಹೇಳಿದರು. ಸಮಸ್ಯೆ ಇಲ್ಲದೇ ಈಗ ವಿದ್ಯಾರ್ಥಿಗಳು ಆರಾಮವಾಗಿ ಓಡಾಡುತ್ತಿದ್ದಾರೆ’ ಎಂದು ಸಚಿವರು ಹೇಳಿದರು.
ಆತ್ಮೀಯ ನಾಗರೀಕರೆ, @KSRTC_Journeys , @KKRTC_Journeys ಹಾಗೂ @nw_krtc ವಿದ್ಯಾರ್ಥಿಗಳ ಬಸ್ ಪಾಸ್ ಸೇವೆಯು ಈಗ ಆನ್‌ಲೈನ್ ನಲ್ಲಿ ಲಭ್ಯವಿದೆ. ಈ ಸೇವೆಯನ್ನು ಪಡೆಯಲು https://t.co/mzHOnu883r ನಲ್ಲಿ ನೋಂದಾಯಿಸಿ. pic.twitter.com/zp3mtieMoB
— B Sriramulu (@sriramulubjp) September 3, 2021
‘ಕೆಎಸ್‌ಆರ್‌ಟಿಸಿ ನೌಕರರು ಶ್ರಮ ಜೀವಿಗಳು. ಹಗಲು, ರಾತ್ರಿ ಕೆಲಸ ಮಾಡುತ್ತಾರೆ. ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ದೂರು, ದುಮ್ಮಾನಗಳನ್ನು ಹಿರಿಯ ಅಧಿಕಾರಿಗಳ ಎದುರು ಹೇಳಿಕೊಳ್ಳಲು ಸಾಕಷ್ಟು ನೌಕರರು ಧೈರ್ಯ ಮಾಡುವುದಿಲ್ಲ. ಆದರೆ, ಶಾಸಕರು ಸೇರಿದಂತೆ ಅವರಿವರ ಬಳಿ ಹೇಳಿಕೊಳ್ಳುತ್ತಿದ್ದರು. ಆದರೆ, ಇನ್ನು ಮುಂದೆ ತಮ್ಮ ಕುಂದು ಕೊರತೆಗಳನ್ನು ಹಿರಿಯ ಅಧಿಕಾರಿಗಳಿಗೆ ಸರಳವಾಗಿ ತಿಳಿಸಲು ಇನ್ಫೋಸಿಸ್ ಸಂಸ್ಥೆಯ ವತಿಯಿಂದ ಆನ್‌ಲೈನ್ ವ್ಯವಸ್ಥೆ ಕಲ್ಪಿಸಿರುವುದು ಅಭಿನಂದನಾರ್ಹ. ಕೆಎಸ್‌ಆರ್‌ಟಿಸಿ ನೌಕರರ ಕುಂದು ಕೊರತೆಗಳಿಗೆ ಶೀಘ್ರ ಪರಿಹಾರ ಸಿಗುವ ಜೊತೆಗೆ ಕೆಎಸ್‌ಆರ್‌ಟಿಸಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಸಚಿವ ನಾಗೇಶ್ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ, ಶಿವಾಜಿನಗರ ಶಾಸಕ ರಿಜ್ವಾದ್ ಅರ್ಷದ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.