ಘನ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕವನ್ನು ದೇಶದ ಮಾದರಿ ರಾಜ್ಯವನ್ನಾಗಿಸೋಣ: ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್
ಬೆಂಗಳೂರು, ಮೇ 30: ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026ರ ಪರಿಣಾಮಕಾರಿ ಅನುಷ್ಠಾನದ ಮೂಲಕ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ರೂಪಿಸಲು ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕರೆ ನೀಡಿದರು.
ವಿಧಾನಸೌಧದಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026ರ ರಾಜ್ಯಮಟ್ಟದ ಅನುಷ್ಠಾನ ಕುರಿತ ವಿಡಿಯೋ ಸಂವಾದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ದೇಶದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಆಯ್ದ ರಾಜ್ಯಗಳಿಗೆ ಈ ನಿಯಮಗಳ ಯಶಸ್ವಿ ಅನುಷ್ಠಾನದ ಹೊಣೆಗಾರಿಕೆಯನ್ನು ವಹಿಸಿದ್ದು, ಯಾವುದೇ ಹಂತದಲ್ಲೂ ನಿರ್ಲಕ್ಷ್ಯ ತೋರಬಾರದು. ಅಧಿಕಾರಿಗಳು ಹಾಗೂ ಸಾರ್ವಜನಿಕರು ತಮ್ಮ ಜವಾಬ್ದಾರಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ರಾಜ್ಯವನ್ನು ತ್ಯಾಜ್ಯ ನಿರ್ವಹಣೆಯಲ್ಲಿ ಮುಂಚೂಣಿಗೆ ತರಬೇಕು ಎಂದು ಸೂಚಿಸಿದರು.
ಪ್ರತಿದಿನ ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಿಂದ ಉತ್ಪತ್ತಿಯಾಗುವ ಸಾವಿರಾರು ಟನ್ ಘನ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಅದು ಪರಿಸರಕ್ಕೆ ಗಂಭೀರ ಹಾನಿ ಉಂಟುಮಾಡುತ್ತದೆ ಎಂದು ಎಚ್ಚರಿಸಿದ ಅವರು, ಹೊಸ ನಿಯಮಗಳ ಪ್ರಕಾರ ಕಡ್ಡಾಯ ನಾಲ್ಕು ಹಂತದ ಕಸ ವಿಂಗಡಣೆಯನ್ನು ಜಾರಿಗೆ ತರಬೇಕೆಂದು ತಿಳಿಸಿದರು. ವಿಂಗಡಿಸಲಾದ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಸ್ಕರಣಾ ಘಟಕಗಳಿಗೆ ರವಾನಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ತಂತ್ರಜ್ಞಾನ ಆಧಾರಿತ ಸಮಗ್ರ ಮೇಲ್ವಿಚಾರಣಾ ವ್ಯವಸ್ಥೆ ರೂಪಿಸಬೇಕೆಂದು ಹೇಳಿದರು.
ಮಹಿಳಾ ಸ್ವಸಹಾಯ ಸಂಘಗಳ ಪಾತ್ರವನ್ನು ಶ್ಲಾಘಿಸಿದ ಡಾ. ಶಾಲಿನಿ ರಜನೀಶ್, ಈಗಾಗಲೇ ಸುಮಾರು 4,000 ಗ್ರಾಮ ಪಂಚಾಯತ್ಗಳಲ್ಲಿ ‘ಸ್ವಚ್ಛ ವಾಹಿನಿ’ಗಳಾಗಿ ಮಹಿಳಾ ಗುಂಪುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಯೋಜನೆಯನ್ನು ರಾಜ್ಯದ ಎಲ್ಲಾ 6,000 ಗ್ರಾಮ ಪಂಚಾಯತ್ಗಳಿಗೆ ವಿಸ್ತರಿಸುವಂತೆ ಸೂಚಿಸಿದರು. ಹೊಸ ನಿಯಮಗಳ ಕುರಿತು ಅವರಿಗೆ ಸಮರ್ಪಕ ತರಬೇತಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೃಹತ್ ತ್ಯಾಜ್ಯ ಉತ್ಪಾದಕರನ್ನು ಕಡ್ಡಾಯವಾಗಿ ಆನ್ಲೈನ್ನಲ್ಲಿ ನೋಂದಾಯಿಸಬೇಕು. ಅವರು ಉತ್ಪಾದಿಸುವ ತ್ಯಾಜ್ಯ, ಅದರ ಸಂಸ್ಕರಣೆ ಹಾಗೂ ಉಳಿದಿರುವ ತ್ಯಾಜ್ಯದ ಕುರಿತು ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ಕಾರ್ಯಕ್ರಮಗಳ ಮೂಲಕ ಸ್ಪಷ್ಟ ಅರಿವು ಮೂಡಿಸಬೇಕು ಎಂದು ಹೇಳಿದರು. ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು ಸ್ವಂತವಾಗಿ ಜೈವಿಕ ಇಂಧನ ಉತ್ಪಾದನಾ ಘಟಕಗಳನ್ನು ನಿರ್ಮಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದರು.
ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ಬಯೋ-ಮೆಡಿಕಲ್ ತ್ಯಾಜ್ಯವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು. ಖಾಸಗಿ ವಲಯದ ಭಾಗವಹಿಸುವಿಕೆಯಿಂದ ‘ವೇಸ್ಟ್ ಟು ಎನರ್ಜಿ’ ಮತ್ತು ‘ವೇಸ್ಟ್ ಟು ವೆಲ್ತ್’ ಯೋಜನೆಗಳಿಗೆ ಉತ್ತೇಜನ ನೀಡಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೈಗಾರಿಕಾ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸಿ ವಿಕೇಂದ್ರೀಕೃತ ತ್ಯಾಜ್ಯ ವಿನಿಮಯ ವ್ಯವಸ್ಥೆ ರೂಪಿಸಬೇಕು ಎಂದು ಸೂಚಿಸಿದರು.
ಹಸಿ ಕಸ ಹಾಗೂ ದ್ರವ ತ್ಯಾಜ್ಯ ನಿರ್ವಹಣೆಯ ಮೇಲೂ ವಿಶೇಷ ಗಮನ ಹರಿಸಬೇಕೆಂದು ತಿಳಿಸಿದ ಅವರು, ಸಂಸ್ಕರಿಸಿದ ನೀರಿನ ಮರುಬಳಕೆಯನ್ನು ಉತ್ತೇಜಿಸಬೇಕು. ಕೈಗಾರಿಕೆಗಳಲ್ಲಿ ಸಂಸ್ಕರಿಸಿದ ನೀರನ್ನೇ ಬಳಸುವಂತೆ ಕ್ರಮ ಕೈಗೊಂಡು ಕುಡಿಯುವ ನೀರನ್ನು ಕೈಗಾರಿಕಾ ಉದ್ದೇಶಗಳಿಗೆ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಹೇಳಿದರು.
ಪರಿಸರಕ್ಕೆ ಹಾನಿಕಾರಕ ಉತ್ಪನ್ನಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುವ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು. ಕಸದಿಂದ ತಯಾರಿಸಲಾದ ಉಪ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆ ಮತ್ತು ಬ್ರ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಮುಖ್ಯವಾಗಿದ್ದು, ಗ್ರಾಮೀಣ ಪ್ರದೇಶಗಳ ಸ್ವಚ್ಛತಾ ಕಾರ್ಯಕ್ರಮಗಳನ್ನು ಜನಪರ ಹಬ್ಬಗಳಂತೆ ಆಚರಿಸಬೇಕು. ಶಾಲಾ ಹಂತದಲ್ಲಿಯೇ ಡಿಜಿಟಲ್ ಮಾಧ್ಯಮಗಳ ಮೂಲಕ ಸ್ವಚ್ಛತೆ ಮತ್ತು ತ್ಯಾಜ್ಯ ವಿಂಗಡಣೆ ಕುರಿತ ಅರಿವು ಮೂಡಿಸಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯ ಸಿದ್ಧಪಡಿಸಿರುವ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026 ಕುರಿತ ವಿಶೇಷ ಮಾಹಿತಿ ಮತ್ತು ಪ್ರಚಾರ ಸಾಮಗ್ರಿಯನ್ನು ಡಾ. ಶಾಲಿನಿ ರಜನೀಶ್ ಲೋಕಾರ್ಪಣೆ ಮಾಡಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾದ ಫೌಜಿಯಾ ತರನ್ನುಮ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಘನ ತ್ಯಾಜ್ಯ ನಿರ್ವಹಣೆಯ ಪ್ರಗತಿ ಕುರಿತು ಮಾಹಿತಿ ನೀಡಿದರು. ರಾಜ್ಯದ ಗ್ರಾಮ
