ಬೆಂಗಳೂರಿನ ಕೌಶಲ್ಯ ಶಾಲೆಯಲ್ಲಿ ಭಾರಿ ಅಗ್ನಿ ಅವಘಡ; ಬೇಸಿಗೆ ರಜೆ ಹಿನ್ನೆಲೆ ತಪ್ಪಿದ ದುರಂತ
ಬೆಂಗಳೂರು, ಮೇ 30: ಬೆಂಗಳೂರಿನ ಜ್ಞಾನಭಾರತಿ ಸಮೀಪದ ವಿಶ್ವೇಶ್ವರಯ್ಯ ಲೇಔಟ್ನಲ್ಲಿರುವ ಖಾಸಗಿ ಕೌಶಲ್ಯ ಶಾಲೆಯಲ್ಲಿ ಶುಕ್ರವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಶಾಲೆಯ ಐದನೇ ಮಹಡಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಶಾಲೆಯ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಅದು ವೇಗವಾಗಿ ವ್ಯಾಪಿಸಿ ಕಟ್ಟಡದ ಮೇಲಂತಸ್ತನ್ನು ಆವರಿಸಿತು. ಘಟನಾ ಸ್ಥಳದಿಂದ ದೊರೆತ ದೃಶ್ಯಾವಳಿಗಳಲ್ಲಿ ಬೃಹತ್ ಪ್ರಮಾಣದ ಹೊಗೆ ಆಕಾಶಕ್ಕೆ ಆವರಿಸಿಕೊಂಡಿರುವುದು ಹಾಗೂ ಐದನೇ ಮಹಡಿಯಿಂದ ಜ್ವಾಲೆಗಳು ಎದ್ದಿರುವುದು ಕಂಡುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಶಾಲೆಯ ಆಡಿಟೋರಿಯಂ ಭಾಗದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ವೇಗವಾಗಿ ವ್ಯಾಪಿಸಿದ್ದರಿಂದ ಮೇಲ್ಭಾಗದ ಕೆಲವು ಭಾಗಗಳು ಸುಟ್ಟು ಕರಕಲಾಗಿವೆ.
ಘಟನೆ ಸಂಭವಿಸಿದ ವೇಳೆ ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ವಿದ್ಯಾರ್ಥಿಗಳು ಶಾಲೆಯಲ್ಲಿ ಇರಲಿಲ್ಲ. ಅಲ್ಲದೆ, ಸ್ಥಳದಲ್ಲಿದ್ದ ಸಿಬ್ಬಂದಿ ಕೂಡ ತಕ್ಷಣ ಹೊರಬಂದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಸಿಬ್ಬಂದಿ ಅಗ್ನಿಶಾಮಕ ದಳ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಟ್ಟಡಕ್ಕೆ ಉಂಟಾಗಿರುವ ಹಾನಿಯ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ. ಸದ್ಯ ಬೆಂಕಿ ಬಹುತೇಕ ನಿಯಂತ್ರಣಕ್ಕೆ ಬಂದಿದ್ದು, ತಂಪುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ.
ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭವಾಗಿದ್ದು, ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದರೂ, ತಾಂತ್ರಿಕ ಪರಿಶೀಲನೆಯ ಬಳಿಕವೇ ಅಂತಿಮ ಕಾರಣ ತಿಳಿಯಲಿದೆ.
ಶಾಲೆಗಳು ಶೀಘ್ರದಲ್ಲೇ ಪುನರಾರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಘಟನೆ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಎಬ್ಬಿಸಿದೆ.
