ಶಿಕ್ಷಕರ ದಿನಾಚರಣೆ 2026ರಿಂದ ಹೆಸರಿನ ಮುಂದೆ ‘Tr’ ಪೂರ್ವಪ್ರತ್ಯಯ ಬಳಕೆಗೆ ಕರ್ನಾಟಕ ಸರ್ಕಾರ ಅನುಮತಿ
ಬೆಂಗಳೂರು, ಸೆಪ್ಟೆಂಬರ್ 5: ಶಿಕ್ಷಣ, ಸಮಾಜ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರು ನೀಡುತ್ತಿರುವ ಕೊಡುಗೆಯನ್ನು ಗುರುತಿಸುವ ಗೌರವದ ಸಂಕೇತವಾಗಿ, ಎಲ್ಲಾ ಶಿಕ್ಷಕರು ತಮ್ಮ ಹೆಸರಿನ ಮುಂದೆ “Tr” (Teacher-ಶಿಕ್ಷಕ) ಎಂಬ ಪೂರ್ವಪ್ರತ್ಯಯವನ್ನು ಬಳಸಲು ಕರ್ನಾಟಕ ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿದೆ.
ಶಿಕ್ಷಕರ ದಿನಾಚರಣೆಯ ಅಂಗವಾಗಿ 2026ರ ಸೆಪ್ಟೆಂಬರ್ 5ರಂದು ಸರ್ಕಾರದ ಆದೇಶ ಸಂಖ್ಯೆ EP 216 SLB 2026 ಮೂಲಕ ಈ ನಿರ್ಧಾರವನ್ನು ಹೊರಡಿಸಲಾಗಿದೆ. ಇನ್ನು ಮುಂದೆ ಎಲ್ಲಾ ಶಿಕ್ಷಕರು ತಮ್ಮ ಹೆಸರಿನ ಮುಂದೆ “Tr” ಎಂಬ ಶೀರ್ಷಿಕೆಯನ್ನು ಬಳಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉತ್ತಮ ಸಮಾಜದ ನಿರ್ಮಾಣ ಮತ್ತು ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳಿಗೆ ಜ್ಞಾನ, ಅಕ್ಷರಜ್ಞಾನ, ವೈಜ್ಞಾನಿಕ ಮತ್ತು ಪ್ರಾಯೋಗಿಕ ಮಾಹಿತಿಯನ್ನು ನೀಡುವ ಮೂಲಕ ಅವರ ಬೌದ್ಧಿಕ ಬೆಳವಣಿಗೆಗೆ ಶಿಕ್ಷಕರು ಅಡಿಪಾಯ ಹಾಕುತ್ತಾರೆ ಎಂದು ಸರ್ಕಾರ ಹೇಳಿದೆ.

ಉತ್ತಮ ನಡವಳಿಕೆ, ಶಿಸ್ತು, ಪ್ರಾಮಾಣಿಕತೆ ಮತ್ತು ಪರಸ್ಪರ ಗೌರವದಂತಹ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ರೂಢಿಸುವುದರ ಜೊತೆಗೆ, ಅವರಲ್ಲಿ ಆತ್ಮವಿಶ್ವಾಸ ಬೆಳೆಸಿ ಸವಾಲುಗಳು ಮತ್ತು ವೈಫಲ್ಯಗಳನ್ನು ಎದುರಿಸುವ ಶಕ್ತಿಯನ್ನು ಶಿಕ್ಷಕರು ನೀಡುತ್ತಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ಭಯವಿಲ್ಲದೆ ಪ್ರಶ್ನಿಸುವ ಆತ್ಮಸ್ಥೈರ್ಯವನ್ನು ಮಕ್ಕಳಲ್ಲಿ ಬೆಳೆಸುವುದರ ಜೊತೆಗೆ ಸಾಂವಿಧಾನಿಕ ಮೌಲ್ಯಗಳನ್ನೂ ಶಿಕ್ಷಕರು ರೂಢಿಸುತ್ತಾರೆ ಎಂದು ಸರ್ಕಾರ ತಿಳಿಸಿದೆ.
ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಮತ್ತು ಕೌಶಲ್ಯಗಳನ್ನು ಗುರುತಿಸುವುದು, ಸೂಕ್ತ ವೃತ್ತಿಜೀವನ ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನ ನೀಡುವುದು, ಸೋಲಿನ ಸಂದರ್ಭಗಳಲ್ಲಿ ಧೈರ್ಯ ತುಂಬಿ ಸಾಧನೆಗೆ ಪ್ರೇರೇಪಿಸುವುದು ಹಾಗೂ ಮೂಢನಂಬಿಕೆ ಮತ್ತು ಅಜ್ಞಾನವನ್ನು ತೊಡೆದುಹಾಕಿ ವೈಜ್ಞಾನಿಕ ಮನೋಭಾವ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಸಾಂವಿಧಾನಿಕ ಮೌಲ್ಯಗಳನ್ನು ಹೊಂದಿರುವ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದು, ಜಾತಿ ಮತ್ತು ಧರ್ಮದ ಭೇದವಿಲ್ಲದೆ ಸಮಾನ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಸಾಮರಸ್ಯ ಬೆಳೆಸುವುದು ಹಾಗೂ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿಯೂ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಸರ್ಕಾರ ಹೇಳಿದೆ.
ವೈದ್ಯರು, ಎಂಜಿನಿಯರ್ಗಳು, ವಿಜ್ಞಾನಿಗಳು, ನಾಯಕರು ಸೇರಿದಂತೆ ವಿವಿಧ ಕ್ಷೇತ್ರಗಳ ವೃತ್ತಿಪರರನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಇದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದಲ್ಲಿ ಸುಮಾರು 4.5 ಲಕ್ಷ ಶಿಕ್ಷಕರಿದ್ದು, ಭಾರತದಲ್ಲಿ ಒಂದು ಕೋಟಿಗೂ ಹೆಚ್ಚು ಶಿಕ್ಷಕರು ಪ್ರತಿದಿನ ಮಕ್ಕಳ ಮನಸ್ಸು, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರೂಪಿಸುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.
“Tr” ಎಂಬುದು ಕೇವಲ ಎರಡು ಅಕ್ಷರಗಳಲ್ಲ, ಅದು ಶಿಕ್ಷಕರ ಜೀವಿತಾವಧಿಯ ಸೇವೆಯನ್ನು ಪ್ರತಿನಿಧಿಸುವ ಗೌರವದ ಸಂಕೇತವಾಗಿದೆ ಎಂದು ಸರ್ಕಾರ ಹೇಳಿದೆ. ಇತರರ ಬದುಕನ್ನು ರೂಪಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಶಿಕ್ಷಕರಿಗೆ ಸಮಾಜ ನೀಡುವ ಮನ್ನಣೆಯ ರೂಪವಾಗಿ ಈ ಶೀರ್ಷಿಕೆಯನ್ನು ಪರಿಗಣಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶಿಕ್ಷಕರ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ, 2026ರ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಿಂದ ಎಲ್ಲಾ ಶಿಕ್ಷಕರು ತಮ್ಮ ಹೆಸರಿನ ಮುಂದೆ “Tr” (Teacher) ಎಂಬ ಶೀರ್ಷಿಕೆಯ ಪೂರ್ವಪ್ರತ್ಯಯವನ್ನು ಬಳಸಲು ಸರ್ಕಾರ ಅನುಮತಿ ನೀಡಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಆದೇಶ ಹೊರಡಿಸಲಾಗಿದ್ದು, ಶಾಲಾ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರೌಢ) ಎಸ್. ಪ್ರಕಾಶ್ ಸಹಿ ಮಾಡಿದ್ದಾರೆ.
