ಎಂ.ಜಿ. ರಸ್ತೆಯಲ್ಲಿ ಹಲವು ಬೀದಿ ದೀಪಗಳು ಸ್ಥಗಿತ: ತಕ್ಷಣ ದುರಸ್ತಿ, 6 ವಿಭಾಗಗಳ ವರದಿಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಸೂಚನೆ
ಬೆಂಗಳೂರು: ಎಂ.ಜಿ. ರಸ್ತೆಯ ಎರಡೂ ಬದಿಗಳಲ್ಲಿ ಹಲವು ಬೀದಿ ದೀಪಗಳು ಕಾರ್ಯನಿರ್ವಹಿಸದೇ ಇರುವುದು ಹಾಗೂ ಎಲ್ಇಡಿ ಬಲ್ಬ್ಗಳು ಹಾಳಾಗಿರುವುದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ ಆರ್. ಅವರ ಸಂಜೆ ಪರಿಶೀಲನೆ ವೇಳೆ ಕಂಡುಬಂದಿದ್ದು, ದುರಸ್ತಿಗೊಂಡಿರುವ ಎಲ್ಲಾ ದೀಪಗಳನ್ನು ತಕ್ಷಣ ಸರಿಪಡಿಸುವುದರ ಜೊತೆಗೆ ಪಾಲಿಕೆಯ ಆರು ವಿಭಾಗಗಳಲ್ಲಿನ ಬೀದಿ ದೀಪಗಳ ಕಾರ್ಯನಿರ್ವಹಣೆ ಕುರಿತು ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಆದೇಶದ ಮೇರೆಗೆ, ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ. ಅವರ ನಿರ್ದೇಶನದಂತೆ ವೆಂಕಟಾಚಲಪತಿ ಆರ್. ಅವರು ಸಂಜೆ 7 ಗಂಟೆಗೆ ಎಂ.ಜಿ. ರಸ್ತೆಯ ಎರಡೂ ಬದಿಗಳಲ್ಲಿನ ಬೀದಿ ದೀಪಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.
ಪರಿಶೀಲನೆ ವೇಳೆ ಹಲವು ಬೀದಿ ದೀಪಗಳು ಕಾರ್ಯನಿರ್ವಹಿಸದೇ ಇರುವುದು ಮತ್ತು ಎಲ್ಇಡಿ ಬಲ್ಬ್ಗಳು ಹಾಳಾಗಿರುವುದನ್ನು ಗಮನಿಸಿದ ಅವರು, ದುರಸ್ತಿಯಲ್ಲಿರುವ ಎಲ್ಲಾ ವಿದ್ಯುತ್ ದೀಪಗಳನ್ನು ಪರಿಶೀಲಿಸಿ ಪಟ್ಟಿ ಸಿದ್ಧಪಡಿಸಿ, ಅವುಗಳನ್ನು ಕೂಡಲೇ ದುರಸ್ತಿಪಡಿಸಿ ಕಾರ್ಯನಿರ್ವಹಿಸುವಂತೆ ಮಾಡಲು ಎಂಜಿನಿಯರ್ಗಳಿಗೆ ಸೂಚಿಸಿದರು.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಗಾಂಧಿನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಶಾಂತಿನಗರ, ಸಿ.ವಿ. ರಾಮನ್ ನಗರ ಮತ್ತು ಶಿವಾಜಿನಗರ ಸೇರಿದಂತೆ ಆರು ವಿಭಾಗಗಳಲ್ಲಿಯೂ ಬೀದಿ ದೀಪಗಳ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸುವಂತೆ ಅಪರ ಆಯುಕ್ತರು ನಿರ್ದೇಶಿಸಿದ್ದಾರೆ.
ಸಂಜೆ 7 ಗಂಟೆಯಿಂದ ತಡರಾತ್ರಿವರೆಗೆ ಬೀದಿ ದೀಪಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ, ಕಾರ್ಯನಿರ್ವಹಿಸದ ದೀಪಗಳ ಪಟ್ಟಿ ಸಿದ್ಧಪಡಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಸುಕಿನ ಜಾವದಲ್ಲಿಯೂ ಪರಿಶೀಲನೆ ನಡೆಸುವಂತೆ ವೆಂಕಟಾಚಲಪತಿ ನಿರ್ದೇಶಿಸಿದ್ದಾರೆ.
ಆರು ವಿಭಾಗಗಳ ಕಾರ್ಯಪಾಲಕ ಎಂಜಿನಿಯರ್ಗಳ ನೇತೃತ್ವದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳು ಹಾಗೂ ಇತರ ಸಿಬ್ಬಂದಿ ಸಂಜೆ 6.30ರಿಂದ ಬೀದಿ ದೀಪಗಳ ಕಾರ್ಯನಿರ್ವಹಣೆ ಪರಿಶೀಲನೆ ಕೈಗೊಂಡಿದ್ದಾರೆ.
ಎಂ.ಜಿ. ರಸ್ತೆ ಸ್ಥಳ ಪರಿಶೀಲನೆ ವೇಳೆ ಮುಖ್ಯ ಎಂಜಿನಿಯರ್ಗಳಾದ ವಿಜಯ್ ಕುಮಾರ್ ಹರಿದಾಸ್ ಮತ್ತು ಹೇಮಲತಾ ಹಾಗೂ ಅಧೀಕ್ಷಕ ಎಂಜಿನಿಯರ್ ಚಂದ್ರಶೇಖರ್ ಉಪಸ್ಥಿತರಿದ್ದರು.
