⚫ ಜುಲೈ ಮೂರನೇ ವಾರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಜುಲೈ ಕೊನೆಯ ವಾರ ಫಲಿತಾಂಶ
⚫ ಜೂನ್ 25ರ ಹೊತ್ತಿಗೆ ಪಿಯು ಗ್ರೇಡಿಂಗ್ ಫಲಿತಾಂಶ
ಬೆಂಗಳೂರು:
ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದು ಮಾಡಲು ತೀರ್ಮಾನಿಸಲಾಗಿದೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಸೂಕ್ತ ದಿನಾಂಕಗಳಂದು ಎರಡು ದಿನಗಳ ಮಟ್ಟಿಗೆ ಅತ್ಯಂತ ಸರಳೀಕರಣಗೊಳಿಸಿ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸಮಾಜದ ವಿವಿಧ ಸ್ತರಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಸಮಾಜದ ವಿವಿಧ ಗಣ್ಯ ವ್ಯಕ್ತಿಗಳು, ಹಿಂದಿನ ಶಿಕ್ಷಣ ಸಚಿವರು, ಮಾಧ್ಯಮದ ಮಿತ್ರರು, ಸಚಿವ ಸಂಪುಟದ ಸಹೋದ್ಯೋಗಿಗಳು, ಮಾನ್ಯ ಮುಖ್ಯಮಂತ್ರಿಗಳೂ ಸೇರಿದಂತೆ ಹಲವರೊಂದಿಗೆ ಈ ಕುರಿತು ಸಮಾಲೋಚನೆ ಮಾಡಲಾಗಿದೆ ಎಂದರು.
#BreakingNews#Karnataka to go ahead with the #Class10, #SSLCboard examination in July 3rd week#EducationMinister announces that no student will be failed. Results will be declared on grading basis
— Thebengalurulive/ಬೆಂಗಳೂರು ಲೈವ್ (@bengalurulive_) June 4, 2021
more details awaited#Bangalore #Bengaluru @nimmasuresh pic.twitter.com/gWUe23erwV
ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು, ಅದೇ ಸಂದರ್ಭದಲ್ಲಿ ಅವರ ಆರೋಗ್ಯಕ್ಕೂ ಸಮಸ್ಯೆಯಾಗಬಾರದೆನ್ನುವ ಮಧ್ಯಮ ಪಥವೊಂದನ್ನು ಹುಡುಕಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಪರೀಕ್ಷೆ ನಡೆಸುವುದು ನಮ್ಮ ಪ್ರತಿಷ್ಠೆಯಾಗಬಾರದು ಆದರೆ ನಮ್ಮ ನಿಲುವು ಮಕ್ಕಳನ್ನು ಇಕ್ಕಟ್ಟಿಗೆ ಸಿಕ್ಕಿಸಬಾರದೆನ್ನುವ ಪ್ರಜ್ಞೆ ನಮ್ಮ ನಿರ್ಧಾರಗಳನ್ನು ನಿಯಂತ್ರಿಸಿದೆ ಎಂದು ಅವರು ಹೇಳಿದರು.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ದಾಖಲಾಗಿರುವ ದ್ವಿತೀಯ ಪಿಯುಸಿ ಹೊಸ ವಿದ್ಯಾರ್ಥಿಗಳ ಫಲಿತಾಂಶವನ್ನು ಅವರು ಈ ಹಿಂದೆ ಪ್ರಥಮ ಪಿಯುಸಿಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಅಂಕಗಳನ್ನು ನೀಡಿ ಪ್ರಕಟಗೊಳಿಸಲು ತೀರ್ಮಾನಿಸಲಾಗಿದೆ. ಈ ಕುರಿತಂತೆ ಇಲಾಖೆಯು ಮುಂದಿನ ದಿನಗಳಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಿದೆ ಹಾಗೂ ಜೂನ್ ಮಾಸಾಂತ್ಯಕ್ಕೆ ಫಲಿತಾಂಶ ಪ್ರಕಟಣೆ ಮಾಡಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಈ ರೀತಿ ನೀಡಿದ ಫಲಿತಾಂಶವು ಯಾವುದೇ ವಿದ್ಯಾರ್ಥಿಗೆ ತೃಪ್ತಿಕರವಾಗದೇ ಇದ್ದಲ್ಲಿ ಕೋವಿಡ್ ಅಲೆ ನಿಯಂತ್ರಣಕ್ಕೆ ಬಂದ ನಂತರ ಇಲಾಖೆಯು ನಡೆಸುವ ಪರೀಕ್ಷೆಗೆ ಹಾಜರಾಗಬಹುದು ಎಂದ ಸಚಿವರು ಪ್ರಸ್ತುತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳ ಫಲಿತಾಂಶವನ್ನು ಮೇಲೆ ತಿಳಿಸಿದಂತೆ ಪ್ರಕಟಿಸಲು ಯಾವುದೇ ಸ್ಪಷ್ಟ ದಾಖಲೆಗಳು ಲಭ್ಯವಿಲ್ಲದ ಕಾರಣ ಈ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇಲಾಖೆ ನಡೆಸುವ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ ಎಂದು ಅವರು ತಿಳಿಸಿದರು.
#BreakingNews#Karnataka announces not to conduct #PUC2nd, #Class12exam. Students to be passed as per grading system — A, B & C based on past performance. Students will have rights to challenge
— Thebengalurulive/ಬೆಂಗಳೂರು ಲೈವ್ (@bengalurulive_) June 4, 2021
PUC 1st students will also be passed on past performance#Bangalore #Bengaluru pic.twitter.com/KNF9AiFQR4
ಎಸ್ಎಸ್ ಎಲ್ ಸಿ ಪರೀಕ್ಷೆಗಳ ವಿವರ:
ಕೋವಿಡ್-19ರ ಪರಿಸ್ಥಿತಿಯಲ್ಲಿ 06 ವಿಷಯಗಳಿಗೆ ಸುದೀರ್ಘ ಅವಧಿಗೆ ಪರೀಕ್ಷೆಗಳನ್ನು ನಡೆಸಿದಲ್ಲಿ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ 06 ದಿನಗಳು ಬರುವುದು ಕಷ್ಟಸಾಧ್ಯವಾಗಿರುತ್ತದೆ. ಹಿಂದಿನ ಸಾಲಿನ ಕಲಿಕಾ ಗುಣಮಟ್ಟದ ಮಾನದಂಡ ನಮ್ಮಲ್ಲಿ ಇಲ್ಲದಿರುವ ಕಾರಣ ಮತ್ತು ಮುಂದಿನ ಉನ್ನತ ಶಿಕ್ಷಣದ ವ್ಯಾಸಂಗಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಯು ಮುಖ್ಯವೆನ್ನುವ ಸಮಾನ ಅಭಿಪ್ರಾಯಗಳ ಕಾರಣ, ವಿದ್ಯಾರ್ಥಿಗಳ ಸುರಕ್ಷತಾ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಸ್ತುತ ಕೋವಿಡ್-19ರ ಪರಿಸ್ಥಿತಿ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪ್ರಸ್ತುತ ಸಾಲಿಗೆ ಸರಳೀಕರಿಸಿ ಕೇವಲ ಎರಡು ದಿನಗಳಲ್ಲಿ (ಒಂದು ದಿನ ಕೋರ್ ವಿಷಯಗಳು ಮತ್ತೊಂದು ದಿನ ಭಾಷಾ ವಿಷಯಗಳು) ಪರೀಕ್ಷೆಯನ್ನು ನಡೆಸಲಾಗುತ್ತದೆ.
ಕೇವಲ ಬಹು ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆಯನ್ನು ನಡೆಸಲಾಗುವುದು. ಉತ್ತರ ಪತ್ರಿಕೆಯು OMR (Optical Mark Reader) ರೂಪದಲ್ಲಿರುವುದು. ಪ್ರತಿ ವಿಷಯಕ್ಕೆ ಗರಿಷ್ಠ 40 ಅಂಕಗಳಿಗೆ ಸೀಮಿತಗೊಳಿಸಿ ಪರೀಕ್ಷೆಯನ್ನು ನಡೆಸಲಾಗುವುದು.
ಒಟ್ಟು 03 ಕೋರ್ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆಪತ್ರಿಕೆ ನೀಡಲಾಗುವುದು. ಇದರಲ್ಲಿ ಭಾಗ- 1 ಗಣಿತ, ಭಾಗ- 2 ವಿಜ್ಞಾನ ಮತ್ತು ಭಾಗ- 3ರಲ್ಲಿ ಸಮಾಜ ವಿಜ್ಞಾನದ ಪ್ರಶ್ನೆಗಳಿರುತ್ತವೆ. ಪರೀಕ್ಷಾ ಸಮಯವನ್ನು ಬೆಳಿಗ್ಗೆ 10.30 ರಿಂದ 01.30 ಗಂಟೆಯವರೆಗೆ ನಿಗಧಿಪಡಿಸಿ, ಒಟ್ಟು 3 ಗಂಟೆಯ ಕಾಲಾವಕಾಶ ಇರಲಿದೆ.
ಹಾಗೆಯೇ ಒಟ್ಟು 03 ಭಾಷಾ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆಪತ್ರಿಕೆ ನೀಡಲಾಗುವುದು. ಇದರಲ್ಲಿ ಭಾಗ -1 ಪ್ರಥಮ ಭಾಷೆ, ಭಾಗ- 2 ದ್ವಿತೀಯ ಭಾಷೆ ಮತ್ತು ಭಾಗ -3ರಲ್ಲಿ ತೃತೀಯ ಭಾಷೆಯ ಪ್ರಶ್ನೆಗಳಿರುತ್ತವೆ. ಪರೀಕ್ಷಾ ಸಮಯವನ್ನು ಅಪರಾಹ್ನ 10.30 ರಿಂದ 01.30 ಗಂಟೆಯವರೆಗೆ ನಿಗದಿಪಡಿಸಿ, ಒಟ್ಟು 3.00 ಗಂಟೆಯ ಕಾಲಾವಕಾಶ ನೀಡಲಾಗುವುದು.
ಕೋರ್ ಮತ್ತು ಭಾಷಾ ವಿಷಯಗಳ ಪರೀಕ್ಷೆಗಳ ನಡುವೆ ಮೂರು ದಿನಗಳ ಅಂತರ ನೀಡಲಾಗುವುದು. ಎಲ್ಲ ಮಾದರಿಯ ವಿದ್ಯಾರ್ಥಿಗಳೂ ಇದೇ ವಿಧಾನ ಅನ್ವಯವಾಗುತ್ತದೆ.
ಪ್ರತಿ ವಿಷಯಕ್ಕೆ CCERF, CCERR ವಿದ್ಯಾರ್ಥಿಗಳಿಗೆ ಗರಿಷ್ಠ 80 ಅಂಕಗಳಿಗೆ ಮತ್ತು CCEPF, CCEPR, NSR, NSPR ವಿದ್ಯಾರ್ಥಿಗಳಿಗೆ ಗರಿಷ್ಠ 100 ಅಂಕಗಳಿಗೆ ಪರಿವರ್ತಿಸಿ, ಪ್ರತಿ ವಿಷಯದಲ್ಲಿ ವಿದ್ಯಾರ್ಥಿಯು ಪಡೆದ ಅಂಕಗಳನ್ನು ಅದಕ್ಕೆ ಅನುಗುಣವಾಗಿ ಪರಿವರ್ತಿಸಲಾಗುವುದು. ಇದರ ಜೊತೆಗೆ CCERF, CCERR ವಿದ್ಯಾರ್ಥಿಗಳಿಗೆ ಅಂತರಿಕ ಅಂಕಗಳನ್ನು ಸೇರ್ಪಡಿಸಿ ಪ್ರಸ್ತುತ ನಿಯಮದಂತೆ ಫಲಿತಾಂಶ ಪ್ರಕಟಿಸಲಾಗುವುದು.
ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿಧಧ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣತಾ ಅಂಕಗಳನ್ನು ನೀಡಿ ಉತ್ತೀರ್ಣಗೊಳಿಸಲಾಗುವುದು. ಮುಂದುವರೆದು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂಕಗಳ ಆಧಾರದ ಮೇಲೆ ಎ, ಬಿ ಹಾಗೂ ಸಿ ಗ್ರೇಡ್ ಗಳನ್ನು ನೀಡಲಾಗುವುದು.
ಪರೀಕ್ಷೆಗೆ ಮುಂಚಿತವಾಗಿ ಮಾದರಿ ಪ್ರಶ್ನೆಪತ್ರಿಕೆಯನ್ನು ಮಂಡಳಿ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ಹಾಗೆಯೇ ಶಾಲೆಗಳಿಗೆ ತಲುಪಿಸಲಾಗುವುದು.
ಹಿಂದಿನ ಸಾಲುಗಳಲ್ಲಿ ಸುಮಾರು 3000 ಪರೀಕ್ಷಾ ಕೇಂದ್ರಗಳನ್ನು ರಚಿಸಿ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಪ್ರಸ್ತುತ ವರ್ಷದಲ್ಲಿ ಪರೀಕ್ಷಾ ಕೇಂದ್ರಗಳನ್ನು ದ್ವಿಗುಣಗೊಳಿಸಿ, ಅಂದರೆ ಸುಮಾರು 6000 ಅದಕ್ಕೂ ಮೇಲ್ಪಟ್ಟು ಪರೀಕ್ಷಾ ಕೇಂದ್ರಗಳನ್ನು ರಚಿಸಿ ಪರೀಕ್ಷೆ ನಡೆಸಲಾಗುವುದು.
ಒಂದು ಕೊಠಡಿಗೆ ಗರಿಷ್ಠ 12 ವಿದ್ಯಾರ್ಥಿಗಳಂತೆ, ಒಂದು ಡೆಸ್ಕ್ ಗೆ ಕೇವಲ ಒಬ್ಬ ವಿದ್ಯಾರ್ಥಿಯಂತೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳ ನಡುವೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಲಾಗುವುದು.
ಹಾಸ್ಟೆಲ್ಗಳ/ವಸತಿ ಶಾಲೆಗಳ/ವಲಸೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಬದಲಾವಣೆ ಅವಕಾಶ ಕಲ್ಪಿಸಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಾಪಾಡಲು ಕಳೆದ ಸಾಲಿನ ಎಸ್ಓಪಿ ಯನ್ನು ಸೂಕ್ತ ಮಾರ್ಪಾಡುಗಳೊಂದಿಗೆ, ಆರೋಗ್ಯ ಇಲಾಖೆಯ ಸಲಹೆಯೊಂದಿಗೆ ಪರೀಕ್ಷೆ ನಡೆಸಲಾಗುವುದು.
ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿಯವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗುವುದು.
ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಶಿಕ್ಷಕರು. ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಎನ್95 ಮಾಸ್ಕ್ನ್ನು ಕಡ್ಡಾಯವಾಗಿ ಧರಿಸಲು ವ್ಯವಸ್ಥೆ ಮಾಡಲಾಗುವುದು.
ಆರೋಗ್ಯ ಇಲಾಖೆಯ ಸಲಹೆ ಪಡೆದು 20 ದಿನಗಳ ಮುಂಚಿತವಾಗಿ ಪರೀಕ್ಷೆಯು ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಪಿಯು ನಿರ್ದೇಶಕಿ ಆರ್. ಸ್ನೇಹಲ್, ಸಾಶಿಇ ಆಯುಕ್ತ ವಿ. ಅನ್ಬುಕುಮಾರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.