Home Uncategorized ಫಲಿತಾಂಶ ಮತ್ತು ಕಾರ್ಯಾನುಷ್ಠಾನ ಕೇಂದ್ರಿತ ಸರ್ಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಫಲಿತಾಂಶ ಮತ್ತು ಕಾರ್ಯಾನುಷ್ಠಾನ ಕೇಂದ್ರಿತ ಸರ್ಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

63
0
Karnataka Chief Minister announces new projects in memory of country's freedom Amrita Mahotsav

ಬೆಂಗಳೂರು:

ನನ್ನ ಸರ್ಕಾರ ಫಲಿತಾಂಶ ಮತ್ತು ಕಾರ್ಯಾನುಷ್ಠಾನ ಕೇಂದ್ರಿತವಾಗಿರಲಿದೆ. ಸಮಾಜದ ಕೊನೆಯ ಹಂತದವರೆಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸಲು ಯತ್ನಿಸಲಾಗುವುದು.

75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ ನಾಡಿನ ಜನತೆಗೆ ನೀಡಿದ ಸ್ವಾತಂತ್ರ್ಯೋತ್ಸವ ಸಂದೇಶ.

“ಅಭಿವೃದ್ಧಿ ಅಂದರೆ ಅಂಕಿ-ಅಂಶಗಳಲ್ಲ. ನಾಡಿನ ಪ್ರತಿಯೊಂದು ಕುಟುಂಬ, ಪ್ರತಿಯೊಬ್ಬ ವ್ಯಕ್ತಿಯ ಬದುಕು ಹಸನಾಗಬೇಕು. ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಯೊಂದಿಗೆ ಆರೋಗ್ಯ, ಶಿಕ್ಷಣ, ಉದ್ಯೋಗವನ್ನು ಒದಗಿಸುವುದು ನಮ್ಮ ಆದ್ಯತೆ” ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಮ್ಮ ಸರ್ಕಾರಕ್ಕೆ ಕೇವಲ 20 ತಿಂಗಳ ಅಧಿಕಾರವಧಿ ಇದೆ. ನಮ್ಮ ಗುರಿ ಸಾಧನೆಗೆ ದೀರ್ಘಾವಧಿ ಮತ್ತು ಅಲ್ಪಾವಧಿ ಯೋಜನೆಗಳನ್ನು ರೂಪಿಸಲಾಗುವುದು. ಆಡಳಿತದಲ್ಲಿ ಅಭಿವೃದ್ಧಿ ಜನರ ಸುತ್ತಲೂ ಇರಬೇಕು. ಇಂತಹ ಜನಸ್ನೇಹಿ ಸರ್ಕಾರಿ ವ್ಯವಸ್ಥೆ ರೂಪಿಸುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಕಾಲ ಯೋಜನೆಗೆ ಇನ್ನಷ್ಟು ಕಾಯಕಲ್ಪ ಮಾಡಲಾಗುವುದು ಎಂದು ಅವರು ನುಡಿದರು.

ಮುಖ್ಯಮಂತ್ರಿಯವರ ಸ್ವಾತಂತ್ರ್ಯೋತ್ಸವ ಸಂದೇಶದ ಮುಖ್ಯಾಂಶಗಳು:

• ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹೃದಯಪೂರ್ವಕ ಶುಭಾಶಯಗಳು. ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಜನತೆಗೆ ಸಂದೇಶ ನೀಡುವ ಅವಕಾಶ ಲಭಿಸಿದ್ದು, ನನ್ನ ಸೌಭಾಗ್ಯ.
• ಕರ್ನಾಟಕದ ಸ್ವಾತಂತ್ರ್ಯ ಹೋರಾಟ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ಸಿಪಾಯಿದಂಗೆಗೆ 40 ವರ್ಷ ಮೊದಲೇ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮೊದಲಾದವರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಇತರರಿಗೆ ಸ್ಫೂರ್ತಿ ನೀಡುವಂತದ್ದು.
• ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣನ ಜನ್ಮದಿನವನ್ನು ಅಧಿಕೃತವಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.
• ಸಾಹುಕಾರ ಚೆನ್ನಯ್ಯ, ರಾಣಿ ಅಬ್ಬಕ್ಕ, ಸ್ವಾಮಿ ರಮಾನಂದ ತೀರ್ಥರ ಕೊಡುಗೆ ಅನನ್ಯವವಾದದುಉ. ಇವರ ಸ್ಮರಣೆ ನಮ್ಮ ಕರ್ತವ್ಯ.
• ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯತೆ, ರಾಷ್ಟ್ರಾಭಿಮಾನ ತುಂಬಿ ದೇಶ ಕಟ್ಟಲು ಜನರನ್ನು ಪ್ರೇರೇಪಿಸಿ, ನಿಗದಿತ ಗುರಿಯಿಟ್ಟು ಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ವಿದ್ಯುದೀಕರಣ, ಸ್ವಚ್ಛತೆಯಿಂದ ಬಾಹ್ಯಾಕಾಶ ಯೋಜನೆಯ ವರೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
• ಪಿಎಂ-ಕಿಸಾನ್, ಆಯುಷ್ಮಾನ್ ಭಾರತ್, ಪ್ರಧಾನ್ ಮಂತ್ರಿ ಆವಾಸ್ ಯೋಜನಾ ಮತ್ತಿತರ ಜನಪರ ಯೋಜನೆಗಳು ಜನರ ಜೀವನದಲ್ಲಿ ಹೊಸ ಚೈತನ್ಯ ತುಂಬಿದೆ.
• ರಾಜ್ಯದಲ್ಲಿ ಇಂದಿನಿಂದ ನವ ಕರ್ನಾಟಕ ನಿರ್ಮಾಣದ ಘೋಷಣೆ ಮಾಡುತ್ತಿದ್ದೇನೆ. ಹೊಸ ಚಿಂತನೆ, ಹೊಸದಾರಿ, ಹೊಸ ದಿಕ್ಸೂಚಿಯೊಂದಿಗೆ, ಮಾನವ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲಗಳನ್ನು ಜನಹಿತಕ್ಕಾಗಿ ಬಳಕೆ ಮಾಡಿಕೊಂಡು ಕೃಷಿ, ಉತ್ಪಾದನಾ ವಲಯ ಮತ್ತು ಸೇವಾ ವಲಯಗಳ ವೈಜ್ಞಾನಿಕ ಅಭಿವೃದ್ಧಿ ಮಾಡಲಾಗುವುದು.
• ಕೃಷಿ ಬಹಳ ಮುಖ್ಯ ವಲಯ. ನಾವು ಹಸಿರು ಕ್ರಾಂತಿ ನೋಡಿದ್ದೇವೆ. ಇಂದು ರೈತರ ಬದುಕಿನಲ್ಲಿ ಕ್ರಾಂತಿ ಆಗಬೇಕಿದೆ. ರೈತ ಕೇಂದ್ರಿತ ಅಭಿವೃದ್ಧಿಗೆ ಒತ್ತು ನೀಡಲಾಗುವುದು.
• ಕೃಷಿ ವಲಯದಲ್ಲಿ ಶೇ 1, ಉತ್ಪಾದನಾ ವಲಯದಲ್ಲಿ ಶೇ. 4 ಹಾಗೂ ಸೇವಾ ವಲಯದಲ್ಲಿ ಶೇ. 10ರಷ್ಟು ಬೆಳವಣಿಗೆ ಇದೆ. ನಮಗೆ ಇದರ ಅರಿವಿದೆ.
• ಆಳುವುದು ಬೇರೆ, ಆಡಳಿತ ಬೇರೆ. ಇಂದು ಆಳುವವರು ಆಡಳಿತ ನಡೆಸುತ್ತಿದ್ದಾರೆ. ಆಡಳಿತ ನಡೆಸುವವರು ಆಳುತ್ತಿದ್ದಾರೆ. ಈ ವ್ಯತ್ಯಾಸ ಅರಿತು ರಾಜಕೀಯ ನಾಯಕತ್ವ ಹಾಗೂ ಇಚ್ಛಾಶಕ್ತಿಯೊಂದಿಗೆ ಜನರ ಮನೆಬಾಗಿಲಿಗೇ ಸರ್ಕಾರದ ಸೇವೆ ಒದಗಿಸಲಾಗುವುದು.
• ಕಳೆದ ಒಂದೂವರೆ ವರ್ಷಗಳಿಂದ ಕರೋನಾ ಸಾಂಕ್ರಾಮಿಕದ ಸವಾಲನ್ನು ಎದುರಿಸುತ್ತಿದ್ದೇವೆ. ನಿಕಟಪೂರ್ವ ಮುಖ್ಯಮಂತ್ರಿಗಳು ಪರಿಶ್ರಮಪಟ್ಟು, ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಪಡಿಸಿ, ಸಮರ್ಥವಾಗಿ ಎದುರಿಸಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದರೊಂದಿಗೆ ಅಭಿವೃದ್ಧಿ ಕಾರ್ಯಗಳನ್ನೂ ಅವರು ಕೈಗೆತ್ತಿಕೊಂಡಿದ್ದರು. ಇದೇ ಹಾದಿಯಲ್ಲಿ ನಮ್ಮ ಸರ್ಕಾರವೂ ಮುಂದುವರೆಯಲಿದೆ.
• ನಮ್ಮ ಸರ್ಕಾರವ ಕೋವಿಡ್ ನಿರ್ವಹಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ನಾನು ಸ್ವತಃ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನ, ನಮ್ಮ ಎಲ್ಲ ಶಕ್ತಿ ಸಾಮಥ್ರ್ಯ ಬಳಸಿ, ಹೆಚ್ಚಿನ ಆತ್ಮವಿಶ್ವಾಸದಿಂದ ಕೋವಿಡ್ ನಿರ್ವಹಣೆ ಮಾಡಲಾಗುವುದು.
• ಅಧಿಕಾರ ಸ್ವೀಕರಿಸಿದ ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳಲಾಗಿದೆ.
• ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಸುಮಾರು ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಸುಮಾರು 18 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
• ಸಂಧ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ಅಂಗವಿಕಲರ ಮಾಸಾಶನ ಮೊತ್ತ ಹೆಚ್ಚಿಸಲಾಗಿದ್ದು, 34 ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ.
• ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಸರ್ಕಾರದ ಆರ್ಥಿಕ ನೀತಿಯು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು,, ಮಹಿಳೆಯರು ಹಾಗೂ ಯುವಕರ ವೈಯಕ್ತಿಕ ಆದಾಯ ಹೆಚ್ಚಿಸಲು ಆದ್ಯತೆ ನೀಡಲಿದೆ.
• ಹೆಣ್ಣುಮಕ್ಕಳ ಆದಾಯ ಹೆಚ್ಚಿಸುವುದರೊಂದಿಗೆ ನಾರೀ ಶಕ್ತಿಯನ್ನು ರಾಜ್ಯದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುವುದು.
• ಕೈಗಾರಿಕಾ ವಲಯದಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ. ಸ್ವಾತಂತ್ರ್ಯಾನಂತರ ಹಿರಿಯರ ನೇತೃತ್ವದಲ್ಲಿ ಹಲವು ಕಾರ್ಖಾನೆಗಳು ಸ್ಥಾಪನೆಯಾದವು. ಸರ್ ಎಂ.ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕಾಗದ, ಕಬ್ಬಿಣ ಮತ್ತು ಉಕ್ಕು, ಸಾಬೂನು ಹೀಗೆ ಹಲವಾರು ರಂಗದಲ್ಲಿ ಕಾರ್ಖಾನೆಗಳ ಸ್ಥಾಪನೆಯಾದವರು. ಕರಾವಳಿ ಭಾಗದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಅಭಿವೃದ್ಧಿ ಹೊಂದಿದೆ.
• ಈ ಪರಂಪರೆಯನ್ನು ಮುಂದುವರೆಸುತ್ತಾ ರಾಜ್ಯಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಿಸಲು ಇನ್‍ವೆಸ್ಟ್ ಕರ್ನಾಟಕ, ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುವುದು. ಆ ಮೂಲಕ ಹೆಚ್ಚು ಬಂಡವಾಳ ಆಕರ್ಷಿಸುವುದರೊಂದಿಗೆ ಹೆಚ್ಚು ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಲಾಗುವುದು.
• ರಾಜ್ಯದ ಅಭಿವೃದ್ಧಿಯಲ್ಲಿ ಕಾನೂನು ಸುವ್ಯವಸ್ಥೆಯ ಪಾತ್ರವೂ ಮುಖ್ಯವಾದುದು. ಕರ್ನಾಟಕ ರಾಜ್ಯ ಪೊಲೀಸರು ತಮ್ಮ ಕಾರ್ಯಕ್ಷಮತೆ, ಪ್ರಾಮಾಣಿಕತೆ ಹಾಗೂ ದಕ್ಷತೆಗೆ ದೇಶದಲ್ಲೇ ನಂ. 1 ಎನಿಸಿಕೊಂಡಿದ್ದಾರೆ. ಹಲವು ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
• ನಾಡು, ನುಡಿ, ನೆಲ, ಜಲ, ಜನರ ಹಿತರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3 ನ್ನು ಅನುಷ್ಠಾನಗೊಳಿಸಿ 5.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ.
• ಮೇಕೆದಾಟು, ಮಹದಾಯಿ ಯೋಜನೆಗಳ ಅನುಮೋದನೆಗೆ ಕೇಂದ್ರ ಸರ್ಕಾರದೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅನುಮೋದನೆ ಪಡೆದು ಯೋಜನೆ ಪ್ರಾರಂಭಿಸಲಾಗುವುದು.
• ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ಆಗಸ್ಟ್ 15, 2023ರ ವರೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಆಗಲಿದೆ.
• ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗೆ ಅಮೃತ ಗ್ರಾಮ ಪಂಚಾಯತಿಗಳು, ಅಮೃತ ಗ್ರಾಮೀಣ ವಸತಿ ಯೋಜನೆ ಅಮೃತ ರೈತ ಉತ್ಪಾದಕ ಸಂಸ್ಥೆಗಳು, ಅಮೃತ ನಿರ್ಮಲ ನಗರ, ಅಮೃತ ಶಾಲಾ ಸೌಲಭ್ಯ ಯೋಜನೆ, ಅಮೃತ ಅಂಗನವಾಡಿ ಕೇಂದ್ರಗಳು, ಅಮೃತ ಸ್ವಸಹಾಯ ಕಿರು ಉದ್ದಿಮೆಗಳು, ಅಮೃತ ಸಮುದಾಯ ಅಭಿವೃದ್ಧಿ ಯೋಜನೆ, ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ, ಅಮೃತ ಕೌಶಲ್ಯ ತರಬೇತಿ ಯೋಜನೆ, ಸ್ಟಾರ್ಟಪ್ ಉತ್ತೇಜನ ಯೋಜನೆ, ಅಮೃತ ನಗರೋತ್ಥಾನ, ಅಮೃತ ಕ್ರೀಡಾ ದತ್ತು ಯೋಜನೆ ಮೊದಲಾದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು:
• ರಾಜ್ಯದ ಮುಖ್ಯಮಂತ್ರಿಯಾಗಿ ಮುಂದಿನ ದಿನಗಳಲ್ಲಿ ಹೊಸ ಬದಲಾವಣೆ ತರುವ ಕನಸು, ಆತ್ಮವಿಶ್ವಾಸ ಹೊಂದಿದ್ದೇನೆ. ಹಲವರು ನನ್ನ ಬಗ್ಗೆ ವ್ಯಕ್ತಪಡಿಸಿರುವ ಅನುಮಾನ, ಟೀಕೆಗಳು ನನಗೆ ಆಶೀರ್ವಾದ ಎಂದು ಭಾವಿಸಿದ್ದೇನೆ. ಅನುಮಾನ, ಟೀಕೆಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಕಾರ್ಯ ನಿರ್ವಹಿಸುವೆನು.
• ಪ್ರತಿಯೊಬ್ಬ ಕನ್ನಡಿಗ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು. ಗಡಿ ಇರಲಿ, ನಾಡಿರಲಿ, ಜನರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಗಡಿ ಕಾಯುವ ಸೈನಿಕರಿಗೆ, ಹೊಲದಲ್ಲಿ ಬೆವರು ಸುರಿಸಿ ದುಡಿಯುವ ರೈತರಿಗೆ ಹಾಗೂ ಕಾರ್ಮಿಕರಿಗೆ ನನ್ನ ಸಲಾಂ.
• ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದಂತೆ, ಜೈ ಜವಾನ್, ಜೈ ಕಿಸಾನ್ , ಜೈ ವಿಜ್ಞಾನ್ ಎಂಬ ತತ್ವ ನಮ್ಮದು. 21ನೇ ಶತಮಾನ ಜ್ಞಾನದ ಶತಮಾನ. ಕರ್ನಾಟಕ ಜ್ಞಾನ ಭರಿತವಾದುದು. ಜ್ಞಾನಾಧಾರಿತ ಉದ್ಯಮಗಳು ಮುಂಚೂಣಿಯಲ್ಲಿವೆ. ಅದರಲ್ಲಿಯೂ ಬೆಂಗಳೂರು ನಗರ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ.
• ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಅಮೃತ ನಗರೋತ್ಥಾನ ಪ್ರಾರಂಭಿಸಲಾಗುವುದು. ನಗರದ ಸುಗಮ ಸಂಚಾರಕ್ಕೆ 12 ಹೈ ಡೆನ್ಸಿಟಿ ಕಾರಿಡಾರ್ ಅಭಿವೃದ್ಧಿ, ಫ್ಲೈ ಓವರ್, ರಿಂಗ್ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುವುದು. ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನ 75 ಕೆರೆ/ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗುವುದು.
• ರಾಜಧಾನಿಯಿಂದ ಗಡಿಯವರೆಗೆ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಿ, ಅಭಿವೃದ್ಧಿ ಕೈಗೊಳ್ಳಲಾಗುವುದು.
• ನಾಡು ನುಡಿಯ ಶ್ರೀಮಂತಿಕೆಗೆ ಪ್ರಾಮುಖ್ಯ ನೀಡಲಾಗುವುದು. ನಾಡಿನ ಸಾಹಿತ್ಯ ಸಂಸ್ಕೃತಿ ಉಳಿಸಲು ಬದ್ಧ.
• ಮುಂದಿನ 25 ವರ್ಷಗಳಲ್ಲಿ ಕರ್ನಾಟಕ ವಿಶ್ವದಲ್ಲೇ ನಂ. 1 ರಾಷ್ಟ್ರವಾಗಿ ಅಭಿವೃದ್ಧಿ ಹೊಂದಬೇಕೆನ್ನುವ ಆಶಯ ನಮ್ಮದು.
• ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧನೆಗೆ ಭದ್ರ ಬುನಾದಿ ಹಾಕುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ.
• ಕೆಲವೇ ದಿನಗಳಲ್ಲಿ ಈ ಬದಲಾವಣೆ ಪ್ರಾರಂಭವಾಗಲಿದೆ. ಇದಕ್ಕೆ ನಿಮ್ಮ ಸಹಾಯ ಸಹಕಾರ ಅತಿ ಅಗತ್ಯ.

LEAVE A REPLY

Please enter your comment!
Please enter your name here