Home ಬೆಂಗಳೂರು ನಗರ ಜನಪ್ರಿಯವಾಗುವುದಕ್ಕಿಂತ ಜನೋಪಯೋಗಿ ಆಗುವುದು ಬಹಳ ಮುಖ್ಯ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಜನಪ್ರಿಯವಾಗುವುದಕ್ಕಿಂತ ಜನೋಪಯೋಗಿ ಆಗುವುದು ಬಹಳ ಮುಖ್ಯ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

16
0

ಬೆಂಗಳೂರು:

ಜನಪ್ರಿಯವಾಗುವುದು ಸುಲಭ. ಜನಪ್ರಿಯವಾಗುವುದಕ್ಕಿಂತ ಜನೋಪಯೋಗಿ ಆಗುವುದು ಬಹಳ ಮುಖ್ಯ. ಜನೋಪಯೋಗಿ ಆಡಳಿತವನ್ನು ನಾವು ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಮಂಡಲದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ ದಲ್ಲಿ ಇಂದು ಅವರು ಪಾಲ್ಗೊಂಡು ಮಾತನಾಡುತ್ತಿದ್ದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿವೆ. ದೇಶವೊಂದಕ್ಕೆ 75 ಆದರೆ, ಬಾಲ್ಯವನ್ನು ಮುಗಿಸಿ ಯೌವ್ವನಕ್ಕೆ ಕಾಲಿರಿಸಿದಂತೆ. ಯೌವ್ವನದ ನವ ಚೇತನ, ಹೊಸ ಆಸೆಗಳು, ತುಡಿತ , ಕನಸು, ಸಾಧಿಸುವ ಹಂಬಲವಿರುವ ಘಟ್ಟಕ್ಕೆ ದೇಶ ತಲುಪಿದೆ.

Cm at August 15 event in Vidhana Soudha

ಸ್ವಾತಂತ್ರ್ಯ ಮನುಷ್ಯನ ಸಹಜ ಗುಣಧರ್ಮ. ಬ್ರಿಟಿಷರು ಅಂದು ಅಂಥ ಪ್ರಮುಖ ಗುಣಧರ್ಮ ವನ್ನು ಹತ್ತಿಟ್ಟಿದ್ದರು ಎಂದರೆ, ಸ್ವಾತಂತ್ರ್ಯ ಪೂರ್ವದ ದೇಶ ಹೇಗಿತ್ತು ಎಂದು ಆಲೋಚಿಸಬೇಕು. ಸ್ವಾತಂತ್ರ್ಯ ಹೋರಾಟಕ್ಕೆ ಧಾರ್ಮಿಕ ಚಳವಳಿಯ ಹಿನ್ನೆಲೆ ಇದೆ. ಅರವಿಂದರು, ಗೋಪಾಲ ಕೃಷ್ಣ ಗೋಖಲೆ, ಲೋಕಮಾನ್ಯ ತಿಲಕ್, ವೀರ ಸಾವರ್ಕರ್ ಮುಂತಾದವರು ಹೋರಾಟಕ್ಕೆ ಸಾತ್ವಿಕ ಚಿಂತನೆ ನೀಡಿದರು. ಮುಂದೆ ಅದಕ್ಕೆ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್, ಕಾರ್ಯಾಚರಣೆ ನೀಡಿದರೆ, ಗಾಂಧೀಜಿ ಅಹಿಂಸೆ ಮತ್ತು ಸತ್ಯ ಎಂಬ ಎರಡು ಅಸ್ತ್ರ ಗಳನ್ನು ನೀಡಿದರು. ಸಾತ್ವಿಕತೆ, ಕಾರ್ಯಾಚರಣೆ, ಸತ್ಯ ಅಹಿಂಸೆಗಳು, ನಮಗೆ ಸ್ವಾತಂತ್ರ್ಯ ತಂದುಕೊಟ್ಟಿವೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರು , ಬಾರ್ಡೋಲಿ ರೈತ ಸತ್ಯಾಗ್ರಹ ಮತ್ತು ಚಂಪಾರನ್ , ಕಾರ್ಮಿಕರ ಚಳವಳಿಗಳು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇವು ಸ್ವಾತಂತ್ರ್ಯ ಹೋರಾಟಕ್ಕೆ ಬಹು ದೊಡ್ಡ ತಿರುವು ನೀಡಿದವು ಎಂದರು.

ದೇಶದ ಪ್ರಗತಿಯಲ್ಲಿ ಕರ್ನಾಟಕದ ಪಾಲು ದೊಡ್ಡದಿದೆ. ಕರ್ನಾಟಕ ವಿಧಾನ ಮಂಡಲ ಹಲವಾರು ದಶಕಗಳಿಂದ ರಾಜ್ಯದಲ್ಲಿ ಬೆಳವಣಿಗೆ ಮತ್ತು ಬದಲಾವಣೆ ತಂದಿದೆ.

Cm at August 15 event in Vidhana Soudha2

ವಿಧಾನಸೌಧ ಪ್ರಜಾಪ್ರಭುತ್ವದ ದೇವಾಲಯ. ಸಂವಿಧಾನ ಈ ದೇವಾಲಯಕ್ಕೆ ಭಗವದ್ಗೀತೆ ಇದ್ದಂತೆ. ವಿಧಾನ ಸಭೆಯ ಪರಂಪರೆ, ಸಂವಿಧಾನ ಬದ್ಧ ಆಡಳಿತವನ್ನು ನಾವು ಕಾಪಾಡಿಕೊಂಡು ಹೋಗಬೇಕಿದೆ ಎಂದು‌ ಸಿಎಂ ಹೇಳಿದರು.

ಕರ್ನಾಟಕದಲ್ಲಿ ಅನೇಕ ಚಿಂತಕರಿದ್ದಾರೆ. 11 ನೇ ಶತಮಾನದಲ್ಲಿಯೇ ಜನಪರ ಚಿಂತನೆ ಮಾಡಿ ಜನೋಪಯೋಗಿ ಶಾಸನ ರಚಿಸಿದ್ದಾರೆ. ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುವ ಆಡಳಿತ ಯಂತ್ರವಿರಬೇಕು. ಇಂದು ಆಳುವವನು ಆಡಳಿತ ಮಾಡಿದರೆ, ಆಡಳಿತ ಮಾಡುವವನು ಆಳುವ ವಾತಾವರಣವಿದೆ. ಇದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಉಭಯ ಸದನಗಳು ಕಾರ್ಯನಿರ್ವಹಿಸಬೇಕು‌ ಎಂದು ಅವರು ತಿಳಿಸಿದರು.

ನಾಡಿನ ಅನೇಕ ಪ್ರಮುಖರು ಸಾಮಾಜಿಕ ಸಮಾನತೆ, ಸುಭಿಕ್ಷತೆ, ಚರಿತ್ರಾರ್ಹ ತೀರ್ಪುಗಳನ್ನು ಹಾಗೂ ಆಚಾರವಂತ ನಿರ್ದೇಶನಗಳನ್ನು ನೀಡಿದ್ದಾರೆ, ಪ್ರೇರಣಾದಾಯಕ ಇತಿಹಾಸ ನಮ್ಮದು. ನನ್ನ ಆಡಳಿತ ಜನಪರ, ಜನರಿಗೋಸ್ಕರ, ದಕ್ಷ ಹಾಗೂ ಪಾರದರ್ಶಕವಾಗಿರುತ್ತದೆ. ಬದಲಾವಣೆಯ ಪರ್ವ ಇದು. ನಾಡನ್ನು ಶ್ರೇಷ್ಠ ರಾಜ್ಯವನ್ನಾಗಿಸೋಣ. ಈ ನಿಟ್ಟಿನಲ್ಲಿ ಸಿದ್ಧತೆಗಳಾಗುತ್ತಿವೆ. ಇಂದು ಘೋಷಣೆಯಾಗಿರುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರೋಣ ಎಂದರು.

ಬಹಳಷ್ಟು ಅಪೇಕ್ಷೆಗಳನ್ನಿಟ್ಟುಕೊಂಡು ಜನ ನಮ್ಮನ್ನು ಆಯ್ಕೆ ಮಾಡುತ್ತಾರೆ. ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆನಾವು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

LEAVE A REPLY

Please enter your comment!
Please enter your name here