Home ಬೆಂಗಳೂರು ನಗರ ಮುಖ್ಯಮಂತ್ರಿಗಳಿಂದ ನಾಳೆ ನಾಡಪ್ರಭು ಕೆಂಪೇಗೌಡರ ಅಂಚೆ ಚೀಟಿ ಲೋಕಾರ್ಪಣೆ; ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಚಾಲನೆ

ಮುಖ್ಯಮಂತ್ರಿಗಳಿಂದ ನಾಳೆ ನಾಡಪ್ರಭು ಕೆಂಪೇಗೌಡರ ಅಂಚೆ ಚೀಟಿ ಲೋಕಾರ್ಪಣೆ; ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಚಾಲನೆ

81
0

ಬೆಂಗಳೂರು:

ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಪ್ರಯುಕ್ತ ನಾಳೆ (ಭಾನುವಾರ) ಮುಖ್ಯಮಂತ್ರಿ ಯುಡಿಯೂರಪ್ಪ ಅವರು ಕೆಂಪೇಗೌಡರ ಅಂಚೆ ಚೀಟಿ ಲೋಕಾರ್ಪಣೆ ಹಾಗೂ ಜ್ಞಾನಭಾರತಿಯ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಕೆಂಪೇಗೌಡರ ಅಧ್ಯಯನ ಕೇಂದ್ರದ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬೆಳಗ್ಗೆ 11 ಗಂಟೆಗೆ ನಾಡಪ್ರಭುಗಳ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿಗಳ ಜತೆಗೆ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ನಂಜಾವಧೂತ ಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ಇನ್ನು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಂದು ನಾಡಪ್ರಭು  ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಗಣ್ಯರ ಸಮಕ್ಷಮದಲ್ಲಿ ಸಿಎಂ ಅವರು ಅಂಚೆ ಚೀಟಿ ಬಿಡುಗಡೆ ಮಾಡಿದ ನಂತರ ವರ್ಚುಯಲ್ ಮೂಲಕವೇ ಜ್ಞಾನಭಾರತಿಯಲ್ಲಿನ ಅಧ್ಯಯನ ಕೇಂದ್ರದ ಕಾಮಗಾರಿಗೂ ಚಾಲನೆ ನೀಡುವರು ಎಂದು ಡಿಸಿಎಂ ಮಾಹಿತಿ ನೀಡಿದರು.

45 ಕೋಟಿ ರೂ. ವೆಚ್ಚ:

ಬಿಬಿಎಂಪಿ ಸಹಯೋಗದೊಂದಿಗೆ ಜ್ಞಾನಭಾರತಿಯಲ್ಲಿ ಸ್ಥಾಪನೆ ಆಗುತ್ತಿರುವ ಕೆಂಪೇಗೌಡ ಅಧ್ಯಯನ ಕೇಂದ್ರವು 45 ಕೋಟಿ ರೂ. ವೆಚ್ಚದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಕೆಂಪೇಗೌಡರ ಚರಿತ್ರೆ, ಬೆಂಗಳೂರು ಹಾಗೂ ರಾಜ್ಯದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೇಂದ್ರವಾಗಿ ಮಾತ್ರವಲ್ಲದೆ, ನಗರಾಭಿವೃದ್ಧಿ ಬಗ್ಗೆ ನಾಡಪ್ರಭುಗಳು ಹೊಂದಿದ್ದ ಪರಿಕಲ್ಪನೆಗಳು, ಅವರು ಹೊಂದಿದ್ದ ಆಡಳಿತಾತ್ಮಕ ಕ್ರಮಗಳ ಬಗ್ಗೆ ಇಲ್ಲಿ ಸಮಗ್ರ ಮಾಹಿತಿ ಸಿಗುತ್ತದೆ ಎಂದು ಡಿಸಿಎಂ ಅವರು ಹೇಳಿದರು.

ಕಳೆದ ವರ್ಷ ನಾಡಪ್ರಭುಗಳ 511ನೇ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದಿನ 23 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಈಗಾಗಲೇ ನೋಯಿಡಾದಲ್ಲಿ ಪ್ರಭುಗಳ ಪ್ರತಿಮೆ ಸಿದ್ಧವಾಗುತ್ತಿದೆ. ಇಡೀ ಯೋಜನೆಯ ಕಾರ್ಯ ಪ್ರಗತಿಯಲ್ಲಿದೆ. ಕೋವಿಡ್ ಸೋಂಕು ಇಲ್ಲವಾಗಿದ್ದರೆ ಈ ವರ್ಷವೇ ಲೋಕಾರ್ಪಣೆ ಮಾಡುವ ಉದ್ದೇಶವಿತ್ತು. ಫೆಬ್ರುವರಿ ವೇಳೆಗೆ ಲೋಕಾರ್ಪಣೆ ಆಗಲಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಕೆಂಪೇಗೌಡರ ಸಮಾಧಿಗೆ ಡಿಸಿಎಂ ಪೂಜೆ

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಭಾನುವಾರ ಬೆಳಗ್ಗೆ ಜಯಂತಿ ಪ್ರಯುಕ್ತ ಮಾಗಡಿ ತಾಲೂಕಿನ ಕೆಂಪಾಪುರದಲ್ಲಿರುವ ನಾಡಪ್ರಭುಗಳ ವೀರ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ 8.30 ಗಂಟೆ ಅವರು ಅಲ್ಲಿಗೆ ಭೇಟಿ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಅವರು ಕೆಂಪಾಪುರ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು, ಕಾರ್ಯಗತವಾಗುತ್ತಿರುವ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ತದ ನಂತರ ಅವರು ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವರು.

LEAVE A REPLY

Please enter your comment!
Please enter your name here