ದೆಹಲಿಯಲ್ಲಿ ನೀತಿ ಆಯೋಗದ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಭೆ
ನವದೆಹಲಿ, ಜೂನ್ 11: ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ರಾತ್ರಿ ನವದೆಹಲಿಯ ಕರ್ನಾಟಕ ಭವನದಲ್ಲಿ ನೀತಿ ಆಯೋಗದ ಹಿರಿಯ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಔತಣಕೂಟದ ಜತೆಗೆ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ನೀತಿ ಆಯೋಗದ ಉಪ ಕಾರ್ಯದರ್ಶಿ ಶೋಯಬ್ ಕಲಾಲ್ ಹಾಗೂ ಸದಸ್ಯರಾದ ಡಾ. ಆರ್. ಬಾಲಸುಬ್ರಮಣ್ಯಂ, ಕೆ.ವಿ. ರಾಜು ಮತ್ತು ಶ್ರೀನಿವಾಸ್ ಭಾಗವಹಿಸಿದರು. ರಾಜ್ಯದ ಅಭಿವೃದ್ಧಿ, ಆಡಳಿತ ಸುಧಾರಣೆ, ನೀತಿ ರೂಪಣೆ ಹಾಗೂ ಭವಿಷ್ಯದ ಬೆಳವಣಿಗೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಕೂಡ ಉಪಸ್ಥಿತರಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯವನ್ನು ಮತ್ತಷ್ಟು ಬಲಪಡಿಸುವುದು, ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಹಾಗೂ ದೀರ್ಘಕಾಲಿಕ ಬೆಳವಣಿಗೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಈ ಸಂದರ್ಭದಲ್ಲಿ ಅಭಿಪ್ರಾಯ ವಿನಿಮಯ ನಡೆಯಿತು.
ನೀತಿ ಆಯೋಗದೊಂದಿಗೆ ಕರ್ನಾಟಕದ ಅಭಿವೃದ್ಧಿ ಆದ್ಯತೆಗಳು, ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉತ್ತಮ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.
