Home ರಾಜಕೀಯ 20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಫ್ಲಾಟ್ ಖರೀದಿಯ ನೋಂದಣಿ ಶುಲ್ಕ ಶೇಕಡಾ 2ರಷ್ಟು ಇಳಿಕೆಗೆ ಸಚಿವ...

20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಫ್ಲಾಟ್ ಖರೀದಿಯ ನೋಂದಣಿ ಶುಲ್ಕ ಶೇಕಡಾ 2ರಷ್ಟು ಇಳಿಕೆಗೆ ಸಚಿವ ಸಂಪುಟ ನಿರ್ಧಾರ: ಮಾಧುಸ್ವಾಮಿ

31
0
Advertisement
bengaluru

ಬೆಂಗಳೂರು:

ಕರ್ನಾಟಕ ಕೈಗಾರಿಕಾ ಭೂಮಿಯ ನೋಂದಣಿ ಶುಲ್ಕ ಮತ್ತು 20 ಲಕ್ಷಕ್ಕೂ ಕಡಿಮೆ ಮೌಲ್ಯದ ಫ್ಲಾಟ್‌ಗಳ ನೋಂದಣಿ ಶುಲ್ಕದ ದರವನ್ನು ಶೇಕಡಾ 5ರಿಂದ ಶೇಕಡಾ 3ಕ್ಕೆ ಇಳಿಸಲು ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಸ್ತುತ ಕೈಗಾರಿಕಾ ಭೂಮಿಯ ನೊಂದಣಿ ಶುಲ್ಕ ಶೇಕಡಾ 5 ಇದ್ದು ಅದನ್ನು ಶೇಕಡಾ 3ಕ್ಕೆ ಇಳಿಸಲಾಗಿದೆ. 20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಫ್ಲಾಟ್‌ ಗಳ ನೋಂದಣಿಯಲ್ಲೂ ಶೇಕಡಾ 3ಕ್ಕೆ ಇಳಿಸಲು ನಿರ್ಧರಿಸಲಾಗಿದೆ. 20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಫ್ಲಾಟ್‌ ಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ರಾಜ್ಯದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಸೂಕ್ತ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮತ್ತು ಡಾ.ಕಸ್ತೂರಿ ರಂಗನ್ ವರದಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿಗೆ ಅಧಿಕಾರ ನೀಡಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಮಿತಿಯಲ್ಲಿ ಅರಣ್ಯ ಸಚಿವರು, ಕಂದಾಯ ಸಚಿವರು, ಉನ್ನತ ಶಿಕ್ಷಣ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಸೇರಿ ಒಟ್ಟು ಆರು ಸಚಿವರು ಸದಸ್ಯರಾಗಿರುತ್ತಾರೆ. ಅರಣ್ಯ ಸಚಿವರು ಇದರ ಅಧ್ಯಕ್ಷರಾಗಿರುತ್ತಾರೆ. ಅರಣ್ಯ ಸಚಿವರು ಬದಲಾವಣೆ ಆಗಿರುವ ಕಾರಣ ಸಂಪುಟ ಉಪಸಮಿತಿ ಪುನರ್‌ ರಚನೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

bengaluru bengaluru

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದಲ್ಲಿ 0.25 ಎಕರೆ ಜಮೀನನ್ನು ಸೇಂಟ್ ಆಂಟನಿ ಚರ್ಚ್ ಬೈಬಲ್ ಶಾಲೆ ತೋಟತ್ತಾಡಿ ಅವರಿಗೆ ನೀಡಲು ಒಪ್ಪಿಗೆ ನೀಡಲಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಾಲ್ಯದ ಕೆರೆ ಮತ್ತು ಚುಂಚನಹಳ್ಳಿ ಗ್ರಾಮಗಳ ವಿವಿಧ ಸರ್ವೆ ನಂಬರ್ ಗಳಲ್ಲಿ ಒಟ್ಟು 32-18 ಎಕರೆ/ಗುಂಟೆ ಜಮೀನನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಶೈಕ್ಷಣಿಕ ಮತ್ತು ಸಾಮಾಜಿಕ ಉದ್ದೇಶಕ್ಕಾಗಿ ಮಂಜೂರು ಮಾಡಲು ಅನುಮತಿ ನೀಡಲಾಗಿದೆ ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಹಾರಂಗಿ ಜಲಾನಯನ ಪ್ರದೇಶ ಮತ್ತು ನದಿ ಪಾತ್ರದ ಪುನಶ್ಚೇತನ ಹಾಗೂ ರಕ್ಷಣಾ ಕಾಮಗಾರಿಯ 130 ಕೋಟಿ ರೂ,.ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ 5 ಗ್ರಾಮ ಪಂಚಾಯತ್ ಗಳಲ್ಲಿ ಬರುವ 84 ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್ ಕೆರೆಗಳನ್ನು ಬೇಡ್ತಿ ನದಿಯ ಉಪ ನದಿಯಾಗಿ ಕವಳಗಿಹಳ್ಳದಿಂದ ತುಂಬಿಸುವ ಯೋಜನೆಯ 225 ಕೋಟಿ ರೂ.ಮೊತ್ತದ ಯೋಜನಾ ವರದಿಗೆ ಅನುಮೋದನೆ ನೀಡಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಚರ್ಚ್ ಸ್ಟ್ರೀಟ್ ಅನ್ನು ಟೆಂಡರ್ ಶ್ಯೂರ್ ಮಾದರಿಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯ 18.25 ಕೋಟಿ ರೂ.ಗಳ ಪರಿಷ್ಕೃತ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಪಡೆದಿರುವ ವಿವಿಧ ಸಂಘ/ ಸಂಸ್ಥೆಗಳು ಪಾವತಿಸಲು ಬಾಕಿ ಉಳಿಸಿಕೊಂಡಿರುವ ಹಣವನ್ನು ಸಂಪೂರ್ಣವಾಗಿ ಪಾವತಿಸಲು ಮುಂದೆ ಬಂದಲ್ಲಿ ನಿಯಮಾನುಸಾರ ಬಾಕಿ ಹಣದ ಮೇಲೆ ವಿಧಿಸಲಾದ ಬಡ್ಡಿಯ ಒಟ್ಟು ಮೊತ್ತದ ಶೇಕಡಾ 50ರಷ್ಟು ಬಡ್ಡಿ ಮನ್ನಾ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಬೆಂಗಳೂರು ಉಪನಗರ ರೈಲು ಯೋಜನೆಗೆ ಯೋಜನಾ ವೆಚ್ಚದ ಶೇಕಡಾ 60ರಷ್ಟು ಹಣವನ್ನು ಅಂದರೆ 7438 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಯೋಜನಾ ವಿಶೇಷ ಉದ್ದೇಶವಾಹಕದ ಮೂಲಕ ಬಾಹ್ಯ ಅಭಿವೃದ್ಧಿ ಸಂಸ್ಥೆ, ಹಣಕಾಸು ಸಂಸ್ಥೆಗಳಿಂದ ಸಾಳ ಪಡೆಯಲು ಅನುಮೋದನೆ ನೀಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೊಸ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಯ ರೂ.13.95 ಕೋಟಿ ಮೊತ್ತದ ಅಂದಾಜು ಪಟ್ಟಿಗೆ ಹಾಗೂ ಲಿಂಗಸುಗೂರು ತಾಲೂಕಿನಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಯ 15.82 ಕೋಟಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಹೊಸದಾಗಿ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾಮಗಾರಿಯ ಮೊತ್ತ 12.50 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಖನಿಜಾನ್ವೇಷಣೆ ಕಾರ್ಯವನ್ನು ಕೈಗೊಳ್ಳಲು ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಕೆಐಒಸಿಎಲ್, ಎಂಇಸಿಎಲ್ ಸಂಸ್ಥೆಗಳಿಗೆ ವಹಿಸಿದ್ದು, ಈ ಬಗ್ಗೆ ಆಗುವ ವೆಚ್ಚಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಯುವಿಸಿಇ ಬಾಲಕ ಹಾಸ್ಟೆಲ್ ಹಾಗೂ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಸ್ನಾತಕೋತ್ತರ ಮತ್ತು ಪಿಎಚ್ ಡಿ ವಿದ್ಯಾರ್ಥಿಗಳ ವಸತಿ ನಿಲಯವನ್ನು 30.85 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.

ಪಶ್ಚಿಮ ವಾಹಿನಿ ಯೋಜನೆಯಡಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗವೀರಪೇಟೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ ರೂ.35 ಕೋಟಿ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬ್ರಹ್ಮಾವರ ತಾಲೂಕಿನ ಹೆರೂರು ಗ್ರಾಮದಲ್ಲಿ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣಕ್ಕೆ 35 ಕೋಟಿ ರೂ. ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು,

ನಿರ್ಭಯಾ ಯೋಜನೆಯಡಿ ಆಪ್ ಅಭಿವೃದ್ದಿಪಡಿಸಲಾಗಿದ್ದು, 3000 ಮಹಿಳಾ ಸಿಬ್ಬಂದಿಗೆ ಸ್ವರಕ್ಷಣಾ ತರಬೇತಿ ನೀಡಲಾಗುತ್ತದೆ. ತುರ್ತುಪರಿಸ್ಥಿತಿ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. 40.92 ಕೋಟಿ ರೂ.ವೆಚ್ಚದಲ್ಲಿ ಈ ಎಲ್ಲಾ ಕಾರ್ಯ ಕೈಗೊಳ್ಳಲಾಗುತ್ತದೆ ಎಂದರು.

ಸಂಸದೀಯ ಕಾರ್ಯದರ್ಶಿಗಳ ಹುದ್ದೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ್ದರಿಂದ ಈ ಎಲ್ಲಾ ಹುದ್ದೆಗಳನ್ನು ರದ್ದುಪಡಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಮಾದನಾಯಕನಹಳ್ಳಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವುದರ ಜತೆಗೆ ಮೈಸೂರಿನ ಹೂಟಗಳ್ಳಿಯನ್ನೂ ನಗರಸಭೆಯನ್ನಾಗಿ ರೂಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮಾದನಾಯಕನಹಳ್ಳಿ ವ್ಯಾಪ್ತಿಗೆ ಬರುವ ಲಕ್ಷ್ಮೀಪುರ, ಚಿಕ್ಕಬಿದರಕಲ್ಲು ಮತ್ತು ಶ್ರೀಕಂಠಪುರ ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆ ಮಾಡಿ ಮಾದನಾಯಕನಹಳ್ಳಿಯನ್ನು ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಮೈಸೂರಿನ ಕೂರ್ಗಳ್ಳಿ, ಹೆಬ್ಬಾಳ ಕೈಗಾರಿಕಾ ಪ್ರದೇಶ, ಬೆಳವಾಡಿ, ಹಿನಕಲ್ ಗ್ರಾಮಪಂಚಾಯಿತಿಗಳನ್ನು ಸೇರಿಸಿ ಹೂಟಗಳ್ಳಿ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಯಿತು ಎಂದರು.

ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ರಾಮನಗರ ಜಿಲ್ಲೆಯ ಹಾರೊಹಳ್ಳಿ, ಹೊಳೆಹೊನ್ನೂರು, ದಕ್ಷಿಣಕನ್ನಡ ಜಿಲ್ಲೆಯ ಬಜ್ಪೆ, ಮೈಸೂರು ಜಿಲ್ಲೆಯ ಶ್ರೀರಾಂಪುರ, ಬೋಗಾದಿ, ಕಡಕೊಳ, ರಮ್ಮನಹಳ್ಳಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿಯ ಪುರಸಭೆ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ವಿಜಯಪುರ ಜಿಲ್ಲೆಯ ಸಿಂಧಗಿ ಪುರಸಭೆ ವ್ಯಾಪ್ತಿಗೆ ಇನ್ನಷ್ಟು ಸರ್ವೆ ನಂಬರ್ ಗಳನ್ನು ಸೇರಿಸಲಾಗಿದೆ ಎಂದು ಜೆ.ಸಿ.ಮಾಧುಸ್ವಾಮಿ ಮಾಹಿತಿ ನೀಡಿದರು.

ಬೆಳಗಾವಿಯಲ್ಲಿ ಬಿಜೆಪಿ ಕಚೇರಿ ನಿರ್ಮಾಣಕ್ಕೆ 10 ಗುಂಟೆ ಜಮೀನು ನೀಡಲು ಒಪ್ಪಿಗೆ ನೀಡಲಾಗಿದೆ. 30 ಗುಂಟೆವರೆಗೂ ನೀಡಲು ಶಿಫಾರಸು ಮಾಡಲಾಗಿದೆ.


bengaluru

LEAVE A REPLY

Please enter your comment!
Please enter your name here