4,744 ಹುದ್ದೆಗಳ ನೇಮಕಾತಿಗೆ ಈ ತಿಂಗಳಲ್ಲೇ ಅಧಿಸೂಚನೆ; ನವೆಂಬರ್-ಡಿಸೆಂಬರ್ನಲ್ಲಿ ಪರೀಕ್ಷೆಗೆ ಕೆಇಎ ಸಿದ್ಧತೆ
ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪದವಿ, ಪಿಯುಸಿ ಹಾಗೂ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಒಟ್ಟು 4,744 ಹುದ್ದೆಗಳ ನೇಮಕಾತಿಗೆ ಈ ತಿಂಗಳಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಈ ಹುದ್ದೆಗಳಿಗೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಯಾವ ಇಲಾಖೆಯ ಯಾವ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂಬ ವಿವರಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಸಿದ್ಧತೆ ಆರಂಭಿಸಲು ಅನುಕೂಲವಾಗುವಂತೆ ಪಠ್ಯಕ್ರಮದ ವಿವರಗಳನ್ನೂ ಪ್ರಕಟಿಸಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.
ಒಟ್ಟು 4,744 ಹುದ್ದೆಗಳ ಪೈಕಿ ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,421 ಹಾಗೂ ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,062 ಇವೆ. ಇದಲ್ಲದೆ 261 ತಾಂತ್ರಿಕ ಹುದ್ದೆಗಳಿವೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಇಲಾಖೆಗಳು ಮತ್ತು ಹುದ್ದೆಗಳು ನೇಮಕಾತಿ ಪ್ರಕ್ರಿಯೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಪ್ರಸನ್ನ ತಿಳಿಸಿದ್ದಾರೆ.
