319 ಗ್ರೂಪ್ ‘ಎ’, ‘ಬಿ’ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ಸೆಪ್ಟೆಂಬರ್ 7ರವರೆಗೆ ವಿಸ್ತರಿಸಿದ ಕೆಪಿಎಸ್ಸಿ
ಬೆಂಗಳೂರು: 2026-27ನೇ ಸಾಲಿನ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ 319 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 7, 2026ರವರೆಗೆ ವಿಸ್ತರಿಸಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧಿಕೃತ ಪ್ರಕಟಣೆ ಹೊರಡಿಸಿದೆ.
ಒಟ್ಟು 319 ಹುದ್ದೆಗಳ ಪೈಕಿ ಉಳಿಕೆ ಮೂಲ ವೃಂದದ 297 ಹಾಗೂ ಹೈದರಾಬಾದ್-ಕರ್ನಾಟಕ ವೃಂದದ 22 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಕೆಪಿಎಸ್ಸಿ ಜುಲೈ 31, 2026ರಂದು ಅಧಿಸೂಚನೆ ಹೊರಡಿಸಿತ್ತು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 1ರಿಂದ ಆಗಸ್ಟ್ 31, 2026ರವರೆಗೆ ಕಾಲಾವಕಾಶ ನೀಡಲಾಗಿತ್ತು.

ಆದರೆ ಇತ್ತೀಚೆಗೆ ನಾಡಕಚೇರಿ ಹಾಗೂ ಸೇವಾ ಸಿಂಧು ಪೋರ್ಟಲ್ನಲ್ಲಿ ಎದುರಾದ ತಾಂತ್ರಿಕ ಸರ್ವರ್ ಸಮಸ್ಯೆಗಳಿಂದಾಗಿ ಕೆಲವು ಅಭ್ಯರ್ಥಿಗಳಿಗೆ ಜಾತಿ, ಆದಾಯ ಹಾಗೂ ಒಳ ಮೀಸಲಾತಿ ಪ್ರಮಾಣಪತ್ರಗಳನ್ನು ನಿಗದಿತ ಅವಧಿಯೊಳಗೆ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ಆಯೋಗ ತಿಳಿಸಿದೆ.
ಗ್ರಾಮೀಣ ಭಾಗದ ಅಭ್ಯರ್ಥಿಗಳು ಇಂಟರ್ನೆಟ್ ಸಂಪರ್ಕದ ಕೊರತೆಯಿಂದ ಅರ್ಜಿ ಶುಲ್ಕ ಪಾವತಿಸುವಾಗಲೂ ಸಮಸ್ಯೆ ಎದುರಿಸಿದ್ದು, ಕೆಲವು ಪಾವತಿಗಳು ವಿಫಲವಾಗಿದ್ದವು. ಇದರಿಂದ ಹಲವು ಅಭ್ಯರ್ಥಿಗಳಿಗೆ ನಿಗದಿತ ಅವಧಿಯಲ್ಲಿ ಆನ್ಲೈನ್ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಲು ಸಾಧ್ಯವಾಗದೆ, ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಿದ್ದರು.
ಅಭ್ಯರ್ಥಿಗಳಿಂದ ಬಂದ ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 7, 2026ರವರೆಗೆ ವಿಸ್ತರಿಸಲು ಆಯೋಗ ನಿರ್ಧರಿಸಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜ್ಯೋತಿ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
