ಬೆಂಗಳೂರು ನಗರದಲ್ಲಿ 26 ಮದ್ಯ ಮಾರಾಟ ಪರವಾನಗಿಗಳ ಇ-ಹರಾಜು; ಜುಲೈ 27ರಂದು ಆನ್ಲೈನ್ ಹರಾಜು ನಡೆಸಲಿರುವ ಅಬಕಾರಿ ಇಲಾಖೆ
ಬೆಂಗಳೂರು, ಜುಲೈ 9: ಕರ್ನಾಟಕ ಅಬಕಾರಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಭಾರತೀಯ ಮದ್ಯ (IML), ವಿದೇಶಿ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ನೀಡಲಾಗುವ CL-2A ಹಾಗೂ CL-9A ಸನ್ನದುಗಳ ಹಂಚಿಕೆಗೆ ಆನ್ಲೈನ್ ಇ-ಹರಾಜು ನಡೆಸಲು ಅರ್ಹ ಬಿಡ್ದಾರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಬೆಂಗಳೂರು ನಗರ ಜಿಲ್ಲೆ (BUD-06) ವ್ಯಾಪ್ತಿಯಲ್ಲಿರುವ ಒಟ್ಟು 26 ಖಾಲಿ ಅಥವಾ ಲಭ್ಯವಿರುವ ಅಬಕಾರಿ ಸನ್ನದುಗಳನ್ನು MSTC ಇ-ಕಾಮರ್ಸ್ ಪೋರ್ಟಲ್ ಮೂಲಕ ಇ-ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ.
ಇ-ಹರಾಜಿನಲ್ಲಿ ಭಾಗವಹಿಸಲು ಬಿಡ್ದಾರರ ನೋಂದಣಿ ಪ್ರಕ್ರಿಯೆ ಜುಲೈ 3ರಿಂದ ಆರಂಭಗೊಂಡಿದ್ದು, ನೇರ ಆನ್ಲೈನ್ ಹರಾಜು ಜುಲೈ 27ರಂದು ಮಧ್ಯಾಹ್ನ 3.00ರಿಂದ ಸಂಜೆ 5.00ರವರೆಗೆ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.
ಅಬಕಾರಿ ಇಲಾಖೆಯು ಇ-ಹರಾಜಿಗೆ ಸಂಬಂಧಿಸಿದ ವಿವರವಾದ ಮಾರ್ಗಸೂಚಿಗಳು, ನಿಯಮಗಳು ಮತ್ತು ಷರತ್ತುಗಳು, ಜಿಲ್ಲಾವಾರು ಸನ್ನದುಗಳ ವಿವರ, ಮೀಸಲಾತಿ, ಅರ್ಜಿ ಶುಲ್ಕ, ಮುಂಗಡ ಠೇವಣಿ (EMD), ಮೂಲ ಬೆಲೆ ಹಾಗೂ ಹರಾಜಿನ ನಂತರದ ಪ್ರಕ್ರಿಯೆಗಳ ಮಾಹಿತಿಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ಹಾಗೂ MSTC ಇ-ಕಾಮರ್ಸ್ ಪೋರ್ಟಲ್ನಲ್ಲಿ ಪ್ರಕಟಿಸಿದೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತ ಬಿಡ್ದಾರರು ಅಬಕಾರಿ ಭವನ, ಕಟ್ಟಡ ಸಂಖ್ಯೆ 334/4, ಕೆಎಸ್ಬಿಸಿಎಲ್ ಕಾಂಪ್ಲೆಕ್ಸ್, ಬ್ಯಾಟರಾಯನಪುರ ಪೊಲೀಸ್ ಠಾಣೆ ಎದುರು, ಮೈಸೂರು ರಸ್ತೆ, ಬೆಂಗಳೂರು – 560026 ಕಚೇರಿಯನ್ನು ಸಂಪರ್ಕಿಸಬಹುದು ಅಥವಾ 9449597285 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಅಲ್ಲದೆ, ಇ-ಹರಾಜು ಸಂಬಂಧಿತ ಎಲ್ಲಾ ಮಾಹಿತಿ ಮತ್ತು ಮುಂದಿನ ಪ್ರಕಟಣೆಗಳಿಗಾಗಿ ಕರ್ನಾಟಕ ಅಬಕಾರಿ ಇಲಾಖೆಯ ಅಧಿಕೃತ ವೆಬ್ಸೈಟ್ ಹಾಗೂ MSTC ಇ-ಕಾಮರ್ಸ್ ಪೋರ್ಟಲ್ ಅನ್ನು ನಿಯಮಿತವಾಗಿ ಪರಿಶೀಲಿಸುವಂತೆ ಇಲಾಖೆ ಮನವಿ ಮಾಡಿದೆ.