FSSAI ನೋಟಿಸ್ ಲೇಬಲಿಂಗ್ಗೆ ಸಂಬಂಧಿಸಿದ್ದು, ಉತ್ಪನ್ನದ ಸಸ್ಯಾಹಾರಿ ಗುಣಮಟ್ಟಕ್ಕೆ ಅಲ್ಲ: ಲೊಟ್ಟೆ ಇಂಡಿಯಾ ಸ್ಪಷ್ಟನೆ
ಬೆಂಗಳೂರು/ನವ ದೆಹಲಿ, ಜುಲೈ 9: ಇತ್ತೀಚೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನೀಡಿರುವ ಶೋಕಾಸ್ ನೋಟಿಸ್ ಕುರಿತು ಲೊಟ್ಟೆ ಇಂಡಿಯಾ ಅಧಿಕೃತ ಸ್ಪಷ್ಟನೆ ನೀಡಿದ್ದು, ಈ ನೋಟಿಸ್ ಉತ್ಪನ್ನದ ಲೇಬಲಿಂಗ್ಗೆ ಸಂಬಂಧಿಸಿದ ತಾಂತ್ರಿಕ ಆಕ್ಷೇಪಣೆಗಳ ಕುರಿತಾಗಿದ್ದು, ಉತ್ಪನ್ನಗಳ ಸಸ್ಯಾಹಾರಿ (Vegetarian) ಸ್ವರೂಪವನ್ನು ಪ್ರಶ್ನಿಸುವುದಿಲ್ಲ ಎಂದು ತಿಳಿಸಿದೆ.
ಕಂಪನಿಯು ತನ್ನ ಪಿಆರ್ ಏಜೆನ್ಸಿ ಮೂಲಕ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಎಫ್ಎಸ್ಎಸ್ಎಐ ನೋಟಿಸ್ ಸ್ವೀಕರಿಸಿರುವುದಾಗಿ ಹಾಗೂ ನಿಗದಿತ ಅವಧಿಯೊಳಗೆ ಉತ್ತರ ಸಲ್ಲಿಸುತ್ತಿದ್ದು, ತನಿಖಾ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ತಿಳಿಸಿದೆ.
ಕಂಪನಿಯ ಪ್ರಕಾರ, ಎಫ್ಎಸ್ಎಸ್ಎಐ ಮಾಡಿರುವ ಆಕ್ಷೇಪಣೆ “100% Vegetarian” ಎಂಬ ಹೇಳಿಕೆಯನ್ನು ಪ್ಯಾಕೇಜಿಂಗ್ನಲ್ಲಿ ಕಡ್ಡಾಯ ಹಸಿರು ಸಸ್ಯಾಹಾರಿ ಚಿಹ್ನೆ (Green Vegetarian Symbol) ಜೊತೆಗೆ ಪ್ರದರ್ಶಿಸಿರುವ ರೀತಿಗೆ ಸಂಬಂಧಿಸಿದೆ.
ಕೆಲವು ಮಾಧ್ಯಮ ವರದಿಗಳು ಈ ನೋಟಿಸ್ನ ಅರ್ಥವನ್ನು ತಪ್ಪಾಗಿ ಅರ್ಥೈಸಿ, ಕಂಪನಿಯ ಉತ್ಪನ್ನಗಳು ಸಸ್ಯಾಹಾರಿಯಲ್ಲ ಎಂಬ ರೀತಿಯಲ್ಲಿ ವರದಿ ಮಾಡಿವೆ ಎಂದು ಲೊಟ್ಟೆ ಇಂಡಿಯಾ ಹೇಳಿದೆ.
(kannada.thebengalurulive.com ತನ್ನ ಹಿಂದಿನ ವರದಿಯಲ್ಲಿ ಉತ್ಪನ್ನಗಳು ಸಸ್ಯಾಹಾರಿಯಲ್ಲ ಅಥವಾ ಎಫ್ಎಸ್ಎಸ್ಎಐ ಉತ್ಪನ್ನಗಳ ಸಸ್ಯಾಹಾರಿ ಗುಣಮಟ್ಟವನ್ನು ಪ್ರಶ್ನಿಸಿದೆ ಎಂದು ಎಲ್ಲಿಯೂ ವರದಿ ಮಾಡಿರಲಿಲ್ಲ. ನಮ್ಮ ವರದಿ ಸಂಪೂರ್ಣವಾಗಿ ಎಫ್ಎಸ್ಎಸ್ಎಐ ಬಿಡುಗಡೆ ಮಾಡಿದ್ದ ಅಧಿಕೃತ ಸೂಚನೆ ಪ್ರತಿಯಲ್ಲಿ ಉಲ್ಲೇಖಿಸಲಾದ ಲೇಬಲಿಂಗ್ ಮತ್ತು ಕ್ಲೈಮ್ಗಳಿಗೆ ಸಂಬಂಧಿಸಿದ ಆಕ್ಷೇಪಣೆಗಳ ಆಧಾರದ ಮೇಲೆ ಮಾತ್ರ ಪ್ರಕಟಿಸಲಾಗಿತ್ತು.)
ಲೊಟ್ಟೆ ಇಂಡಿಯಾ ತನ್ನ ಎಲ್ಲಾ ಉತ್ಪನ್ನಗಳು 100% ಸಸ್ಯಾಹಾರಿ ಆಗಿದ್ದು, ಕೇವಲ ಸಸ್ಯಾಹಾರಿ ಮೂಲದ ಪದಾರ್ಥಗಳಿಂದಲೇ ತಯಾರಿಸಲಾಗುತ್ತವೆ ಹಾಗೂ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿವೆ ಎಂದು ಪುನರುಚ್ಚರಿಸಿದೆ.
ಕಂಪನಿಯು ತನ್ನ ಉತ್ಪನ್ನಗಳ ಪ್ಯಾಕೇಜಿಂಗ್ನಲ್ಲಿ ಕಡ್ಡಾಯವಾಗಿರುವ ಹಸಿರು ಸಸ್ಯಾಹಾರಿ ಚಿಹ್ನೆಯನ್ನು ನಿಯಮಾನುಸಾರ ಮುಂದುವರಿಸಿಕೊಂಡೇ ಬಂದಿದೆ ಎಂದು ತಿಳಿಸಿದೆ.
“ಉತ್ಪನ್ನದ ಗುಣಮಟ್ಟ, ಸುರಕ್ಷತೆ ಮತ್ತು ನಿಯಮಾನುಸರಣೆ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ. ಎಫ್ಎಸ್ಎಸ್ಎಐ ಗಮನಕ್ಕೆ ತಂದಿರುವ ಅಂಶಗಳನ್ನು ಪರಿಶೀಲಿಸಿ, ಅನ್ವಯಿಸುವ ನಿಯಮಾವಳಿಗಳ ಪ್ರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ” ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಾರ್ವಜನಿಕರು ಮತ್ತು ಗ್ರಾಹಕರು ಪರಿಶೀಲಿತ ಹಾಗೂ ಅಧಿಕೃತ ಮಾಹಿತಿಯನ್ನಷ್ಟೇ ನಂಬಬೇಕು ಎಂದು ಮನವಿ ಮಾಡಿದ ಲೊಟ್ಟೆ ಇಂಡಿಯಾ, ತಮ್ಮ ಉತ್ಪನ್ನಗಳು ಸಸ್ಯಾಹಾರಿಯಲ್ಲ ಎಂಬ ವರದಿಗಳು ತಪ್ಪು ಹಾಗೂ ಎಫ್ಎಸ್ಎಸ್ಎಐ ನೋಟಿಸ್ನ ನಿಜವಾದ ವಿಷಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ವಿಷಯದಲ್ಲಿ ಅಗತ್ಯವಿದ್ದರೆ ಹೆಚ್ಚಿನ ಮಾಹಿತಿಯನ್ನು ನೀಡಲು ಕಂಪನಿ ಸಿದ್ಧವಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹೇಳಿಕೆ, ಲೇಬಲಿಂಗ್ಗೆ ಸಂಬಂಧಿಸಿದ ಎಫ್ಎಸ್ಎಸ್ಎಐ ಶೋಕಾಸ್ ನೋಟಿಸ್ಗೆ ಪ್ರತಿಕ್ರಿಯೆಯಾಗಿ ಬಿಡುಗಡೆಯಾಗಿದೆ. ಪ್ರಸ್ತುತ ನಿಯಂತ್ರಣಾತ್ಮಕ ಪ್ರಕ್ರಿಯೆ ಮುಂದುವರಿದಿದ್ದು, ಪ್ರಕರಣವು ಎಫ್ಎಸ್ಎಸ್ಎಐ ಪರಿಶೀಲನೆಯಲ್ಲಿದೆ.