Home ಬೆಂಗಳೂರು ನಗರ ಪದವಿ, ನರ್ಸಿಂಗ್, ಪಿ.ಜಿ. ವಿದ್ಯಾರ್ಥಿಗಳಿಗೂ ಟ್ವಿನ್ನಿಂಗ್ ಯೋಜನೆ ವಿಸ್ತರಣೆ

ಪದವಿ, ನರ್ಸಿಂಗ್, ಪಿ.ಜಿ. ವಿದ್ಯಾರ್ಥಿಗಳಿಗೂ ಟ್ವಿನ್ನಿಂಗ್ ಯೋಜನೆ ವಿಸ್ತರಣೆ

36
0
Karnataka governmnet has plans for Twinning Bachelors, Nursing, PG Students
Advertisement
bengaluru

ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ ಅಶ್ವತ್ಥನಾರಾಯಣ

ಬೆಂಗಳೂರು:

ಸದ್ಯಕ್ಕೆ ರಾಜ್ಯದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇರುವ ಟ್ವಿನ್ನಿಂಗ್ ಡಿಗ್ರಿ ಯೋಜನೆಯನ್ನು ಪದವಿ, ಸ್ನಾತಕೋತ್ತರ ಪದವಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಅಮೆರಿಕದ ಅತ್ಯುತ್ತಮ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಪ್ರಾಥಮಿಕ ಸುತ್ತಿನ ಚರ್ಚೆ ನಡೆಸಿದರು.

ವಿಕಾಸಸೌಧದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾದ ರಾಯಭಾರಿ ಕನ್ನಿಕಾ ಚೌಧರಿ ಮತ್ತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಇದ್ದರು.

‘ರಾಜ್ಯದ ಡಿಪ್ಲೊಮಾ ವಿದ್ಯಾರ್ಥಿಗಳು ಅಮೆರಿಕದ ಮಾಂಟ್ಗೊಮೆರಿ ಕೌಂಟಿ ಕಮ್ಯುನಿಟಿ ಕಾಲೇಜಿನಲ್ಲಿ ಓದುವ ಸಂಬಂಧ ಮಾಡಿಕೊಂಡಿದ್ದ ಒಪ್ಪಂದ ಈಗಾಗಲೇ ಅನುಷ್ಠಾನಕ್ಕೆ ಬಂದಿದೆ. ಇದನ್ನು ವಿಸ್ತರಿಸಬೇಕಾದ ಅಗತ್ಯವಿದ್ದು, ಇದು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಪೂರಕವಾಗಿರಲಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

bengaluru bengaluru

ಉದ್ದೇಶಿತ ಗುರಿಯನ್ನು ಸಾಧಿಸಬೇಕೆಂದರೆ ಅಮೆರಿಕದ ಅಥೆನ್ಸ್ ವಿಶ್ವವಿದ್ಯಾಲಯ, ಪೆನ್ಸಿಲ್ವೇನಿಯಾದ ಯಾರ್ಕ್ ಕಾಲೇಜ್, ಹ್ಯಾರಿಸ್ ಬರ್ಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಇಂಡಿಯಾನಾ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ, ಹ್ಯೂಸನ್ ಯೂನಿವರ್ಸಿಟಿ, ಥಿಯಲ್ ಕಾಲೇಜು ಮತ್ತು ಅಲ್ವರ್ನಿಯಾ ಹಾಗೂ ಮಿಸರಿಕಾರ್ಡಿಯಾ ವಿ.ವಿ.ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು ಸೂಕ್ತ ಎಂದು ಕನ್ನಿಕಾ ಅವರು ಸಭೆಗೆ ತಿಳಿಸಿದರು.

ಟ್ವಿನ್ನಿಂಗ್ ಕಾರ್ಯಕ್ರಮದಡಿ ನಮ್ಮ ವಿದ್ಯಾರ್ಥಿಗಳನ್ನು ಪದವಿ/ಸ್ನಾತಕೋತ್ತರ ಪದವಿಯ ನಿರ್ದಿಷ್ಟ ವರ್ಷಗಳಲ್ಲಿ ಅಮೆರಿಕದ ವಿ.ವಿ.ಗಳಿಗೇ ನೇರವಾಗಿ ಕಳುಹಿಸಿ ಕೊಡಲಾಗುವುದು. ವೇತನಸಹಿತ ಇಂಟರ್ನ್-ಶಿಪ್ ವ್ಯವಸ್ಥೆ ಇದರ ಭಾಗವಾಗಿರಲಿದೆ. ಅಲ್ಲದೆ, ಇಷ್ಟವಿರುವವರು ಅಮೆರಿಕದಲ್ಲೇ ಉದ್ಯೋಗಿಗಳಾಗಿ ನೆಲೆಯೂರಲು ಅವಕಾಶವಿರಲಿದೆ ಎಂದು ಸಚಿವರು ವಿವರಿಸಿದರು.

ಒಡಂಬಡಿಕೆಗಳು ಜಾರಿಗೆ ಬಂದರೆ 6 ವರ್ಷಗಳ ಟ್ವಿನ್ನಿಂಗ್ ಡಿಗ್ರಿ, 5 ವರ್ಷಗಳ ಇಂಟಿಗ್ರೇಟೆಡ್ ಸ್ನಾತಕೋತ್ತರ ಪದವಿ, 4 ವರ್ಷಗಳ ಟ್ವಿನ್ನಿಂಗ್ ಸ್ನಾತಕೋತ್ತರ ಪದವಿ, ಎಂ.ಎಸ್. ನರ್ಸಿಂಗ್ (ಇಂಟಿಗ್ರೇಟೆಡ್) ಮತ್ತು ಎಂ.ಎಸ್.ಬಯೋಕೆಮಿಸ್ಟ್ರಿ (ಇಂಟಿಗ್ರೇಟೆಡ್) ಪದವಿ ಹೊಂದಲು ಅವಕಾಶ ಸಿಗಲಿವೆ ಎಂದು ಅವರು ಮಾಹಿತಿ ನೀಡಿದರು.

ಅಲ್ಲದೆ, `ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ಮತ್ತು ಆರೋಗ್ಯ ವ್ಯವಸ್ಥಾಪನಾ ಪದವಿಗಳಿಗೆ ತುಂಬಾ ಬೇಡಿಕೆ ಇದೆ. ಇದನ್ನು ಗುಣಮಟ್ಟದೊಂದಿಗೆ ಕಲಿಸಬೇಕಾದ್ದು ಅಗತ್ಯವಿದೆ. ಇಂತಹ ಕೋರ್ಸುಗಳಿಗೆ ಆಗುವ ವೆಚ್ಚ ಮತ್ತು ಅದರ ಸ್ವರೂಪ ಹೇಗಿರಬೇಕು, ಇದನ್ನು ಹೇಗೆ ಜಾರಿಗೊಳಿಸಬೇಕು ಎನ್ನುವುದನ್ನು ಅಧಿಕಾರಿಗಳು ಕೆಲವೇ ದಿನಗಳಲ್ಲಿ ಆಖೈರುಗೊಳಿಸಬೇಕು ಎಂದು ಅವರು ಹೇಳಿದರು.

ಇಂತಹ ಒಡಂಬಡಿಕೆಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉನ್ನತ ಅಧ್ಯಯನಕ್ಕೆ ಅವಕಾಶ ಸಿಗಲಿದೆ. ಆಯ್ಕೆಯಾಗುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ತಗುಲುವ ವೆಚ್ಚವನ್ನು ಸರಕಾರವೇ ಸಂಪೂರ್ಣವಾಗಿ ಭರಿಸಲು ಅವಕಾಶ ಇದೆ. ಅಗತ್ಯ ಬಿದ್ದರೆ ಬ್ಯಾಂಕ್ ಸಾಲಕ್ಕೆ ಕೂಡ ವ್ಯವಸ್ಥೆ ಮಾಡಲಾಗುವುದು ಎಂದು ಅವರು ನುಡಿದರು.

ಹ್ಯಾರಿಸ್ಬರ್ಗ್ ವಿವಿ ಜತೆ ಒಡಂಬಡಿಕೆಗೆ ಬೆಂಗಳೂರು ನಗರ ವಿವಿ ಆಸಕ್ತಿ

ಇಂಗ್ಲಿಷ್ ಕಲಿಕೆ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಇಂಟಿಗ್ರೇಟೆಡ್ ಪದವಿಗೆ ಅವಕಾಶ ಕಲ್ಪಿಸುವ ಮಹತ್ವಾಕಾಂಕ್ಷೆಯುಳ್ಳ ಒಡಂಬಡಿಕೆ ಮಾಡಿಕೊಳ್ಳುವ ಸಂಬಂಧ ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಹ್ಯಾರಿಸ್ ಬರ್ಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಪರಸ್ಪರ ಪತ್ರ ಮತ್ತು ದಾಖಲಾತಿಗಳನ್ನು ಬುಧವಾರ ವಿನಿಮಯ ಮಾಡಿಕೊಂಡಿವೆ.

ಬೆಂಗಳೂರು ನಗರ ವಿವಿ ಪರವಾಗಿ ಕುಲಪತಿ ಡಾ.ಲಿಂಗರಾಜ ಗಾಂಧಿ ಮತ್ತು ಹ್ಯಾರಿಸ್ಬರ್ಗ್ ವಿ.ವಿ ಪರವಾಗಿ ಕನ್ನಿಕಾ ಚೌಧರಿ ಆವರು ಈ ದಾಖಲಾತಿಗಳನ್ನು ಪರಸ್ಪರ ಹಸ್ತಾಂತರಿಸಿಕೊಂಡರು.

ಈ ಒಪ್ಪಂದ ಅಂತಿಮರೂಪ ಪಡೆದುಕೊಂಡ ನಂತರ ಬೆಂಗಳೂರು ನಗರ ವಿ.ವಿ. ವಿದ್ಯಾರ್ಥಿಗಳು ಹ್ಯಾರಿಸ್ಬರ್ಗ್ ವಿ.ವಿ.ಯಲ್ಲಿ ನಡೆಯುವ ಇಂಗ್ಲಿಷ್ ಕಲಿಕಾ ಕಾರ್ಯಕ್ರಮಗಳ ಲಾಭವನ್ನು ಪಡೆಯಬಹುದು. ಜತೆಗೆ, ಅಮೆರಿಕದ ಶೈಕ್ಷಣಿಕ ಕಾರ್ಯಕ್ರಮಗಳ ಭಾಗವಾಗಬಹುದು ಅಥವಾ ಅವುಗಳಿಗೆ ಹಾಜರಾಗಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅಲ್ಲದೆ, ವಿದ್ಯಾರ್ಥಿ ವಿನಿಮಯ ಉಪಕ್ರಮದಡಿ ಇಲ್ಲಿನ ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಿ ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಇಂಟಿಗ್ರೇಟೆಡ್ ಡಿಗ್ರಿ ಅಧ್ಯಯನ ಮಾಡಬಹುದು ಎಂದು ಹೇಳಲಾಗಿದೆ.


bengaluru

LEAVE A REPLY

Please enter your comment!
Please enter your name here