Home ಬೆಂಗಳೂರು ನಗರ ಸರಕಾರಿ ಶಾಲೆಗಳ ಮಕ್ಕಳ ಬಗ್ಗೆ ಖಾಸಗಿ ಶಾಲೆಗಳು ಚಿಂತಿಸಬೇಕು: ಅಶ್ವತ್ಥನಾರಾಯಣ

ಸರಕಾರಿ ಶಾಲೆಗಳ ಮಕ್ಕಳ ಬಗ್ಗೆ ಖಾಸಗಿ ಶಾಲೆಗಳು ಚಿಂತಿಸಬೇಕು: ಅಶ್ವತ್ಥನಾರಾಯಣ

6
0
Private schools should worry about children of government schools Karnataka Minister
bengaluru

ಬೆಂಗಳೂರು:

ಸರಕಾರಿ ಶಾಲೆಗೆಳಲ್ಲಿ ಓದುತ್ತಿರುವ ಆರ್ಥಿಕ ದುರ್ಬಲ ವರ್ಗಗಳ ಮತ್ತು ಮೊದಲ ತಲೆಮಾರಿನ ವಿದ್ಯಾರ್ಥಿಗಳ ಸಬಲೀಕರಣಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳೂ ಕಳಕಳಿಯಿಂದ ಯೋಚಿಸಿ, ಕೈಜೋಡಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಲ್ಲೇಶ್ವರಂನ ವಿದ್ಯಾ ಮಂದಿರ ಶಿಕ್ಷಣ ಸಂಸ್ಥೆಯು ದತ್ತು ತೆಗೆದುಕೊಂಡಿರುವ ಕೋದಂಡರಾಮಪುರದ ಬಿಬಿಎಂಪಿ ಸರಕಾರಿ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಅವರು, ವಿದ್ಯಾದಾನಕ್ಕಿಂತ ಹಿರಿದಾದ ಪುಣ್ಯದ ದಾನ ಇನ್ನೊಂದಿಲ್ಲ; ಈ ಸೇವೆಗೆ ಯಾರೂ ಬೆಲೆ ಕಟ್ಟುವುದು ಸಾಧ್ಯವಿಲ್ಲ ಎಂದರು.

ಮಲ್ಲೇಶ್ವರಂ ಎಂದರೆ ವಿದ್ಯಾ ಮಂದಿರ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಥಟ್ಟನೆ ನೆನಪಾಗುತ್ತವೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರು ಇಂದು ಜಗತ್ತಿನ ನಾನಾ ದೇಶಗಳಲ್ಲಿ ನೆಲೆ ನಿಂತು, ಹೆಸರು ಗಳಿಸಿದ್ದಾರೆ. ಸರಕಾರಿ ಶಾಲೆಯ ಸಬಲೀಕರಣಕ್ಕೆ ವಿದ್ಯಾ ಮಂದಿರವು ಮುಂದಾಗಿರುವುದು ಶ್ಲಾಘನೀಯ ಸಂಗತಿ ಎಂದು ಅವರು ಹೇಳಿದರು.

bengaluru

ಸರಕಾರಿ ಶಾಲೆಗಳನ್ನು ಉಳಿಸಿಕೊಂಡು, ಅಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕೆನ್ನುವುದು ಸರಕಾರದ ಕಳಕಳಿಯಾಗಿದೆ. ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದ್ದು, ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಜತೆಗೆ ಶಿಕ್ಷಕರಿಗೆ ತರಬೇತಿ, ಪ್ರಯೋಗಾಲಯ ಎಲ್ಲವೂ ಇರುವಂತೆ ನೋಡಿಕೊಳ್ಳಲಾಗಿದೆ ಎಂದು ಅವರು ನುಡಿದರು.

ಬೆಂಗಳೂರು ಇಂದು ವಿಜ್ಞಾನ-ತಂತ್ರಜ್ಞಾನಗಳಲ್ಲಿ ಜಗದ್ವಿಖ್ಯಾತವಾಗಿದೆ. ಜತೆಗೆ, ಇಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗಗಳಿವೆ. ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ಇಂತಹ ಉಜ್ವಲ ಅವಕಾಶಗಳು ಸಿಗುವಂತೆ ನೋಡಿಕೊಳ್ಳಬೇಕಾದ್ದು ಸಮಾಜದ ಕರ್ತವ್ಯವಾಗಿದೆ. ಗುಣಮಟ್ಟದ ಶಿಕ್ಷಣದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವೆಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಮಂದಿರ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಬಾಬು ದೊರೆಸ್ವಾಮಿ, ಸವಿತಾ, ಭಾರತಿ, ಹನುಮಂತರಾಜು, ಸುಬ್ಬರಾಜ ಅರಸ್ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೋದಂಡರಾಮಪುರ ಸರಕಾರಿ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ನಟ ದಿವಂಗತ ಪುನಿತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಕಾರಣಕ್ಕೆ ಅವರ ಹಾಡುಗಳಿಗೆ ಸಾಮೂಹಿಕ ನೃತ್ಯ ಪ್ರದರ್ಶನ ನೀಡಿದರು.

bengaluru

LEAVE A REPLY

Please enter your comment!
Please enter your name here