ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅಮಾನತು ಹಿಂಪಡೆದು ಮರುನೇಮಕ: ಕರ್ನಾಟಕ ಸರ್ಕಾರ ಆದೇಶ
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ (ಕೆಎನ್:1993) ಅವರ ಅಮಾನತನ್ನು ಕರ್ನಾಟಕ ಸರ್ಕಾರ ಹಿಂಪಡೆದು ತಕ್ಷಣದಿಂದಲೇ ಸೇವೆಗೆ ಮರುನೇಮಕ ಮಾಡಿದೆ.
ಮೇ 6, 2026ರಂದು ಹೊರಡಿಸಲಾದ ಸರ್ಕಾರದ ಆದೇಶದ ಪ್ರಕಾರ, ಡಾ. ರಾಮಚಂದ್ರ ರಾವ್ ಅವರನ್ನು ಮುಂದಿನ ಆದೇಶದವರೆಗೆ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್) ಹುದ್ದೆಗೆ ನಿಯೋಜಿಸಲಾಗಿದೆ.
ಡಾ. ರಾಮಚಂದ್ರ ರಾವ್ ಅವರು ಈ ಹಿಂದೆ ನಾಗರಿಕ ಹಕ್ಕುಗಳ ಜಾರಿಗೆ ಸಂಬಂಧಿಸಿದ ನಿರ್ದೇಶನಾಲಯದ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಜನವರಿ 19, 2026ರಂದು ಆಲ್ ಇಂಡಿಯಾ ಸರ್ವೀಸ್ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು, 1969ರ ನಿಯಮ 3(1)(a) ಅಡಿಯಲ್ಲಿ ಇಲಾಖಾ ತನಿಖೆ ಬಾಕಿ ಇರುವ ಹಿನ್ನೆಲೆ ಅವರನ್ನು ಅಮಾನತುಗೊಳಿಸಲಾಗಿತ್ತು.
ಸರ್ಕಾರದ ಆದೇಶದ ಪ್ರಕಾರ, ನಂತರ ಮಾರ್ಚ್ 18, 2026ರಂದು AIS (D&A) Rules, 1969ರ ನಿಯಮ 8(4) ಅಡಿಯಲ್ಲಿ ಇಲಾಖಾ ಶಿಸ್ತು ಕ್ರಮ ಪ್ರಾರಂಭಿಸಲಾಗಿತ್ತು.

ಪ್ರಕರಣದ ಪರಿಸ್ಥಿತಿಗಳನ್ನು ಪರಿಗಣಿಸಿ ಸರ್ಕಾರವು ಅಮಾನತು ಆದೇಶವನ್ನು ಹಿಂಪಡೆದು ಅಧಿಕಾರಿಯನ್ನು ಮರು ಸೇವೆಗೆ ಸೇರಿಸುವ ನಿರ್ಧಾರ ಕೈಗೊಂಡಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ, ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್) ಹುದ್ದೆಯನ್ನು ಐಪಿಎಸ್ ವೇತನ ನಿಯಮಗಳು 2016ರ ಪ್ರಕಾರ ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧ ವಿಭಾಗದ ಡಿಜಿಪಿ ಹುದ್ದೆಗೆ ಸಮಾನ ಸ್ಥಾನಮಾನ ಹಾಗೂ ಜವಾಬ್ದಾರಿಯ ಹುದ್ದೆಯೆಂದು ಘೋಷಿಸಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-4) ಸರ್ಕಾರದ ಪರವಾಗಿ ಈ ಆದೇಶ ಹೊರಡಿಸಿದೆ.
