Home ರಾಜಕೀಯ ಫೆಬ್ರವರಿ 14 ರಂದು ಜಂಟಿ ಅಧಿವೇಶನ : ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣ

ಫೆಬ್ರವರಿ 14 ರಂದು ಜಂಟಿ ಅಧಿವೇಶನ : ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣ

22
0
Karnataka Governor to address Joint Session on February 14
bengaluru

ಬೆಂಗಳೂರು:

ರಾಜ್ಯದ 15 ನೇ ವಿಧಾನ ಸಭೆಯ 12 ನೇ ಅಧಿವೇಶನವು  ಫೆಬ್ರವರಿ 14 ರಿಂದ 25 ರವರೆಗೆ ಬೆಂಗಳೂರಿನ ವಿಧಾನ ಸೌಧದ ವಿಧಾನ ಸಭಾ ಸಭಾಂಗಣದಲ್ಲಿ ನಡೆಯಲಿದೆ. ಅಲ್ಲದೆ, ಸಂಪ್ರದಾಯದಂತೆ ವರ್ಷದ ಈ ಮೊದಲ ಅಧಿವೇಶನದ ಸಂದರ್ಭದಲ್ಲಿ ಫೆಬ್ರವರಿ 14 ರಂದು ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ ಎಂದು ಸಭಾಧ್ಯಕ್ಷರು  ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಕಟಿಸಿದರು.

ರಾಜ್ಯಪಾಲರ ಭಾಷಣದ ನಂತರ ಮತ್ತೆ ಸದನವು ಸಮಾವೇಶಗೊಂಡು ಕಳೆದ ಅಧಿವೇಶನದ ನಂತರ ಹಾಗೂ ಪ್ರಸಕ್ತ ಅಧಿವೇಶನದ ಅವಧಿಯಲ್ಲಿ ಮೃತರಾದ ಸದನದ ಸದಸ್ಯರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರಿಗೆ ಸಂತಾಪ ಸೂಚಿಸಲಿದೆ. ಮರುದಿನದಿಂದ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸಂಬಂಧಿಸಿದಂತೆ ಚರ್ಚೆ ಸರ್ಕಾರದ ಉತ್ತರ ಮತ್ತು  ವಂದನಾ ನಿರ್ಣಯದ ಅಂಗೀಕಾರ, ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆಗಳು, ಶೂನ್ಯವೇಳೆ, ನಿಲುವಳಿ ಸೂಚನೆಗಳು, ನಿಯಮ 69ರ ಮೇಲಿನ ಸೂಚನೆಗಳು, ಖಾಸಗಿ ಸದಸ್ಯರ ಕಾರ್ಯಕಲಾಪಗಳನ್ನು ಹಾಗೂ ಇತರೆ ಪ್ರಾಮುಖ್ಯ ವಿಷಯಗಳ ಚರ್ಚೆಗೆ ಎಂದಿನಂತೆ ಅವಕಾಶವಿರುತ್ತದೆ ಎಂದು ಅವರು ಹೇಳಿದರು.

ಪ್ರಶ್ನೆಗಳ ಸ್ವೀಕಾರ : ರಾಜ್ಯ ವಿಧಾನ ಸಭೆಯಲ್ಲಿ ಈ ದಿನದ ವರೆಗೆ 2062 ಪ್ರಶ್ನೆಗಳು ಸ್ವೀಕಾರವಾಗಿವೆ.ಅಲ್ಲದೆ, 81 ಗಮನಸೆಳೆಯುವ ಸೂಚನೆಗಳು ಹಾಗೂ ನಿಯಮ 351 ಅಡಿಯಲ್ಲಿ 31 ಸೂಚನೆಗಳು ಸ್ವೀಕೃತವಾಗಿವೆ.

bengaluru

ಸದನದ ಕಲಾಪದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿಯವನ್ನೊಳಗೊಂಡಂತೆ ಎಲ್ಲಾ ಸಚಿವರು ಹಾಗೂ ಪ್ರತಿಪಕ್ಷದ ಎಲ್ಲಾ ಮುಖಂಡರೂ ಸೇರಿದಂತೆ ಎಲ್ಲಾ ಸದಸ್ಯರೂ ಮುಖಗವಸು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದೂ ಸೇರಿದಂತೆ ಕೋವಿಡ್ ಶಿಷ್ಠಾಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ ಸ್ವಾಸ್ಥ್ಯ ಕಾಪಾಡುವ ದೃಷ್ಠಿಯಿಂದ  ಈ ನಿಯಮಗಳು ಆಡಳಿತ ಯಂತ್ರಕ್ಕೆ ನೆರವು ಒದಗಿಸುವ ಅಧಿಕಾರಿ ಮತ್ತು ಸಿಬ್ಬಂದಿಗೂ ಹಾಗೂ ಸದನ ಕಲಾಪ ವರದಿ ಮಾಡಲು ಆಗಮಿಸುವ ಮಾಧ್ಯಮದವರಿಗೂ ಅನ್ವಯಿಸುತ್ತದೆ ಎಂದು ಕಾಗೇರಿ ಅವರು ತಿಳಿಸಿದರು.

ವೈಭವೋಪೇತ ಮೆಟ್ಟಿಲುಗಳಿಂದ ರಾಜ್ಯಪಾಲರ ಪ್ರವೇಶ !

ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸುವ ರಾಜ್ಯಪಾಲರು ವಿಧಾನ ಸೌಧದ ಪೂರ್ವದ್ವಾರದ ಆಕರ್ಷಣೆಗಳಲ್ಲೊಂದಾದ ವೈಭವೋಪೇತ ಮೆಟ್ಟಿಲುಗಳ ಮೂಲಕ ವಿಧಾನ ಸಭೆಯ ಸಭಾಂಗಣವನ್ನು ಪ್ರವೇಶಿಸಲಿದ್ದಾರೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಹಲವು ವರ್ಷಗಳಿಂದ ವಿವಿಧ ಕಾರಣಗಳಿಂದ ರಾಜ್ಯಪಾಲರು ಏರುತೇರು (ಲಿಫ್ಟ್) ಮೂಲಕ ಆಗಮಿಸುತ್ತಿದ್ದರು.

ರಾಜ್ಯ ವಿಧಾನ ಪರಿಷತ್ ಸಭಾಪತಿಯವರ ಜೊತೆಯಲ್ಲಿ ರಾಜ್ಯಪಾಲ ಥಾವದಯರ್ ಚಂದ್ ಗೆಹ್ಲೋಟ್ ಅವರನ್ನು ತಾವು ಭೇಟಿಯಾಗಿ ಈ ಬಗ್ಗೆ ವಿನಂತಿಸಿಕೊಂಡಾಗ ಜಂಟಿ ಅಧಿವೇಶನ ಭಾಷಣ ಮಾಡಲು ವೈಭವೋಪೇತ ಮೆಟ್ಟಿಲುಗಳನ್ನೇರಿ ವಿಧಾನ ಸಭೆಯ ಸಭಾಂಗಣಕ್ಕೆ ಪ್ರವೇಶಿಸಲು ರಾಜ್ಯಪಾಲರು ಸಮ್ಮತಿ ಸೂಚಿಸಿದ್ದಾರೆ ಎಂದು ಸಭಾಧ್ಯಕ್ಷರು ವಿವರಿಸಿದರು.

ಕಲಾಪ ವೀಕ್ಷಣೆಗೆ ಮತ್ತೆ ಸಾರ್ವಜನಿಕರಿಗೆ ಅವಕಾಶ !

ಕೋವಿಡ್-19 ರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದ್ದ ಸದನ ಕಲಾಪ ವೀಕ್ಷಣೆಗೆ ಮತ್ತೆ ಅವಕಾಶ ಕಲ್ಪಿಸಿರುವುದು ಈ ಬಾರಿಯ ಅಧಿವೇಶನದ ಗಮನಾರ್ಹ ವಿಷಯಗಳಲ್ಲೊಂದಾಗಿದೆ.

ಎರಡು ವಿಧೇಯಕಗಳು :

ಈ ಬಾರಿ ಸದನದಲ್ಲಿ ಮಂಡಿಸಲು ಎರಡು ವಿಧೇಯಕಗಳು ಸ್ವೀಕಾರವಾಗಿವೆ. ಕರ್ನಾಟಕ ಮುದ್ರಾಂಕ ( ಎರಡನೇ ತಿದ್ದುಪಡಿ ) ವಿಧೇಯಕ 2021 ಹಾಗೂ ದಂಡಪ್ರಕ್ರಿಯಾ ಕಾನೂನು ತಿದ್ದುಪಡಿ ಅಧ್ಯಾದೇಶ 1994 ( ಕರ್ನಾಟಕ ತಿದ್ದುಪಡಿ) ವಿಧೇಯಕ 2021

ಕಾಗದ-ರಹಿತ ಕಲ್ಪನೆಗೆ ಚಾಲನೆ :

ಸದನದಲ್ಲಿ ಉತ್ತರಿಸುವ ಚುಕ್ಕೆ ಗುರುತಿನ ಪ್ರಶ್ನೆಗಳು, ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು ಹಾಗೂ ಇತ್ಯಾದಿ ಸೂಚನೆಗಳಿಗೆ ಸರ್ಕಾರ ಒದಗಿಸುವ ಲಿಖಿತ ಉತ್ತರಗಳನ್ನು ಸದನದಲ್ಲಿ ಮಂಡಿಸಿದ ತರುವಾಯ ಸದಸ್ಯರಿಗೆ ಹಾಗೂ ಮಾಧ್ಯಮದವರಿಗೆ ಮಿಂಚಂವೆಯ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ವಿಧಾನ ಸಭಾ ಸಚಿವಾಲಯದ ಅಂತರ್ಜಾಲ ತಾಣದಲ್ಲಿಯೂ ಈ ಮಾಹಿತಿ ಲಭ್ಯ ಎಂದು ಸಭಾಧ್ಯಕ್ಷರು ಮಾಹಿತಿ ನೀಡಿದರು.

ಚುನಾವಣಾ ವ್ಯವಸ್ಥೆ ಸುಧಾರಣೆ : ಸದನದಲ್ಲಿ ಚರ್ಚೆ :

ಪ್ರಜಾಪ್ರಭುತ್ವದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಚುನಾವಣಾ ವ್ಯವಸ್ಥೆಯ ಸುಧಾರಣೆಗಳ ಕುರಿತು ಸದನ ಕಾರ್ಯಕಲಾಪ ಸಮಿತಿಯಲ್ಲಿ ಚರ್ಚಿಸಿ, ಈ ವಿಷಯ ಕುರಿತು ಸದನದಲ್ಲಿ ವಿಸ್ತøತ ರ್ಚೆಗೆ ಕಾಲಾವಕಾಶ ಮಾಡಿಕೊಡಲು ಸೂಕ್ತ ದಿನಾಂಕ ಮತ್ತು ಸಮಯವನ್ನು ನಿಷ್ಕರ್ಶೆ ಮಾಡಲಾಗುವುದು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ನುಡಿದರು.  

ಇಂತಹುದೇ ವಿಷಯಗಳ ಮೇಲೆ ಈ ಹಿಂದೆ ನಡೆದ ಚರ್ಚೆಗಳು ಫಲಪ್ರದವಾಗಿಲ್ಲ. ಆದಕಾರಣ, ಇಂತಹ ಚರ್ಚೆಗಳು ಸಾರ್ವಜನಿಕ ಸಮಯವನ್ನು ಕಬಳಿಸುತ್ತದೆ. ಅಲ್ಲವೇ ? ಎಂದು ಪತ್ರಕರ್ತರೋರ್ವರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿ, ಭಾರತಕ್ಕೆ ಒಂದು ಸಂವಿಧಾನ ಅಗತ್ಯವಿದೆ ಎಂದು ಮೊತಿಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ 1927ರಲ್ಲಿ ನಡೆದ ಅಂದಿನ ಕಾಂಗ್ರೆಸ್ ಅಧಿವೇಶನದಲ್ಲಿ ಚಿಗುರೊಡೆದ ಆಶಯವು 1950 ರಲ್ಲಿ ಸಾಕಾರಗೊಂಡಿತು. ಯಾವುದೇ ವಿಷಯವು ಚರ್ಚೆಯೇ ಆಗದಿದ್ದಲ್ಲಿ ಬೆಳಕು ಕಾಣುವುದು ಹೇಗೆ ? ಎಂದು ಪ್ರಶ್ನಿಸಿದ ಸಭಾಧ್ಯಕ್ಷರು ಕೆಲಕಾಲ ಭಾವುಕರಾದರು.

ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ. ಕೆ. ವಿಶಾಲಾಕ್ಷಿ ಅವರೂ ಸೇರಿದಂತೆ ವಿಧಾನ ಸಭಾ ಸಚಿವಾಲಯದ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

bengaluru

LEAVE A REPLY

Please enter your comment!
Please enter your name here