Image: Supplied
ಬೆಂಗಳೂರು: ಪತ್ರಿಕೆಗಳಿಗೆ ಸರ್ಕಾರ ನೀಡುವ ಪ್ರೋತ್ಸಾಹ ಜಾಹೀರಾತು ವೆಚ್ಚವು 2022ರಲ್ಲಿ ₹44 ಕೋಟಿಯಿಂದ 2025-26ರಲ್ಲಿ ₹82 ಕೋಟಿಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಪತ್ರಿಕೆಗಳ ನೋಂದಣಿ, ಹಾಜರಾತಿ ಮತ್ತು ಪ್ರಸಾರ ಸಂಖ್ಯೆಯ ಮೇಲೆ ಇನ್ನಷ್ಟು ಕಟ್ಟುನಿಟ್ಟಿನ ನಿಗಾ ಅಗತ್ಯವಿದೆ ಎಂದು ರಾಜ್ಯದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರವು ಪತ್ರಿಕೆ ಮತ್ತು ನಿಯತಕಾಲಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲ್ಗೊಳಿಸಿ ‘ಪ್ರೆಸ್ ಸೇವಾ ಪೋರ್ಟಲ್’ ಮೂಲಕ ಸರಳ ಮತ್ತು ವೇಗವಾದ ವ್ಯವಸ್ಥೆ ಜಾರಿಗೆ ತಂದಿದೆ.
ಬೆಂಗಳೂರಿನ ವಾರ್ತಾಸೌಧದ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರದಲ್ಲಿ “ಪತ್ರಿಕಾ ಮತ್ತು ನಿಯತಕಾಲಿಕೆಗಳ ನೋಂದಣಿ ಕಾಯ್ದೆ 2023” ಹಾಗೂ “ಪ್ರೆಸ್ ಸೇವಾ ಪೋರ್ಟಲ್” ಸಂಬಂಧಿತ ಸಮಸ್ಯೆಗಳು ಮತ್ತು ಕುಂದುಕೊರತೆಗಳ ನಿವಾರಣೆಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ನೋಂದಣಿ ಸರಳೀಕರಣದ ಜೊತೆಗೆ ಸರ್ಕಾರದ ಪ್ರೋತ್ಸಾಹ ನಿಜವಾದ ಪತ್ರಿಕೋದ್ಯಮದಲ್ಲಿ ತೊಡಗಿರುವವರಿಗೆ ತಲುಪಬೇಕೆಂಬ ವಿಚಾರವೂ ಪ್ರಮುಖವಾಗಿ ಚರ್ಚೆಗೆ ಬಂದಿತು.
ಭಾರತದ ಪತ್ರಿಕಾ ನೋಂದಣಿಯ ಪ್ರಧಾನ ಮಹಾನಿರ್ದೇಶಕ ಯೋಗೇಶ್ ಕುಮಾರ್ ಬವೇಜಾ ಮಾತನಾಡಿ, ಸುಮಾರು 150 ವರ್ಷಗಳಷ್ಟು ಹಳೆಯ ಕಾನೂನು ವ್ಯವಸ್ಥೆಯಡಿ ನಡೆಯುತ್ತಿದ್ದ ಪತ್ರಿಕೆ ಮತ್ತು ನಿಯತಕಾಲಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ 2023ರ ಹೊಸ ಕಾಯ್ದೆಯ ಮೂಲಕ ಸಂಪೂರ್ಣ ಡಿಜಿಟಲ್ ಹಾಗೂ ಸರಳಗೊಳಿಸಿದೆ ಎಂದು ತಿಳಿಸಿದರು.
ಹಿಂದೆ ಹೊಸ ಪತ್ರಿಕೆ ಆರಂಭಿಸಬೇಕಾದರೆ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಅರ್ಜಿ ಸಲ್ಲಿಸಿ ಅದನ್ನು ದೆಹಲಿಗೆ ಕಳುಹಿಸಬೇಕಾಗುತ್ತಿತ್ತು. ಈ ಪ್ರಕ್ರಿಯೆಗೆ ತಿಂಗಳುಗಳು, ಕೆಲವೊಮ್ಮೆ ವರ್ಷಗಳೇ ಕಳೆಯುತ್ತಿದ್ದವು ಎಂದು ಅವರು ಹೇಳಿದರು.
ಇನ್ನು ಮುಂದೆ ನೋಂದಣಿ ಪ್ರಕ್ರಿಯೆಯೆಲ್ಲ ‘ಪ್ರೆಸ್ ಸೇವಾ ಪೋರ್ಟಲ್’ ಮೂಲಕ ಆನ್ಲೈನ್ನಲ್ಲಿ ನಡೆಯಲಿದ್ದು, ಭೌತಿಕ ದಾಖಲೆಗಳನ್ನು ಸಲ್ಲಿಸುವ ವ್ಯವಸ್ಥೆ ಇರುವುದಿಲ್ಲ.
ಇದರಿಂದ ದಾಖಲೆಗಳು ಕಳೆದುಹೋಗುವುದು, ಕಡತಗಳಿಗಾಗಿ ಕಚೇರಿಗಳಿಗೆ ಅಲೆದಾಟ ಮತ್ತು ಪ್ರಕ್ರಿಯೆಯಲ್ಲಿನ ಅನಗತ್ಯ ವಿಳಂಬ ಕಡಿಮೆಯಾಗಲಿದೆ ಎಂದು ಬವೇಜಾ ಹೇಳಿದರು.
ಅರ್ಜಿಯನ್ನು ಸಲ್ಲಿಸಿದ ಮೂರು ತಿಂಗಳೊಳಗೆ ಹೊಸ ಪತ್ರಿಕೆ ಆರಂಭಿಸುವ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ಕಾಲಮಿತಿಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
PRGI ಸಮಗ್ರ ಪರಿಶೀಲನೆಯ ನಂತರ ಅಂತಿಮವಾಗಿ ಶೀರ್ಷಿಕೆ ಅನುಮೋದನೆ ನೀಡಿದ ಬಳಿಕ 12 ತಿಂಗಳೊಳಗೆ ಪತ್ರಿಕೆಯನ್ನು ಆರಂಭಿಸುವುದು ಕಡ್ಡಾಯವಾಗಿರುತ್ತದೆ ಎಂದರು.
ಹೊಸ ನೋಂದಣಿ ಮಾತ್ರವಲ್ಲದೆ, ಹೊಸ ಆವೃತ್ತಿ ಸೇರ್ಪಡೆ, ನೋಂದಣಿ ವಿವರಗಳ ಪರಿಷ್ಕರಣೆ, ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ದಂಡ ಪಾವತಿ, ಮುದ್ರಣ ಕಾಗದ ಆಮದು ಹಾಗೂ ಪತ್ರಿಕೆ ಸ್ಥಗಿತಗೊಳಿಸುವಿಕೆ ಅಥವಾ ರದ್ದುಪಡಿಸುವಿಕೆ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಡಿಜಿಟಲ್ ಮೂಲಕ ನಡೆಸಲು ಅವಕಾಶವಿದೆ ಎಂದು ಅವರು ವಿವರಿಸಿದರು.
ಸಂವಾದದ ವೇಳೆ ಸಂಪಾದಕರು ಮತ್ತು ಜಿಲ್ಲಾ ವಾರ್ತಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಬವೇಜಾ, ಕಾರ್ಯಾಗಾರದಲ್ಲಿ ಬಂದ ಸಲಹೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಗಮನಕ್ಕೆ ತರಲಾಗುವುದು ಎಂದರು.
ಕರ್ನಾಟಕದಲ್ಲಿರುವ ಕೇಂದ್ರ ವಾರ್ತಾ ಇಲಾಖೆಯ ಶಾಖೆಗಳಲ್ಲಿ ಪತ್ರಿಕೆಗಳ ಹಾಜರಾತಿಗಾಗಿ ಮುದ್ರಿತ ಪ್ರತಿಗಳನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ಸಾಧ್ಯತೆಯನ್ನೂ ಪರಿಶೀಲಿಸಲಾಗುವುದು ಎಂದು ಹೇಳಿದರು.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರು ಶಾಖೆ ಹಾಗೂ ಕರ್ನಾಟಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತವಾಗಿ ಈ ಕಾರ್ಯಾಗಾರ ಆಯೋಜಿಸಿದ್ದವು.
ಪ್ರೋತ್ಸಾಹ ಜಾಹೀರಾತು ವೆಚ್ಚ ಏರಿಕೆಗೆ ಸರ್ಕಾರದ ಕಳವಳ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಂ.ಎನ್. ಅನುಚೇತ್ ಮಾತನಾಡಿ, ದಿನಪತ್ರಿಕೆಗಳಿಗೆ ಸರ್ಕಾರ ಬೆಂಬಲವಾಗಿ ಪ್ರೋತ್ಸಾಹ ಜಾಹೀರಾತುಗಳನ್ನು ನೀಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೋತ್ಸಾಹ ಜಾಹೀರಾತು ಪಡೆಯುವುದನ್ನೇ ಉದ್ದೇಶವಾಗಿಟ್ಟುಕೊಂಡು ಕೆಲವು ಪತ್ರಿಕೆಗಳು ಆರಂಭವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
2022ರಲ್ಲಿ ಪ್ರೋತ್ಸಾಹ ಜಾಹೀರಾತುಗಳಿಗೆ ₹44 ಕೋಟಿ ವೆಚ್ಚವಾಗಿದ್ದರೆ, 2025-26ರ ವೇಳೆಗೆ ಈ ಮೊತ್ತ ₹82 ಕೋಟಿಗೆ ಏರಿದೆ ಎಂದು ಅನುಚೇತ್ ತಿಳಿಸಿದರು.
ನಿಜವಾಗಿಯೂ ಪತ್ರಿಕೋದ್ಯಮವನ್ನೇ ವೃತ್ತಿಯಾಗಿ ಮಾಡಿಕೊಂಡಿರುವವರಿಗೆ ಸರ್ಕಾರದ ಪ್ರೋತ್ಸಾಹ ತಲುಪಬೇಕು ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಪತ್ರಿಕೆಗಳ ನೋಂದಣಿ, ಹಾಜರಾತಿ ಹಾಗೂ ಪ್ರಸಾರ ಸಂಖ್ಯೆಯ ಪರಿಶೀಲನೆ ಮತ್ತಷ್ಟು ಕಟ್ಟುನಿಟ್ಟಾಗಬೇಕು ಎಂದು ಅಭಿಪ್ರಾಯಪಟ್ಟ ಅವರು, ರಾಜ್ಯದ ಮಾಧ್ಯಮ ಸಂಸ್ಥೆಗಳು ಸಹಕರಿಸಬೇಕೆಂದು ಮನವಿ ಮಾಡಿದರು.
ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಮಾಧ್ಯಮದ ಯುಗದಲ್ಲಿ “ನಿಜವಾದ ಪತ್ರಕರ್ತ ಯಾರು?” ಎಂಬ ಪ್ರಶ್ನೆಯೂ ಗಂಭೀರವಾಗುತ್ತಿದೆ ಎಂದು ಅನುಚೇತ್ ಹೇಳಿದರು.
“ಪತ್ರಕರ್ತ” ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನ ನೀಡುವ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಂಭೀರ ಚರ್ಚೆ ನಡೆಯಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.
PRGI ಪತ್ರಿಕೆಗಳ ನೋಂದಣಿ ಮತ್ತು ನಿರ್ವಹಣೆಯ ಮೇಲೆ ಗಮನಹರಿಸುತ್ತಿದ್ದರೂ, ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಕರ್ತ ಎಂಬ ಪದದ ಸ್ಪಷ್ಟ ವ್ಯಾಖ್ಯಾನ ಅಗತ್ಯವಾಗಿದೆ ಎಂದು ಹೇಳಿದರು.
ಮಾಧ್ಯಮ ಪಟ್ಟಿಗೆ ಸೇರುವ ಪತ್ರಿಕೆಗಳ ಸಂಖ್ಯೆ ಹೆಚ್ಚಳ
ಇದಕ್ಕೂ ಮೊದಲು ಮಾತನಾಡಿದ ವಾರ್ತಾ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್, ಇಲಾಖೆಯ ಮಾಧ್ಯಮ ಪಟ್ಟಿಗೆ ಸೇರ್ಪಡೆಯಾಗುತ್ತಿರುವ ಪತ್ರಿಕೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ತಿಳಿಸಿದರು.
ಪತ್ರಿಕೆಗಳ ಸಂಖ್ಯೆ ಹೆಚ್ಚಾದಂತೆ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದೆ. ಹೀಗಾಗಿ ನೋಂದಣಿ, ಹಾಜರಾತಿ ಮತ್ತು ಪ್ರಸಾರ ಸಂಖ್ಯೆಯ ಮೇಲೆ ಹೆಚ್ಚಿನ ನಿಗಾ ಅಗತ್ಯವಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ, ChatGPT ಮತ್ತು ಇತರ ತಂತ್ರಜ್ಞಾನಗಳ ಕಾಲದಲ್ಲಿ ದಿನಪತ್ರಿಕೆಗಳ ಹಾಜರಾತಿಗಾಗಿ 48 ಗಂಟೆಗಳ ಕಾಲಾವಕಾಶ ಇನ್ನೂ ಅಗತ್ಯವೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಮಂಜುನಾಥ್ ಅಭಿಪ್ರಾಯಪಟ್ಟರು.
ಪ್ರಸಾರ ಸಂಖ್ಯೆಯ ಮೇಲೂ ಕಟ್ಟುನಿಟ್ಟಿನ ಪರಿಶೀಲನೆ ಅಗತ್ಯವಿದೆ ಎಂದರು.
ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಬಣ್ಣಿಸಿದ ಅವರು, ಸಮಾಜದಲ್ಲಿ ಹಲವು ಸಮಸ್ಯೆಗಳಿದ್ದರೂ ಪತ್ರಿಕೆಗಳು ಕೇವಲ ನಕಾರಾತ್ಮಕ ವಿಷಯಗಳಿಗೆ ಆದ್ಯತೆ ನೀಡದೆ ಆಶಾದಾಯಕ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮಕ್ಕೂ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
“ಪತ್ರಿಕಾ ಮತ್ತು ನಿಯತಕಾಲಿಕೆಗಳ ನೋಂದಣಿ ಕಾಯ್ದೆ 2023” ಹಾಗೂ “ಪ್ರೆಸ್ ಸೇವಾ ಪೋರ್ಟಲ್” ಸಂಬಂಧಿತ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ಪರಿಹರಿಸುವ ಉದ್ದೇಶದಿಂದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ರಾಜ್ಯದ ವಿವಿಧ ಜಿಲ್ಲೆಗಳ ದಿನಪತ್ರಿಕೆಗಳ ಮಾಲೀಕರು, ಸಂಪಾದಕರು, ಮುದ್ರಕರು ಹಾಗೂ ಜಿಲ್ಲಾ ವಾರ್ತಾಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಬೆಂಗಳೂರಿನ ದೂರದರ್ಶನ ಕೇಂದ್ರದ ಮುಖ್ಯಸ್ಥ ಬಿ.ಕೆ. ಕೇಶವಮೂರ್ತಿ ಕಾರ್ಯಾಗಾರದ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
NIC ಉಪನಿರ್ದೇಶಕ ಗೌರವ್ ಶರ್ಮಾ, ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಗಳು, ಜಂಟಿ ನಿರ್ದೇಶಕರು, ಉಪನಿರ್ದೇಶಕರು, ರಾಜ್ಯದ ವಿವಿಧ ಜಿಲ್ಲೆಗಳ ವಾರ್ತಾಧಿಕಾರಿಗಳು ಹಾಗೂ ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳ ಮಾಲೀಕರು ಮತ್ತು ಸಂಪಾದಕರು ಉಪಸ್ಥಿತರಿದ್ದರು.
