ಬೆಂಗಳೂರು:
ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು ಸಮಗ್ರ ಅಭಿವೃದ್ಧಿ ಯೋಜನೆ ನಕ್ಷೆ (Comprehensive Development Plan) ತಯಾರಿಸಲು ಆಯುಕ್ತರು ಗಳಿಗೆ ಮಾನ್ಯ ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ ಅವರು ಸೂಚಿಸಿದ್ದಾರೆ.
ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಯುಕ್ತರ ಸಭೆ ವಿಕಾಸ ಸೌಧದಲ್ಲಿ ಇಂದು ಮಧ್ಯಾಹ್ನ ನಗರಾಭಿವೃದ್ಧಿ ಸಚಿವರಾದ ಶ್ರೀ ಬಸವರಾಜ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಆಯುಕ್ತರು ಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಬಸವರಾಜ ಅವರು 2021 ಸೆಪ್ಟೆಂಬರ್ 30 ರೊಳಗೆ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಗೆ ಬರುವ ಬಡಾವಣೆ ಅಭಿವೃದ್ಧಿ, ನಗರ ಅಭಿವೃದ್ಧಿ, ಕೆರೆ ಅಭಿವೃದ್ಧಿ ಸೇರಿದಂತೆ ಇತರೆ ಯೋಜನೆಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಸಿಡಿಪಿ ಯನ್ನು ನಗರಾಭಿವೃದ್ಧಿ ಇಲಾಖೆ ಮತ್ತು ನಗರ ಹಾಗೂ ಗ್ರಾಮಾಂತರ ಯೋಜನಾ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು ಎಂದು ಗಡುವು ನೀಡಿದರು.
ಕೆಲ ಪ್ರಾಧಿಕಾರದ ಅಭಿವೃದ್ಧಿ ಯೋಜನೆ ವಿಚಾರದಲ್ಲಿ ಪ್ರಕರಣಗಳು ಇರುವುದರಿಂದ ಅಂತಹ ಪ್ರಾಧಿಕಾಗಳಿಗೆ ಅಕ್ಟೋಬರ್ ಮತ್ತು ನವೆಂಬರ್ 30 ರೊಳಗೆ ಸಲ್ಲಿಸಲು ಅವಕಾಶ ನೀಡಿದ್ದಾರೆ.
ಕೆಲ ಪ್ರಾಧಿಕಾರದ ಸುಪರ್ದಿಯಲ್ಲಿ ಇರುವ ಮೂಲೆ ಮತ್ತು ಮಧ್ಯಂತರ ನಿವೇಶನಗಳನ್ನು ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಲು ಸೂಚಿಸಿದರು. ಇದರಿಂದ ಪ್ರಾಧಿಕಾರಕ್ಕೆ ಆದಾಯ ಬರುತ್ತದೆ ಎಂದರು.
ಅಲ್ಲದೇ ಹೊಸ ಬಡಾವಣೆ ನಿರ್ಮಾಣಕ್ಕೆ ಒತ್ತು ನೀಡುವ ಮೂಲಕ ನಗರಾಭಿವೃದ್ಧಿ ಪ್ರಾಧಿಕಾರಗಳ ಸಂಪನ್ಮೂಲ ಹೆಚ್ಚಿಸಬಹುದು ಮತ್ತು ಪ್ರಾಧಿಕಾರದ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾನೂನು ತೊಡಕು ಇದ್ದಲ್ಲಿ ಅದನ್ನು ಇಲಾಖೆಯ ಕಾರ್ಯದರ್ಶಿ, ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ನಿವಾರಿಸಿಕೊಳ್ಳಲು ಮುಂದಾಗಬೇಕು ಎಂದು ಆಯುಕ್ತರು ಗಳಿಗೆ ಸೂಚಿಸಿದರು.
ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀ ಎಂ.ಎನ್. ಅಜಯ್ ನಾಗಭೂಷಣ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯದ ನಿರ್ದೇಶಕ ಎಲ್.ಶಶಿಕುಮಾರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.