ಬೆಂಗಳೂರು:
ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸಂಬಂಧಿಸಿದ ಸಂಘಟನೆಗಳೊಂದಿಗೆ ಚರ್ಚಿಸಿಯೇ ಪರಿಹರಿಸಲಾಗಿದ್ದು, ಅವರು ಬಯಸಿದ್ದಕ್ಕಿಂತ ಹೆಚ್ಚಿನ ವೇತನವನ್ನು ಘೋಷಿಸಲಾಗಿದೆ. ಆದರೆ, ಈಗ ಕೆಲವು ಸಂಘಟನೆಗಳು ಈ ವಿಚಾರಕ್ಕೆ ಅನಗತ್ಯವಾಗಿ ರಾಜಕೀಯ ಬಣ್ಣ ಬಳಿಯುತ್ತಿರುವುದು ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಜನರ ವೇತನ ಏರಿಕೆಯನ್ನು ಸಚಿವರು ಶನಿವಾರ ಪ್ರಕಟಿಸಿದ್ದರು. ಇದಾದ ನಂತರ ಮುಷ್ಕರನಿರತ ಉಪನ್ಯಾಸಕರು ತಾವು ಮುಷ್ಕರವನ್ನು ನಿಲ್ಲಿಸುವುದಿಲ್ಲ ಎನ್ನುತ್ತಿರುವ ಬಗ್ಗೆ ಸುದ್ದಿಗಾರರು ಭಾನುವಾರ ಇಲ್ಲಿ ಕೇಳಿದ ಪ್ರಶ್ನೆಗಳಿಗೆ ಸಚಿವರು ಹೀಗೆಂದು ಉತ್ತರಿಸಿದರು.
ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದು, ಇವರಲ್ಲಿ 4,500 ಮಂದಿ ಮಾತ್ರ ಯುಜಿಸಿ ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ. ಸರಕಾರವು ಇವರ ವೇತನವನ್ನು ಗೌರವಾರ್ಹವಾಗಿ ಹೆಚ್ಚಿಸಬೇಕೆಂದು ಮುಷ್ಕರನಿರತ ಸಂಘಟನಗಳೇ ಹೇಳಿದ್ದವು. ಸರಕಾರ ಇದಕ್ಕೆ ಸ್ಪಂದಿಸಿದ್ದು, ದುಪ್ಪಟ್ಟಿಗಿಂತಲೂ ಹೆಚ್ಚು ವೇತನ ಏರಿಸಿದೆ. ಇಷ್ಟಾದಮೇಲೆ ಅತಿಥಿ ಉಪನ್ಯಾಸಕರು ಹಠ ತಳೆದಿರುವುದು ಬೇಸರದ ಸಂಗತಿ ಎಂದು ಅವರು ಹೇಳಿದರು.
ಸೇವಾ ಭದ್ರತೆ ನೀಡುವುದಕ್ಕೂ ಸಾಧ್ಯ ಇಲ್ಲ ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.