ಬೆಂಗಳೂರು:
ಜನಸಾಮಾನ್ಯರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು, ಸರ್ಕಾರವು ರೈಲ್ವೆ ಗೇಟ್, ಕ್ರಾಸಿಂಗ್‌ಗಳನ್ನು ತೆರವುಗೊಳಿಸಿ, ರೈಲ್ವೆ ಅಂಡರ್‌ಪಾಸ್(ಕೆಳಸೇತುವೆ)ಗಳನ್ನು ನಿರ್ಮಿಸಿದ್ದು, ಇವುಗಳು ಬಳಕೆಯು ಜನಸ್ನೇಹಿಯಾಗಿರಬೇಕು ಎಂದು ವಸತಿ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದರು.
ಇಂದು ರೈಲ್ವೆ ಬಸ್ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರಯಾಣಿಸಿ, ದೇವನಹಳ್ಳಿ ತಾಲ್ಲೂಕಿನ ಇರಿಗೇನಹಳ್ಳಿ, ಹಾರೋಹಳ್ಳಿ, ಯರತಗಾನಹಳ್ಳಿ, ಐವಿಸಿ ರಸ್ತೆ ಮತ್ತು ಹಕ್ಕುಪೇಟೆ ಗ್ರಾಮದಲ್ಲಿರುವ ರೈಲ್ವೆ ಕೆಳಸೇತುವೆಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈಲ್ವೆ ಅಂಡರ್‌ಪಾಸ್‌ಗಳಿಗೆ ಮಳೆಗಾಲದಲ್ಲಿ ಕೆರೆಕೋಡಿ ಹರಿದು, ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ. ಈ ದೂರಿನ ಹಿನ್ನೆಲೆಯಲ್ಲಿ ಪರಿಶೀಲಿಸಿದ ಸಚಿವರು ಅವೈಜ್ಞಾನಿಕ ಕಾಮಗಾರಿಗಳನ್ನು ಬಹುಬೇಗ ಪೂರ್ಣಗೊಳಿಸಿ ಅಡೆತಡೆ ರಹಿತ ಪ್ರಯಾಣಕ್ಕೆ ಪೂರಕವಾಗಿರುವಂತಿರಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶಿಥಿಲಗೊಂಡಿರುವ ದೊಡ್ಡಜಾಲ, ಆವತಿ, ವೆಂಕಟಗಿರಿಕೋಟೆ, ನಂದಿಗ್ರಾಮ ರೈಲ್ವೆ ನಿಲ್ದಾಣಗಳನ್ನು ಸರಿಪಡಿಸುವಂತೆ ಸಂಬಂಧಿಸಿದ ಶಾಸಕರುಗಳಿಂದ ಕೋರಿಕೆ ಬಂದಿದ್ದು, ಪ್ರಯಾಣಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದೇವನಹಳ್ಳಿ ಶಾಸಕರಾದ ಎಲ್.ಎನ್.ನಿಸರ್ಗ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.