ಸಂಗ್ರಹ ಚಿತ್ರ: ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಂದ ದಾಖಲೆ ಸ್ವೀಕರಿಸುತ್ತಿರುವ ಫಲಾನುಭವಿ. ಚಿತ್ರ: ಲಭ್ಯವಾದದ್ದು
ಬೆಂಗಳೂರು: ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳು ಸೇರಿದಂತೆ ರಾಜ್ಯದ ಎಲ್ಲ ನಾಗರಿಕ ಸೇವಾ ಕೇಂದ್ರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ‘ಪ್ರಜಾ ಸೇವಾ ಕೇಂದ್ರ’ ಎಂದು ಮರುನಾಮಕರಣ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ ಎಂದು ರಾಜ್ಯ ವಾರ್ತಾ ಇಲಾಖೆ (ಕರ್ನಾಟಕ ವಾರ್ತೆ) ಗುರುವಾರ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.
ಪ್ರಜಾಸೇವಾ ಇಲಾಖೆಯ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ (ಇಡಿಸಿಎಸ್) ಅಡಿಯಲ್ಲಿ ಬೆಂಗಳೂರು ನಗರದಲ್ಲಿ ‘ಬೆಂಗಳೂರು ಒನ್’, ಇತರೆ ನಗರ ಹಾಗೂ ಪಟ್ಟಣಗಳಲ್ಲಿ ‘ಕರ್ನಾಟಕ ಒನ್’ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ‘ಗ್ರಾಮ ಒನ್’ ಎಂಬ ಹೆಸರುಗಳಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲಾಗುತ್ತಿತ್ತು. ರಾಜ್ಯಾದ್ಯಂತ ಈ ಕೇಂದ್ರಗಳು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಕಾರಣ, ಸೇವೆಗಳ ವಿತರಣೆಯಲ್ಲಿ ಏಕರೂಪತೆ ತರುವ ಉದ್ದೇಶದಿಂದ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಈ ಮರುನಾಮಕರಣ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
2026ರ ನವೆಂಬರ್ 18ರಿಂದ ರಾಜ್ಯದ ಎಲ್ಲ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳನ್ನು ‘ಪ್ರಜಾ ಸೇವಾ ಕೇಂದ್ರ’ ಎಂದು ಕರೆಯಲಾಗುವುದು. ಇನ್ನು ಮುಂದೆ ಎಲ್ಲ ಅಧಿಕೃತ ಪತ್ರ ವ್ಯವಹಾರಗಳು, ನಾಮಫಲಕಗಳು, ವೆಬ್ ಪೋರ್ಟಲ್‌ಗಳು, ತಂತ್ರಾಂಶಗಳು (ಸಾಫ್ಟ್‌ವೇರ್), ರಸೀದಿಗಳು (ಸ್ವೀಕೃತಿಗಳು) ಹಾಗೂ ಪ್ರಚಾರ ಸಾಮಗ್ರಿಗಳಲ್ಲಿ ಇದೇ ಹೆಸರನ್ನು ಬಳಸಬೇಕು.
ಎಲ್ಲ ಪ್ರಜಾ ಸೇವಾ ಕೇಂದ್ರಗಳಿಗೆ ನಾಮಫಲಕದ ವಿನ್ಯಾಸ, ಲಾಂಛನ, ಬಣ್ಣದ ವಿನ್ಯಾಸ ಸೇರಿದಂತೆ ಏಕರೂಪದ ಬ್ರಾಂಡಿಂಗ್ ರೂಪಿಸಿ ಸರ್ಕಾರದ ಅನುಮೋದನೆ ಪಡೆಯುವಂತೆ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.
ಕೇಂದ್ರಗಳ ನಿರ್ವಾಹಕರು ಹಾಗೂ ಫ್ರಾಂಚೈಸಿಗಳೊಂದಿಗಿನ ಒಪ್ಪಂದಗಳಲ್ಲೂ ಹೊಸ ಹೆಸರನ್ನು ಅಳವಡಿಸಬೇಕು. ಈ ಆದೇಶವನ್ನು ರಾಜ್ಯಾದ್ಯಂತ ಅತ್ಯಂತ ಆದ್ಯತೆಯ ಮೇರೆಗೆ ಜಾರಿಗೊಳಿಸುವಂತೆ ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಆದೇಶ ಹೊರಡಿಸಿದ್ದಾರೆ.
