ಸಂಗ್ರಹ ಚಿತ್ರ: ನವೆಂಬರ್ 14ರಂದು ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರದಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಸಭೆ. ಚಿತ್ರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಕಟಣೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿರುವ ನಾಗರಿಕರ ಕುಂದುಕೊರತೆಗಳನ್ನು ಸ್ಥಳೀಯ ಮಟ್ಟದಲ್ಲೇ ತ್ವರಿತವಾಗಿ ಆಲಿಸಿ ಪರಿಹರಿಸಲು ಜಿಬಿಎ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ‘ಪ್ರಜಾ ಸೇವಾ ಅಭಿಯಾನ (ಪಿಎಸ್‌ಎ) ಜನಸಭೆ’ಗಳನ್ನು ಆಯೋಜಿಸಲು ಪ್ರಜಾಸೇವಾ ಇಲಾಖೆ ನೂತನ ಸುತ್ತೋಲೆ ಹೊರಡಿಸಿದೆ ಎಂದು ರಾಜ್ಯ ವಾರ್ತಾ ಇಲಾಖೆ ಗುರುವಾರ ತಿಳಿಸಿದೆ.
ಜಿಲ್ಲೆಗಳಲ್ಲಿ ನಡೆಯುತ್ತಿರುವ ತಾಲ್ಲೂಕು ಮತ್ತು ಹೋಬಳಿ ಮಟ್ಟದ ಜನಸಭೆಗಳ ಮಾದರಿಯಲ್ಲೇ, ನಗರ ಪ್ರದೇಶಕ್ಕೆ ಅನುಗುಣವಾಗಿ ಈ ಸಭೆಗಳನ್ನು ನಡೆಸಲಾಗುವುದು. ಜಿಬಿಎ ವ್ಯಾಪ್ತಿಯಲ್ಲಿ 5 ನಗರ ಪಾಲಿಕೆಗಳು, 10 ವಲಯಗಳು, 50 ವಿಭಾಗಗಳು, 150 ಉಪವಿಭಾಗಗಳು, 369 ವಾರ್ಡ್‌ಗಳು ಹಾಗೂ 28 ವಿಧಾನಸಭಾ ಕ್ಷೇತ್ರಗಳಿದ್ದು, ಈ ಆಡಳಿತಾತ್ಮಕ ರಚನೆಗೆ ಪೂರಕವಾಗಿ ಎರಡು ವಿಧದ ಜನಸಭೆಗಳನ್ನು ನಡೆಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
ವಲಯ ಮಟ್ಟದ ಜನಸಭೆ (ತಾಲ್ಲೂಕು ಮಟ್ಟದ ಜನಸಭೆಗೆ ಸಮಾನ): ಪ್ರತಿ ಶನಿವಾರ ಜಿಬಿಎ ವ್ಯಾಪ್ತಿಯ ಒಂದು ಸ್ಥಳದಲ್ಲಿ ಈ ಸಭೆ ನಡೆಯಲಿದೆ. ಮೊದಲಿಗೆ 10 ವಲಯಗಳ ಕೇಂದ್ರ ಕಚೇರಿಗಳಲ್ಲಿ ಸರದಿಯಂತೆ ನಡೆದು, ನಂತರ ವಿಭಾಗ ಕೇಂದ್ರ ಕಚೇರಿಗಳಲ್ಲಿ ಆಯೋಜಿಸಲಾಗುತ್ತದೆ. ತಿಂಗಳ ಮೊದಲನೇ, ಮೂರನೇ ಮತ್ತು ಐದನೇ ಶನಿವಾರಗಳಂದು ಜಿಲ್ಲಾ ಉಸ್ತುವಾರಿ ಸಚಿವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು, ಸಂಬಂಧಪಟ್ಟ ವಲಯದಲ್ಲಿ ಅತಿ ಹೆಚ್ಚು ವಾರ್ಡ್‌ಗಳನ್ನು ಹೊಂದಿರುವ ಕ್ಷೇತ್ರದ ಶಾಸಕರು ಅಧ್ಯಕ್ಷತೆ ವಹಿಸುವರು. ಈ ಸಭೆಗಳಲ್ಲಿ ಜಿಬಿಎ ಮತ್ತು ನಗರ ಪಾಲಿಕೆ ಮಟ್ಟದ ಅಧಿಕಾರಿಗಳು, ವಲಯ ಅಧಿಕಾರಿಗಳು ಹಾಗೂ ಇತರ ಇಲಾಖೆಗಳ ನಗರ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು.
ಉಪವಿಭಾಗ ಮಟ್ಟದ ಜನಸಭೆ (ಹೋಬಳಿ ಮಟ್ಟದ ಜನಸಭೆಗೆ ಸಮಾನ): ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವನ್ನು ಹೊರತುಪಡಿಸಿ, ಉಳಿದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಶನಿವಾರ ಆಯಾ ಕ್ಷೇತ್ರದ ಉಪವಿಭಾಗಗಳಲ್ಲಿ ಸರದಿಯಂತೆ ಈ ಸಭೆ ನಡೆಯಲಿದೆ. ಎಲ್ಲ ಉಪವಿಭಾಗಗಳು ಪೂರ್ಣಗೊಂಡ ನಂತರ ವಾರ್ಡ್ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತದೆ. ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸಲಿದ್ದು, ವಿಭಾಗ ಮತ್ತು ಉಪವಿಭಾಗ ಮಟ್ಟದ ಅಧಿಕಾರಿಗಳು ಹಾಗೂ ಇತರ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಯಾವ ಶನಿವಾರ ಒಂದು ವಲಯದಲ್ಲಿ ವಲಯ ಮಟ್ಟದ ಜನಸಭೆ ನಡೆಯುತ್ತದೆಯೋ, ಅಂದು ಆ ವಲಯದಲ್ಲಿ ಪ್ರತ್ಯೇಕ ಉಪವಿಭಾಗ ಮಟ್ಟದ ಜನಸಭೆ ಇರುವುದಿಲ್ಲ; ಬದಲಾಗಿ ಅವು ವಲಯ ಮಟ್ಟದ ಸಭೆಯಲ್ಲೇ ವಿಲೀನಗೊಳ್ಳಲಿವೆ.
ಜಿಬಿಎ ಮುಖ್ಯ ಆಯುಕ್ತರು ಈ ಅಭಿಯಾನದ ಒಟ್ಟಾರೆ ಸಮನ್ವಯ ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, 5 ನಗರ ಪಾಲಿಕೆಗಳ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿ ಸಭೆಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಿದ್ದಾರೆ. ನಗರದ ಬಹುಪಾಲು ಸಮಸ್ಯೆಗಳಿಗೆ ಸಂಬಂಧಿಸಿದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು (ಕಂದಾಯ), ಜಲಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ), ಬೆಸ್ಕಾಂ, ಬಿಎಂಟಿಸಿ, ಬಿಡಿಎ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ಸ್ಥಳದಲ್ಲೇ ಪರಿಹಾರ ಒದಗಿಸಲು ಸೂಚಿಸಲಾಗಿದೆ.
ಸಭೆಗೂ ಮುನ್ನ ಸಾರ್ವಜನಿಕರಿಂದ ಕುಂದುಕೊರತೆ ಮತ್ತು ಸೇವಾ ಅರ್ಜಿಗಳನ್ನು ಸಂಗ್ರಹಿಸಿ ಪರಿಹರಿಸಲು ಪೂರ್ವಭಾವಿ ಅಭಿಯಾನ ನಡೆಸಲಾಗುವುದು. ಸಭೆಯ ಸ್ಥಳದಲ್ಲಿ ಪ್ರತಿ ವಾರ್ಡ್ ಅಥವಾ ವಾರ್ಡ್‌ಗಳ ಗುಂಪಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗುವುದು ಹಾಗೂ ನಾಗರಿಕರ ಅನುಕೂಲಕ್ಕಾಗಿ ಟೋಕನ್ ವ್ಯವಸ್ಥೆ ಜಾರಿಯಲ್ಲಿರಲಿದೆ.
ಒಂದು ವೇಳೆ ಶನಿವಾರ ಸರ್ಕಾರಿ ರಜಾದಿನವಾಗಿದ್ದರೆ ಅಂದು ಜನಸಭೆ ನಡೆಯುವುದಿಲ್ಲ. ಅಧ್ಯಕ್ಷರು ಲಭ್ಯವಿಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ಸಭೆಯನ್ನು ಮುನ್ನಡೆಸಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಜನಸಭೆಗಳಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಹೊಸಕೋಟೆಯ ಪ್ರಜಾ ಸೇವಾ ಸಭೆಯಲ್ಲಿ ಸರ್ಕಾರ ಜನರ ಮನೆ ಬಾಗಿಲಿಗೆ ಸೇವೆ ತಲುಪಿಸುತ್ತಿದೆ ಎಂದು ಮುನಿಯಪ್ಪ ಹೇಳಿದ್ದರು.
