ದೋಹಾದಲ್ಲಿ ಕರ್ನಾಟಕ ಸಂಘ ಕತಾರ್ ಎಂಜಿನಿಯರ್ಗಳ ದಿನಾಚರಣೆ: ಖಾಲಿದ್ ಅಲ್ ಸಯ್ಯದ್, ವಿಕ್ರಾಂತ್ ಪಾಟೀಲರಿಗೆ ಪ್ರಶಸ್ತಿ
ದೋಹಾ/ಬೆಂಗಳೂರು: ಕರ್ನಾಟಕ ಸಂಘ ಕತಾರ್ (ಕೆಎಸ್ಕ್ಯೂ) ದೋಹಾದ ಇಂಡಿಯನ್ ಕಲ್ಚರಲ್ ಸೆಂಟರ್ನ (ಐಸಿಸಿ) ಮುಂಬೈ ಸಭಾಂಗಣದಲ್ಲಿ ಆಯೋಜಿಸಿದ್ದ ಎಂಜಿನಿಯರ್ಗಳ ದಿನಾಚರಣೆಯಲ್ಲಿ ಖಾಲಿದ್ ಅಲ್ ಸಯ್ಯದ್ ಮತ್ತು ವಿಕ್ರಾಂತ್ ಪಾಟೀಲರಿಗೆ ‘ಅಭಿಯಂತರ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತು.
ಭಾರತ ರತ್ನ ಎಂ ವಿಶ್ವೇಶ್ವರಯ್ಯ ಅವರ ಎಂಜಿನಿಯರಿಂಗ್, ಮೂಲಸೌಕರ್ಯ ಮತ್ತು ರಾಷ್ಟ್ರ ನಿರ್ಮಾಣದ ಕೊಡುಗೆಗಳನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ‘ಭವಿಷ್ಯವನ್ನು ಕಟ್ಟುವ ದೂರದೃಷ್ಟಿಯ ಸಾಧಕರಿಗೆ ನಮನ’ ಎಂಬ ಆಶಯದ ಕಾರ್ಯಕ್ರಮದಲ್ಲಿ ಎಂಜಿನಿಯರ್ಗಳು, ಸಮುದಾಯದ ಮುಖಂಡರು ಮತ್ತು ಕತಾರ್ನ ಭಾರತೀಯ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದರು.
ದೋಹಾದ ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಐಸಿಸಿಯ ಸಹಸಂಸ್ಥೆಯಾಗಿ ಕರ್ನಾಟಕ ಸಂಘ ಕತಾರ್ ಕಾರ್ಯನಿರ್ವಹಿಸುತ್ತಿದೆ.

ಎಂಜಿನಿಯರಿಂಗ್ ಕೊಡುಗೆಗೆ ಗೌರವ
ಎಂಜಿನಿಯರ್ಸ್ ವಿದೌಟ್ ಬಾರ್ಡರ್ಸ್–ಕತಾರ್ ನಿರ್ದೇಶಕ ಹಾಗೂ ಕತಾರ್ ಸೊಸೈಟಿ ಆಫ್ ಎಂಜಿನಿಯರ್ಸ್ ಆಡಳಿತ ಮಂಡಳಿ ಸದಸ್ಯ ಖಾಲಿದ್ ಅಲ್ ಸಯ್ಯದ್ ‘ಅಭಿಯಂತರ ಶ್ರೀ’ ಪ್ರಶಸ್ತಿ ಸ್ವೀಕರಿಸಿ ಗೌರವ ಅತಿಥಿಯಾಗಿಯೂ ಭಾಗವಹಿಸಿದರು. ದೋಹಾದ ವಿಕ್ರಾಂತ್ ಪಾಟೀಲರನ್ನು ಎಂಜಿನಿಯರಿಂಗ್ ಕ್ಷೇತ್ರದ ಕೊಡುಗೆಗಾಗಿ ಸನ್ಮಾನಿಸಲಾಯಿತು. ಇಬ್ಬರೂ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶುಭಾ ರಾವ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ ಅವರ ವೃತ್ತಿಪರ ಸಾಧನೆಗಳ ವಿವರ ನೀಡಿದರು.
ಮುಖ್ಯ ಅತಿಥಿಯಾಗಿದ್ದ ದೋಹಾದ ಭಾರತೀಯ ರಾಯಭಾರ ಕಚೇರಿಯ ಶಿಕ್ಷಣ ಮತ್ತು ಸಂಸ್ಕೃತಿ ವಿಭಾಗದ ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ ಅವರನ್ನು ಸನ್ಮಾನಿಸಲಾಯಿತು. ತಾಂತ್ರಿಕ ಜ್ಞಾನ ಹಂಚಿಕೆ ಹಾಗೂ ಭಾರತದ ಪ್ರಮುಖ ವ್ಯಕ್ತಿಗಳ ಕೊಡುಗೆಗಳನ್ನು ಗೌರವಿಸುವ ಕೆಎಸ್ಕ್ಯೂ ಪ್ರಯತ್ನಗಳನ್ನು ಅವರು ಮೆಚ್ಚಿದರು.
ತಾಂತ್ರಿಕ ಉಪನ್ಯಾಸ, ವಿಶ್ವೇಶ್ವರಯ್ಯ ಸ್ಮರಣೆ
ಅತಿಥಿ ಉಪನ್ಯಾಸಕರಾದ ಕಿಶೋರ್ ವಿ, ಶ್ರೀಧರ್ ರಾವ್ ಮತ್ತು ಸುಧೀರ್ ಅಕ್ಕತಂಗೇರಹಾಳ್ ತಾಂತ್ರಿಕ ವಿಷಯಗಳ ಕುರಿತು ಪ್ರಸ್ತುತಿಗಳನ್ನು ನೀಡಿ ತಮ್ಮ ವೃತ್ತಿಪರ ಅನುಭವ ಹಂಚಿಕೊಂಡರು. ವಿಶ್ವೇಶ್ವರಯ್ಯ ಅವರ ಸಾಧನೆಗಳನ್ನು ಪರಿಚಯಿಸುವ ವೀಡಿಯೊ ಪ್ರದರ್ಶಿಸಲಾಯಿತು.
ಅಧ್ಯಕ್ಷೀಯ ಭಾಷಣ ಮಾಡಿದ ಕೆಎಸ್ಕ್ಯೂ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಗಿಲು, ಆಧುನಿಕ ಮೂಲಸೌಕರ್ಯ, ಸಾಮಾಜಿಕ ಪ್ರಗತಿ ಹಾಗೂ ಸಮುದಾಯದ ಅಭಿವೃದ್ಧಿಯಲ್ಲಿ ಎಂಜಿನಿಯರ್ಗಳ ಪಾತ್ರವನ್ನು ವಿವರಿಸಿದರು.
ಕೆಎಸ್ಕ್ಯೂ ಮಾಧ್ಯಮ, ಸಾರ್ವಜನಿಕ ಸಂಪರ್ಕ ಮತ್ತು ಕಲ್ಯಾಣ ಕಾರ್ಯದರ್ಶಿ ಪ್ರಶಾಂತ್ ಹಿರೇಮಠ ಆರಂಭಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ಅತಿಥಿಗಳು, ಉಪನ್ಯಾಸಕರು ಮತ್ತು ಸಭಿಕರನ್ನು ಸ್ವಾಗತಿಸಿದರು.
ಐಸಿಬಿಎಫ್ ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ, ಐಸಿಸಿ ಸಮಿತಿಯ ಕರ್ನಾಟಕ ಪ್ರತಿನಿಧಿ ಸಂದೀಪ್ ರೆಡ್ಡಿ, ಕೆಎಸ್ಕ್ಯೂ ಸಲಹಾ ಸಮಿತಿ ಅಧ್ಯಕ್ಷ ಡಾ. ರವಿ ಶೆಟ್ಟಿ ಹಾಗೂ ಸಲಹೆಗಾರರಾದ ಅರುಣ್ಕುಮಾರ್, ವಿ ಎಸ್ ಮನ್ನಂಗಿ, ಎಚ್ ಕೆ ಮಧು ಮತ್ತು ಡಾ. ಸಂಜಯ್ ಕುಡಾರಿ ಉಪಸ್ಥಿತರಿದ್ದರು. ಐಸಿಸಿ, ಐಸಿಬಿಎಫ್ ಹಾಗೂ ಕತಾರ್ನ ಕರ್ನಾಟಕ ಮೂಲದ ಸಮುದಾಯ ಸಂಘಟನೆಗಳ ಪ್ರತಿನಿಧಿಗಳೂ ಭಾಗವಹಿಸಿದ್ದರು.
ಕೆಎಸ್ಕ್ಯೂ ಉಪಾಧ್ಯಕ್ಷ ಅನಿಲ್ ಭಸಗಿ ವಂದನಾರ್ಪಣೆ ಮಾಡಿ ಭಾರತೀಯ ರಾಯಭಾರ ಕಚೇರಿ, ಅತಿಥಿಗಳು, ಆಯೋಜಕರು ಮತ್ತು ಸಮುದಾಯದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಸಮೂಹ ಛಾಯಾಚಿತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
