Home ಶಿಕ್ಷಣ ಕನ್ನಡ ವಿ.ವಿ.ಯಲ್ಲಿ ವಿಜಯನಗರ ಸಾಮ್ರಾಜ್ಯ ಅಧ್ಯಯನ ಪೀಠ ಸೂಕ್ತ- ಅಶ್ವತ್ಥನಾರಾಯಣ

ಕನ್ನಡ ವಿ.ವಿ.ಯಲ್ಲಿ ವಿಜಯನಗರ ಸಾಮ್ರಾಜ್ಯ ಅಧ್ಯಯನ ಪೀಠ ಸೂಕ್ತ- ಅಶ್ವತ್ಥನಾರಾಯಣ

86
0
Karnataka to decide to open Vijayanagar dynasty study center at Kannada University in Hampi

ಬೆಂಗಳೂರು:

ವಿಜಯನಗರ ಸಾಮ್ರಾಜ್ಯವನ್ನು ಕುರಿತು ಬಹುಶಿಸ್ತೀಯ ಅಧ್ಯಯನಗಳನ್ನು ನಡೆಸುವಂತಹ ಪೀಠವನ್ನು ಹಂಪೆಯ ಕನ್ನಡ ವಿ.ವಿ.ಯಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಸಿದ್ದು ಅಲಗೂರು ಅವರ ನೇತೃತ್ವದ ನಿಯೋಗವು‌ ಇಂತಹ ಪೀಠವನ್ನು ತಮ್ಮ ಬಳ್ಳಾರಿಯ ವಿ.ವಿ.ಯಲ್ಲಿ ಸ್ಥಾಪಿಸಬೇಕೆಂದು ಕೋರಿ ಸಲ್ಲಿಸಿದ ಪ್ರಸ್ತಾವನೆಯನ್ನು ಸ್ವೀಕರಿಸಿದ ಅವರು, ಈ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನಿಯೋಗದಲ್ಲಿ ಹಾಜರಿದ್ದ ಶಿಕ್ಷಣ ತಜ್ಞ ಅರವಿಂದರಾವ್ ದೇಶಪಾಂಡೆ, ಸಂಘ ಪರಿವಾರದ ಪ್ರಮುಖರಾದ ತಿಪ್ಪೇಸ್ವಾಮಿ, ರಾಘವೇಂದ್ರ ಕಾಗವಾಡ, ಕುಲಸಚಿವ ಎ.ಸಿ.ಪಾಟೀಲ ಮುಂತಾದವರು,

`ಕೃಷ್ಣದೇವರಾಯನ ಹೆಸರನ್ನು ಹೊತ್ತಿರುವ ಬಳ್ಳಾರಿ ವಿ.ವಿ.ಯಲ್ಲಿ ಉದ್ದೇಶಿತ ಪೀಠ ಸ್ಥಾಪನೆಯಾದರೆ ಸೂಕ್ತವೆನ್ನುವುದು ವಿವಿ ಅಭಿಪ್ರಾಯವಾಗಿದೆ. ಆದರೆ, ಹಂಪೆಯ ಕನ್ನಡ ವಿ.ವಿ.ಯಲ್ಲಿ ಇದು ಅಸ್ತಿತ್ವಕ್ಕೆ ಬಂದರೂ ತಕರಾರೇನಿಲ್ಲ. ಒಟ್ಟಿನಲ್ಲಿ ಈ ಅಧ್ಯಯನ ಪೀಠವು ತ್ವರಿತವಾಗಿ ಸ್ಥಾಪನೆಯಾಗಬೇಕು’ ಎನ್ನುವ ಮೂಲಕ ತಮ್ಮ ಸಮ್ಮತಿ ಸೂಚಿಸಿದರು.

ಉದ್ದೇಶಿತ ಪೀಠವು, ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯ ಕಾಲದ ಕೃಷಿ ಮತ್ತು ನೀರಾವರಿ ವ್ಯವಸ್ಥೆ, ಇತಿಹಾಸ, ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳು, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಕುರಿತು ಸಮಗ್ರ ಸಂಶೋಧನೆ ನಡೆಸುವ ಗುರಿಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸೂಕ್ತ ಪ್ರಕಟಣೆ, ವಿದ್ಯಾರ್ಥಿ ವೇತನ, ಡಿಜಿಟಲೀಕರಣ, ಗ್ರಂಥಾಲಯ, ತರಬೇತಿ ಮತ್ತು ಕ್ರ್ಯಾಶ್ ಕೋರ್ಸು ಇತ್ಯಾದಿಗಳನ್ನು ನಡೆಸುವ ಉದ್ದೇಶಗಳನ್ನು ಕೂಡ ಇದು ಇಟ್ಟುಕೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಹಂಪೆ ಮತ್ತು ಬಳ್ಳಾರಿ ಎರಡೂ ವಿಜಯನಗರ ಸಾಮ್ರಾಜ್ಯದ ಭೂಭಾಗದಲ್ಲೇ ಇವೆ. ಹಂಪೆಯು ಆ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಜತೆಗೆ, ಈಗಾಗಲೇ ಅಲ್ಲಿ ಕನ್ನಡ ವಿವಿ 25 ವರ್ಷಗಳಿಗಿಂತ ಹೆಚ್ಚು ಕಾಲಾವಧಿಯಿಂದ ಕ್ರಿಯಾಶೀಲವಾಗಿದೆ. ಹೀಗಾಗಿ, ಹಂಪೆಯಲ್ಲೇ ಅಧ್ಯಯನ ಪೀಠವನ್ನು ಸ್ಥಾಪಿಸಿದರೆ ಚೆನ್ನಾಗಿರುತ್ತದೆ. ಈ ಸಂಬಂಧ ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು’’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here