ಕರಾವಳಿ–ಮಲೆನಾಡು ಪ್ರವಾಸೋದ್ಯಮ ನೀತಿ–2026: ಕ್ರೂಸ್, ಬೀಚ್ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು; ವಿಶ್ವದರ್ಜೆಯ ಪ್ರವಾಸಿ ಸೌಲಭ್ಯಗಳಿಗೆ ಕೆ.ಜೆ. ಜಾರ್ಜ್ ಸೂಚನೆ
ಬೆಂಗಳೂರು, ಜುಲೈ 3: ಕರ್ನಾಟಕವನ್ನು ದೇಶದ ಪ್ರಮುಖ ಹಾಗೂ ಜಾಗತಿಕ ಮಟ್ಟದ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026’ ರೂಪಿಸುತ್ತಿದ್ದು, ಈ ನೀತಿಯಲ್ಲಿ ಕ್ರೂಸ್ ಪ್ರವಾಸೋದ್ಯಮ, ಬೀಚ್ ಪ್ರವಾಸೋದ್ಯಮ, ಥೀಮ್ ಆಧಾರಿತ ಪ್ರವಾಸೋದ್ಯಮ ಸರ್ಕೀಟ್ಗಳು ಹಾಗೂ ವಿಶ್ವದರ್ಜೆಯ ಪ್ರವಾಸಿ ಸೌಲಭ್ಯಗಳಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಇಂಧನ ಭವನದಲ್ಲಿ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ರಾಜ್ಯದ ಪ್ರವಾಸೋದ್ಯಮವನ್ನು ಮತ್ತಷ್ಟು ಮೇಲ್ದರ್ಜೆಗೆ ಕೊಂಡೊಯ್ಯುವ ಸಮಗ್ರ ಕಾರ್ಯತಂತ್ರಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಸಚಿವರು ಮಾತನಾಡಿ, ಕರಾವಳಿ ಹಾಗೂ ಮಲೆನಾಡು ಪ್ರದೇಶದ ಆರು ಜಿಲ್ಲೆಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಹೊಸ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಹೊಸ ನೀತಿಯಲ್ಲಿ ಥೀಮ್ ಆಧಾರಿತ ಪ್ರವಾಸೋದ್ಯಮ ಸರ್ಕೀಟ್ಗಳು, ಬೀಚ್ ಪ್ರವಾಸೋದ್ಯಮ, ಕ್ರೂಸ್ ಪ್ರವಾಸೋದ್ಯಮ, ಸಾಹಸ ಕ್ರೀಡೆಗಳು, ಜಲಕ್ರೀಡೆಗಳು ಹಾಗೂ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಅಂತರರಾಷ್ಟ್ರೀಯ ಕ್ರೂಸ್ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು
ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಬಂದರುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಂತರರಾಷ್ಟ್ರೀಯ ಕ್ರೂಸ್ ಹಡಗುಗಳು ಆಗಮಿಸುವಂತೆ ಸಮಗ್ರ ಕಾರ್ಯತಂತ್ರ ರೂಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಕ್ರೂಸ್ ಮೂಲಕ ಆಗಮಿಸುವ ಪ್ರವಾಸಿಗರು ಕರ್ನಾಟಕದಲ್ಲಿ ಹೆಚ್ಚು ದಿನಗಳ ಕಾಲ ಉಳಿಯುವಂತೆ ಆಕರ್ಷಕ ಪ್ರವಾಸಿ ಪ್ಯಾಕೇಜ್ಗಳು ಹಾಗೂ ವಿಶೇಷ ಪ್ರವಾಸೋದ್ಯಮ ಸರ್ಕೀಟ್ಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಇದೇ ವೇಳೆ ಪ್ರಮುಖ ಕ್ರೂಸ್ ಆಪರೇಟರ್ಗಳೊಂದಿಗೆ ಸಭೆ ನಡೆಸಿ, ಅವರ ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗರ ನಿರೀಕ್ಷೆಗಳನ್ನು ಆಧರಿಸಿ ಹೊಸ ನೀತಿಯಲ್ಲಿ ಅಗತ್ಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೀಚ್ ಪ್ರವಾಸೋದ್ಯಮಕ್ಕೆ ಬಲ
ರಾಜ್ಯದ ಸಮುದ್ರತೀರ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶದಿಂದ ಹೊಸ ನೀತಿಯಲ್ಲಿ ಬ್ಲೂ ಫ್ಲಾಗ್ ಬೀಚ್ಗಳ ಅಭಿವೃದ್ಧಿ, ಸ್ವಚ್ಛತೆ, ಸುರಕ್ಷತೆ, ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ, ಜಲಕ್ರೀಡೆಗಳು ಹಾಗೂ ಸಾಹಸ ಚಟುವಟಿಕೆಗಳಿಗೆ ವಿಶೇಷ ಸ್ಥಾನ ನೀಡಬೇಕು ಎಂದು ಸಚಿವರು ತಿಳಿಸಿದರು.
ಗುಣಮಟ್ಟದ ಪ್ರವಾಸಿ ಅನುಭವ ನೀಡುವ ಮೂಲಕ ಕರ್ನಾಟಕದ ಸಮುದ್ರತೀರಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಜನಪ್ರಿಯಗೊಳಿಸುವ ಗುರಿ ಸರ್ಕಾರದ್ದಾಗಿದೆ ಎಂದರು.
KSTDC ಮತ್ತು JLR ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸೂಚನೆ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (JLR) ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ಉತ್ತಮ ಗುಣಮಟ್ಟದ ವಸತಿ, ಮೂಲಭೂತ ಸೌಕರ್ಯ, ಸ್ವಚ್ಛತೆ, ಮಾಹಿತಿ ವ್ಯವಸ್ಥೆ ಹಾಗೂ ಪ್ರವಾಸಿಗರಿಗೆ ಅಗತ್ಯ ಸೇವೆಗಳನ್ನು ಇನ್ನಷ್ಟು ವಿಸ್ತರಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರವಾಸಿಗರಿಗೆ ವಿಶ್ವದರ್ಜೆಯ ಅನುಭವ ಕಲ್ಪಿಸುವ ಮೂಲಕ ರಾಜ್ಯದ ಪ್ರವಾಸೋದ್ಯಮದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಅವರು ಹೇಳಿದರು.
ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಕರ್ನಾಟಕ
ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, “ಪ್ರವಾಸೋದ್ಯಮ ಎಂದರೆ ಕೇವಲ ಪ್ರವಾಸಿ ತಾಣಗಳ ಅಭಿವೃದ್ಧಿಯಲ್ಲ. ಪ್ರವಾಸಿಗರಿಗೆ ವಿಶ್ವದರ್ಜೆಯ ಅನುಭವ ನೀಡುವ ಸಮಗ್ರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಅತ್ಯಗತ್ಯ. ಉತ್ತಮ ಮೂಲಸೌಕರ್ಯ, ಸುಲಭ ಸಂಪರ್ಕ, ಸುರಕ್ಷತೆ ಹಾಗೂ ಗುಣಮಟ್ಟದ ಸೇವೆಗಳ ಮೂಲಕ ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ಸ್ಥಾನಕ್ಕೆ ಕೊಂಡೊಯ್ಯಬಹುದು” ಎಂದು ಹೇಳಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (JLR) ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.