Home ಶಿಕ್ಷಣ 1-9ನೇ ತರಗತಿಗಳಿಗೆ ಮೌಲ್ಯಾಂಕನ ವಿಶ್ಲೇಷಣಾ ಫಲಿತಾಂಶ: ಸುರೇಶ್ ಕುಮಾರ್

1-9ನೇ ತರಗತಿಗಳಿಗೆ ಮೌಲ್ಯಾಂಕನ ವಿಶ್ಲೇಷಣಾ ಫಲಿತಾಂಶ: ಸುರೇಶ್ ಕುಮಾರ್

59
0
ಪ್ರಾತಿನಿಧ್ಯ ಚಿತ್ರ

ಬೆಂಗಳೂರು:

ಕೊರೋನಾ ಸೋಂಕಿನ ಎರಡನೇ ಅಲೆ ಪ್ರಸರಣದ ಹಿನ್ನೆಲೆಯಲ್ಲಿ ಒಂದರಿಂದ ಒಂಭತ್ತನೇ ತರಗತಿಗಳ ಮೌಲ್ಯಾಂಕನ ವಿಶ್ಲೇಷಣೆ ಮತ್ತು ಫಲಿತಾಂಶ ಪ್ರಕಟಣೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ತರಗತಿವಾರು ನಿರ್ಧಾರ ಕೈಗೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಒಂದರಿಂದ ಐದನೇ ತರಗತಿ ಮತ್ತು ಆರರಿಂದ ಒಂಭತ್ತನೇ ತರಗತಿಗಳವರೆಗೆ ಮೌಲ್ಯಾಂಕನ ಕುರಿತು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. 1ರಿಂದ 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದಲ್ಲಿ ನಿರ್ವಹಿಸಿದ ದಾಖಲೆಗಳು/ ಸಂವಹನದ ಆಧಾರದ ಮೇಲೆ ಕೆಲವು ಶಾಲೆಯವರು ಆನ್‍ಲೈನ್ ಮೂಲಕ ತರಗತಿ ನಿರ್ವಹಿಸಿದ್ದಲ್ಲಿ ಆ ಸಂದರ್ಭದಲ್ಲಿ ಅವಲೋಕಿಸಿದ ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಮಕ್ಕಳಿಗೆ ನೀಡಿದ್ದ ಪ್ರಬಂಧ, ಗೃಹ ಕೆಲಸ ಇತರೆ ಚಟುವಟಿಕೆಗಳನ್ನಾಧರಿಸಿದ ಕೃತಿ ಸಂಪುಟ/ ಚೈಲ್ಡ್ ಪ್ರೊಫೈಲ್, ಇತರೆ ಲಭ್ಯ ದಾಖಲೆಗಳನ್ನು ಅವಲೋಕಿಸಿ ಈವರೆವಿಗೆ ಪೂರೈಸಿದ ಪಠ್ಯವಸ್ತು/ಸಾಮರ್ಥ್ಯ/ ಕಲಿಕಾ-ಫಲಗಳ ಸಾಧನೆ ಮತ್ತು ಕೊರತೆಗಳನ್ನು ಶಾಲಾ ಹಂತದಲ್ಲಿ ಸಿಸಿಇ ನಿಯಮಗಳಂತೆ ವಿಶ್ಲೇಷಿಸಿ ಪ್ರಗತಿ ಪತ್ರದಲ್ಲಿ ದಾಖಲಿಸಲಾಗುತ್ತದೆ ಎಂದು ಅವರು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ತರಗತಿಗೆ ಬಡ್ತಿ ನೀಡುವುದು ಮತ್ತು ಅದನ್ನು ಪ್ರಗತಿ ಪತ್ರದಲ್ಲಿ ದಾಖಲಿಸುವುದು ಸೇರಿದಂತೆ ಈ ಎಲ್ಲ ಪ್ರಕ್ರಿಯೆಗಳನ್ನು ಏಪ್ರಿಲ್ 30ರೊಳಗೆ ನಿರ್ವಹಿಸಿ ಫಲಿತಾಂಶ ದಾಖಲಿಸಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಒಂದರಿಂದ ಐದನೇ ತರಗತಿಗಳು:
⚫ ಒಂದರಿಂದ ಐದನೇ ತರಗತಿವರೆಗೆ ಶಾಲಾ ಹಂತದಲ್ಲಿ ಮಕ್ಕಳ ಪ್ರಗತಿ ವಿಶ್ಲೇಷಿಸಿ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುವುದು.

⚫ ಹಾಗೆಯೇ ಈ ತರಗತಿಗಳ ವಿದ್ಯಾರ್ಥಿಗಳು ಶಾಲೆಗೆ ಭೌತಿಕವಾಗಿ ಹಾಜರಾಗಲು ಇದುವರೆವಿಗೂ ಕೋವಿಡ್-19 ರಾಜ್ಯ ತಾಂತ್ರಿಕ ಸಲಹಾ ಸಮಿತಿ ಅವಕಾಶ ಕಲ್ಪಿಸದೇ ಇರುವ ಹಿನ್ನೆಲೆಯಲ್ಲಿ ಈ ಮಕ್ಕಳಿಗೆ ಪ್ರತ್ಯೇಕ ಆನ್‍ಲೈನ್ ಇಲ್ಲವೇ ಆಫ್‍ಲೈನ್ ಮೂಲಕವೂ ಸಹ ಮೌಲ್ಯಾಂಕನ ಮಾಡಬಾರದು. ಮೌಲ್ಯಾಂಕನಕ್ಕಾಗಿ ಈ ಮಕ್ಕಳನ್ನು ಶಾಲೆಗಳಿಗೆ ಹಾಜರಾಗುವಂತೆ ಸೂಚಿಸಬಾರದು.

ಆರರಿಂದ ಒಂಭತ್ತನೇ ತರಗತಿಗಳು:
⚫ 6ರಿಂದ 9ನೇ ತರಗತಿಗಳ ಮಕ್ಕಳು ಭೌತಿಕವಾಗಿ ತರಗತಿಗಳಿಗೆ ಹಾಜರಾಗುತಿದ್ದರು. ಹಾಗೆಯೇ ದೂರದರ್ಶನ ಚಂದನ ವಾಹಿನಿಯ ಸಂವೇದ, ಇ-ಕಲಿಕಾ, ಆನ್‍ಲೈನ್ ಸೇರಿದಂತೆ ವಿವಿಧ ಪ್ರಕಾರದಲ್ಲಿ ಪಾಠ ಪ್ರವಚನ ಆಲಿಸಿರುವ ಹಿನ್ನಲೆಯಲ್ಲಿ ಈ ಮೇಲಿನ ಪಾಠ ಪ್ರವಚನ, ಕಲಿಕಾ ಪೂರಕ ಚಟುವಟಿಕೆ, ಪ್ರಾಜೆಕ್ಟ್ ಚಟುವಟಿಕೆಗಳ ನೆಲೆಯಲ್ಲಿ ಈಗಾಗಲೇ ಕೈಗೊಂಡಿರುವ ರೂಪಣಾತ್ಮಕ ಮೌಲ್ಯಮಾಪನ ಹಾಗೂ ಸಂಕಲನಾತ್ಮಕ ಮೌಲ್ಯಮಾಪನವನ್ನು ನಿರ್ವಹಿಸಿದ ದಾಖಲೆಗಳನ್ನಾಧರಿಸಿ ಪಡೆದ ಅಂಕಗಳನ್ನು 100ಕ್ಕೆ ವೃದ್ಧಿಸಿ ಶ್ರೇಣಿ ನಮೂದಿಸಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುತ್ತದೆ.

⚫ 6ರಿಂದ 9ನೇ ತರಗತಿಗಳಿಗೆ 2020ರ ಆಗಸ್ಟ್ 4ರಿಂದ ಅಕ್ಟೋಬರ್ 10ರವರೆಗೆ ವಿದ್ಯಾಗಮ ತರಗತಿಗಳು ನಡೆದಿವೆ. 2021 ಜನವರಿ 29ರಿಂದ ಫೆಬ್ರವರಿ 1ರವರೆಗೆ 9 ಮತ್ತು 10ನೇ ತರಗತಿಗಳು ಪೂರ್ಣವಾಗಿ ನಡೆದಿವೆ. ಫೆ. 22ರಿಂದ ಬೆಂಗಳೂರು ನಗರ ಮತ್ತು ಕೇರಳ ಗಡಿ ಭಾಗದ ಪ್ರದೇಶಗಳ ಶಾಲೆಗಳಲ್ಲಿ ವಿದ್ಯಾಗಮ ತರಗತಿಗಳು ನಡೆದಿವೆ. ಉಳಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿ ಈ ಅವಧಿಯಲ್ಲಿ ಪೂರ್ಣಾವಧಿ ಭೌತಿಕ ತರಗತಿಗಳು ನಡೆದಿವೆ. ಆನ್‍ಲೈನ್ ಸೇರಿದಂತೆ ವಿವಿಧ ಪ್ರಕಾರದ ತರಗತಿಗಳು ನಡೆದಿವೆ. ಈ ಹಿನ್ನೆಲೆಯಲ್ಲಿ 6ರಿಂದ 9ನೇ ತರಗತಿಗಳ ಮೌಲ್ಯಾಂಕನ ವಿಶ್ಲೇಷಣೆ ಹಾಗೂ ಫಲಿತಾಂಶ ಪ್ರಕಟಣೆ ಮಾಡಲಾಗತ್ತದೆ.

⚫ ಈ ತರಗತಿಗಳ ವಿದ್ಯಾರ್ಥಿಗಳಿಗೆ ಈವರೆವಿಗೂ ಪೂರೈಸಿದ ಚಟುವಟಿಕೆಗಳನ್ನು ಆಧರಿಸಿ ಮಾತ್ರ ಮೌಲ್ಯಂಕನ ಮಾಡಲು ತಿಳಿಸಿರುವುದರಿಂದ ಈ ಮಕ್ಕಳಿಗೆ ಪ್ರತ್ಯೇಕ ಆನ್‍ಲೈನ್/ಆಫ್‍ಲೈನ್ ಮೂಲಕ ಮೌಲ್ಯಾಂಕನ ಮಾಡಬಾರದು.

ಮೌಲ್ಯಾಂಕನ ವಿಶ್ಲೇಷಣೆಯ ಅನುಪಾಲನೆ:
⚫ ಈ ಮೌಲ್ಯಾಂಕನದ ಉದ್ದೇಶ ವಿದ್ಯಾರ್ಥಿಗಳನ್ನು ಉತ್ತೀರ್ಣ/ಅನುತ್ತೀರ್ಣ ಎಂದು ತೀರ್ಮಾನಿಸುವುದಲ್ಲ. ಬದಲಾಗಿ ಅವರ ಕಲಿಕೆಯ ಪ್ರಗತಿ ಹಾಗೂ ಕೊರತೆಯನ್ನು ತಿಳಿದು ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸೇತು-ಬಂಧ ಕಾರ್ಯಕ್ರಮವನ್ನು ನಡೆಸಿ ಈ ಕೊರತೆಯನ್ನು ತುಂಬಲು ಕ್ರಮ ವಹಿಸಲು ಶಾಲಾ ಯೋಜನೆಯನ್ನು ತಯಾರಿಸಲಾಗುತ್ತದೆ.

⚫ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಪುನರಾರಂಭವಾದ ನಂತರ ಈ ಮಕ್ಕಳಿಗೆ ಕಳೆದ ಸಾಲಿನಲ್ಲಿ ಹಿಂದಿನ ತರಗತಿಯಲ್ಲಿನ ಕಲಿಕಾ ಸಾಮರ್ಥ್ಯಗಳ ಬಗ್ಗೆ ನೈದಾನಿಕ ಪರೀಕ್ಷೆ ನಡೆಸಿ ಅವರಲ್ಲಿ ಇರುವ ಕಲಿಕಾ ಕೊರತೆಯನ್ನು ಗುರುತಿಸುವುದು. ಈ ಕೊರತೆಗಳು ಹಾಗೂ ಹಿಂದಿನ ವರ್ಷ ಪಟ್ಟಿ ಮಾಡಿ ಇಟ್ಟುಕೊಂಡಿದ್ದ ಕಲಿಕಾ ಕೊರತೆಗಳನ್ನು ಆಧರಿಸಿ ಪ್ರತಿ ಮಗುವಿನವಾರು ನಿರ್ದಿಷ್ಟ ತಂತ್ರಗಳನ್ನು ರೂಪಿಸಿ ಸೇತು-ಬಂಧ ಮುಖೇನ ಪರಿಹಾರ ಬೋಧನೆ ನಡೆಸುವುದು. ನಂತರ ಸಾಫಲ್ಯ ಪರೀಕ್ಷೆ ನಡೆನಸಿ ಮಕ್ಕಳಲ್ಲಿ ಕಲಿಕೆ ಆಗಿರುವುದನ್ನು ದೃಢೀಕರಿಸಿ ಮುಂದಿನ ತರಗತಿಯ ಪಠ್ಯಾಧಾರಿತ ಕಲಿಕಾಂಶಗಳ ಬೋಧನೆಯನ್ನು ಆರಂಭಿಸುವುದು.

ಮೌಲ್ಯಾಂಕನ ಕುರಿತು ಸಭೆ:
⚫ ಕೋವಿಡ್ ಎರಡನೇ ಅಲೆ ಪ್ರಸರಣ ಏರುಗತಿಯಲ್ಲಿರುವ ಹಿನ್ನೆಲೆಯಲ್ಲಿ ಕಳೆದ ಸಾಲಿನಲ್ಲಿ ಮಕ್ಕಳನ್ನು ಪರೀಕ್ಷೆ ನಡೆಸದೇ ಬಡ್ತಿ ನೀಡಿದ ರೀತಿಯಲ್ಲಿ ಈ ಬಾರಿಯೂ ಹಾಗೆ ಮಾಡಿದಲ್ಲಿ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾದ ಸಾಧ್ಯತೆಗಳಿರುವುದರಿಂದ ಸಂಕಲನಾತ್ಮಕ ಮೌಲ್ಯಂಕನಕ್ಕೆ ಅವಕಾಶ ನೀಡಬೇಕೆಂಬ ಖಾಸಗಿ ಶಾಲಾಡಳಿತ ಮಂಡಳಿಗಳ ಹಿನ್ನೆಲೆಯಲ್ಲಿ ನಾವು ಸಭೆ ನಡೆಸಿ ವಿಸ್ತೃತವಾಗಿ ಚರ್ಚೆ ನಡೆಸಲಾಗಿತ್ತು.

⚫ ಮಕ್ಕಳ ತರಗತಿ/ವಾರ್ಷಿಕ ಮೌಲ್ಯಾಂಕನ/ಪರೀಕ್ಷೆ ಕುರಿತಂತೆ ಚರ್ಚಿಸಲು ಶಿಕ್ಷಕರ ಸಂಘಟನೆ, ಖಾಸಗಿ ಶಾಲೆಗಳ ಸಂಘಟನೆಗಳ ಪ್ರತಿನಿಧಿಗಳು, ಪೋಷಕರ ಪ್ರತಿನಿಧಿಗಳು ಮತ್ತು ಶಿಕ್ಷಣ ತಜ್ಞರ ಸಭೆಗಳನ್ನು ನಡೆಸಿ ಎಲ್ಲ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಮುಕ್ತವಾಗಿ ಚರ್ಚೆ ಅವಕಾಶ ಕಲ್ಪಿಸಿದೆವು. ಮೌಲ್ಯಾಂಕನ ಮಾಡಿ ಆ ಮೂಲಕ ಅವರು ಸಾಧಿಸಿದ ಕಲಿಕಾ ಫಲಗಳನ್ನು ಹಾಗೂ ಸಾಧಿಸದೇ ಇರುವ ಕಲಿಕಾಂಶಗಳನ್ನು ಪತ್ತೆ ಹಚ್ಚಬೇಕು. ಆ ನಂತರ ಸಾಧಿಸದೇ ಇರುವ ಕಲಿಕಾಂಶಗಳ ಕೊರತೆಯನ್ನು ನೀಗಿಸಲು ‘ಸೇತುಬಂಧ’ (ಬ್ರಿಡ್ಜ್ ಕೋರ್ಸ್) ಕಾರ್ಯಕ್ರಮದಂತಹ ವಿಶೇಷ ಪ್ರಯತ್ನಗಳನ್ನು ಹಮ್ಮಿಕೊಳ್ಳಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

⚫ ಹಾಗೆಯೇ ಈ ತರಗತಿಗಳ ಸಿಬಿಎಸ್‍ಇ/ಐಸಿಎಸ್‍ಇ ಮಂಡಳಿ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ ಹಾಗೂ ರಾಜ್ಯ ಪಠ್ಯಕ್ರಮದ ಕಲಿಸುವ ಶಾಲೆಗಳಲ್ಲಿ ಈಗಾಗಲೇ ಸಂಕಲನಾತ್ಮಕ ಮೌಲ್ಯಾಂಕನವನ್ನು ಪೂರ್ಣಗೊಳಿಸಲಾಗಿದೆ ಹಾಗೆಯೇ ಕೆಲ ಶಾಲೆಗಳಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

⚫ ಸಭೆಯಲ್ಲಿ ಹಾಜರಿದ್ದ ಶಿಕ್ಷಣ ತಜ್ಞರು ‘ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009’ ಹಾಗೂ ನಿಯಮಗಳಡಿ ಇರುವ ಅಂಶಗಳನ್ನೂ ಸಭೆಯ ಗಮನಕ್ಕೆ ತಂದರು:

⚫ ಪರೀಕ್ಷೆಗಿಂತ ಕಲಿಕೆ ಮುಖ್ಯವಾಗಿದ್ದು, ಪರೀಕ್ಷೆಗಳ ಮೂಲ ಉದ್ದೇಶವೇ ಕಲಿಕೆಯಲ್ಲಿನ ತೊಡಕುಗಳನ್ನು ಗುರುತಿಸಿ ಕಲಿಕೆಯನ್ನು ಮತ್ತಷ್ಟು ಉತ್ತಮಗೊಳಿಸುವುದು ಹಾಗೆಯೇ ಎಲ್ಲ ಮಕ್ಕಳು ಕಲಿಕಾ ಮಟ್ಟವನ್ನು ಸಾಧಿಸಬೇಕಾಗಿರುವುದರಿಂದ ಇಲಾಖೆ ವಿಶೇಷವಾಗಿ ಸೇತುಬಂಧÀ ಹಾಗೂ ವೇಗವರ್ಧಿತ ಕಲಿಕಾ ಕಾರ್ಯಕ್ರಮದ ಮೂಲಕ ಮುಂದಿನ ಶೈಕ್ಷಣಿಕ ವರ್ಷ 2021-22 ಪ್ರಾರಂಭವಾಗುವ ಮುನ್ನ ಎಲ್ಲ ಮಕ್ಕಳು ತರಗತಿವಾರು ವಿಷಯವಾರು ನಿಗದಿತ ಕಲಿಕೆಯನ್ನು ಪೂರ್ಣಗೊಳಿಸುವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳ ಕಲಿಕೆ ಭಯ, ಆಘಾತ ಮತ್ತು ಆತಂಕರಹಿತ ಕಲಿಕಾ ವ್ಯವಸ್ಥೆ; ಜ್ಞಾನದ ಗ್ರಹಿಕೆ ಹಾಗೂ ಅನ್ವಯಿಸುವ ಸಾಮರ್ಥ್ಯವನ್ನು ಅಳೆಯಲು ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದ ವಿಧಿ ವಿಧಾನಗಳ ಬಗ್ಗೆ ಶಿಕ್ಷಣ ಹಕ್ಕು ಕಾಯಿದೆ ಹಾಗೂ ನಿಯಮಗಳಲ್ಲಿ ಸ್ಪಷ್ಟತೆ ಇದ್ದು, ಅದನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುವುದರಿಂದ ಸರ್ಕಾರದ ಉದ್ದೇಶಿತ ತೀರ್ಮಾನ ಕಾನೂನು ಚೌಕಟ್ಟಿನಲ್ಲಿರಬೇಕು. ಆದರೆ ಪ್ರಸಕ್ತ ಸಾಲಿನಲ್ಲಿ ಸೀಮಿತ ಶೈಕ್ಷಣಿಕ ಚಟುವಟಿಕೆಗಳಿಗೆ ಅವಕಾಶ ಲಭ್ಯವಾಗಿರುವುದರಿಂದ ಪರೀಕ್ಷೆ ನಡೆಸಲೇಬೇಕೆಂದಾದರೆ ನಿರಂತರ ಮೌಲ್ಯಮಾಪನದ ಅನ್ವಯ ಸಂಕಲನಾತ್ಮಕ ಮೌಲ್ಯಾಂಕನ ಮಾಡಬಹುದೆಂಬ ಸಲಹೆಗಳನ್ನು ಶಿಕ್ಷಣ ತಜ್ಞರು ನೀಡಿದರು.

ಬೇಸಿಗೆ ರಜೆ ಮತ್ತು ಮುಂದಿನ ಶೈಕ್ಷಣಿಕ ವರ್ಷಾರಂಭ:
⚫ ಒಂದರಿಂದ ಏಳು/ಎಂಟನೇ ತರಗತಿಗಳು ಇರುವ ಪ್ರಾಥಮಿಕ ಶಾಲೆಗಳಿಗೆ ಮೇ 1ರಿಂದ ಜೂನ್ 14ರವರಗೆ ಬೇಸಿಗೆ ರಜೆ. ಜೂ. 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ ಮತ್ತು ಪ್ರೌಢಶಾಲೆಗಳಿಗೆ ಅಂದರೆ 8 ಮತ್ತು 9ನೇ ತರಗತಿಗಳಲ್ಲಿನ ವಿದ್ಯಾರ್ಥಿಗಳಿಗೆ ಮೇ 1ರಿಂದ ಜುಲೈ 14ರವರೆಗೆ ಬೇಸಿಗೆ ರಜೆ. ಪ್ರೌಢಶಾಲೆಗಳ ಶಿಕ್ಷಕರಿಗೆ ಜೂ. 15ರಿಂದ ಜುಲೈ 14ರವರೆಗೆ ಬೇಸಿಗೆ ರಜೆ. ಜೂ. 21ರಿಂದ ಜು. 5ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತವೆ. ಜು. 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ.

⚫ ಈ ವೇಳಾಪಟ್ಟಿ ತಾತ್ಕಾಲಿಕವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ, ಇಲಾಖೆ ಮತ್ತು ಜಿಲ್ಲಾಡಳಿತಗಳು ನೀಡುವ ಸೂಚನೆ ಮತ್ತು ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

LEAVE A REPLY

Please enter your comment!
Please enter your name here