ಕಸವನಹಳ್ಳಿಯಲ್ಲಿ ಹಸಿ ಕಸದಿಂದ ಗೊಬ್ಬರ: ನಿವಾಸಿಗಳ ಸಮುದಾಯ ಕಾಂಪೋಸ್ಟಿಂಗ್ಗೆ ಕೆ ಎನ್ ರಮೇಶ್ ಮೆಚ್ಚುಗೆ
ಬೆಂಗಳೂರು: ಕಸವನಹಳ್ಳಿ ವಾರ್ಡ್ನ ಕೈಕೊಂಡ್ರಹಳ್ಳಿ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ನಿವಾಸಿಗಳ ಮುಂದಾಳತ್ವದಲ್ಲಿ ನಡೆಯುತ್ತಿರುವ ಸಮುದಾಯ ಕಾಂಪೋಸ್ಟಿಂಗ್ಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ ಎನ್ ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಅವರು ಕಸ ಸಂಗ್ರಹಣೆ ಹಾಗೂ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಜಿಆರ್ ಲೇಔಟ್ನಲ್ಲಿ ಸುಮಾರು 30 ಮನೆಗಳು ಒಗ್ಗೂಡಿ ಪ್ರತಿದಿನ 15–18 ಕೆಜಿ ಹಸಿ ತ್ಯಾಜ್ಯವನ್ನು ಸ್ಥಳದಲ್ಲೇ ಕಾಂಪೋಸ್ಟಿಂಗ್ ಮೂಲಕ ಸಂಸ್ಕರಿಸುತ್ತಿವೆ. ನಿವಾಸಿಗಳಾದ ಪ್ರವೀಣ್, ಪ್ರಶಾಂತ್ ಹಾಗೂ ನಾಗೇಂದ್ರ ಈ ಕಾರ್ಯಕ್ಕೆ ನೇತೃತ್ವ ವಹಿಸಿದ್ದಾರೆ ಎಂದು ಪಾಲಿಕೆಯ ಪ್ರಕಟಣೆ ತಿಳಿಸಿದೆ.
ರಿಲಯಬಲ್ ಲೈಫ್ಸ್ಟೈಲ್ ಲೇಔಟ್ನ 350 ಮನೆಗಳಲ್ಲಿ ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ವಿಂಗಡಿಸಲಾಗುತ್ತಿದೆ. ನಿವಾಸಿಗಳಾದ ರಮೇಶ್, ಮಹೇಶ್ ಹಾಗೂ ದಿವ್ಯ ಅವರ ಉಸ್ತುವಾರಿಯಲ್ಲಿ ನಿವಾಸಿಗಳ ಸಂಘ ಮತ್ತು ಎನ್ಜಿಒಗಳ ಸಹಯೋಗದೊಂದಿಗೆ ಬಡಾವಣೆಗೆ ಸೇರಿದ ಖಾಲಿ ಜಾಗದಲ್ಲಿ ತ್ಯಾಜ್ಯ ಸಂಸ್ಕರಣೆ ಹಾಗೂ ಕಾಂಪೋಸ್ಟಿಂಗ್ ನಡೆಯುತ್ತಿದೆ.

ಹಣ್ಣಿನ ಮರಗಳು, ಗಿಡಗಳಿಗೆ ಕಾಂಪೋಸ್ಟ್ ಬಳಕೆ
ನಿವಾಸಿಗಳ ನಾಗರಿಕ ಪ್ರಜ್ಞೆ ಹಾಗೂ ತ್ಯಾಜ್ಯ ನಿರ್ವಹಣೆಯ ಪ್ರಯತ್ನವನ್ನು ಆಯುಕ್ತರು ಶ್ಲಾಘಿಸಿದರು. ಹಲವು ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ ಘಟಕದಲ್ಲಿ ಉತ್ಪತ್ತಿಯಾಗುವ ಕಾಂಪೋಸ್ಟ್ಗೆ ಸ್ಥಳೀಯವಾಗಿ ಬೇಡಿಕೆಯಿದೆ. ಇದನ್ನು ಲೇಔಟ್ನ ಹಣ್ಣಿನ ಮರಗಳು, ಗಿಡಗಳು ಹಾಗೂ ಹಸಿರೀಕರಣಕ್ಕೆ ಬಳಸಲಾಗುತ್ತಿದೆ ಎಂದು ಪಾಲಿಕೆ ತಿಳಿಸಿದೆ.
ಉದುರುವ ಎಲೆಗಳ ನಿರ್ವಹಣೆಗೆ ಪ್ರತ್ಯೇಕ ಲೀಫ್ ಕಾಂಪೋಸ್ಟರ್ ಅಳವಡಿಸಲಾಗಿದೆ. ಬಡಾವಣೆಯನ್ನು ಶೂನ್ಯ ತ್ಯಾಜ್ಯ ಲೇಔಟ್ ಆಗಿ ರೂಪಿಸುವ ಪ್ರಯತ್ನದ ಭಾಗವಾಗಿ ಎಲೆಗಳನ್ನು ಪುಡಿ ಮಾಡುವ ಶ್ರೆಡ್ಡಿಂಗ್ ಯಂತ್ರ ಅಳವಡಿಸಲು ಸಂಘ ಯೋಜಿಸಿದೆ. ಇಂತಹ ಕಾರ್ಯಗಳಿಗೆ ಪಾಲಿಕೆಯಿಂದ ಅಗತ್ಯ ಸಹಕಾರ ನೀಡುವುದಾಗಿ ಆಯುಕ್ತರು ಭರವಸೆ ನೀಡಿದರು.
34 ಆಟೋಗಳಿಂದ ನಿಗದಿತ ಸಮಯಕ್ಕೆ ಕಸ ಸಂಗ್ರಹಣೆಗೆ ಸೂಚನೆ
ಕಸವನಹಳ್ಳಿ ವಾರ್ಡ್ನಲ್ಲಿ ಕಸ ಸಂಗ್ರಹಣೆಗೆ ನಿಯೋಜಿಸಿರುವ 34 ಆಟೋಗಳ ಹಾಜರಾತಿ ಪುಸ್ತಕ ಹಾಗೂ ಬಾರ್ಕೋಡ್ ಆಧಾರಿತ ಡಿಜಿಟಲ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ರಮೇಶ್ ಪರಿಶೀಲಿಸಿದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿದಿನ ನಿಗದಿತ ಸಮಯಕ್ಕೆ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಕೈಕೊಂಡ್ರಹಳ್ಳಿಯಲ್ಲಿ ನಿರಂತರ ಕಸ ಸಂಗ್ರಹಣೆಯಿಂದ ಯಲ್ಲಮ್ಮ ದೇವಸ್ಥಾನದ ಸುತ್ತಲಿನ ಕಸದ ಬ್ಲ್ಯಾಕ್ ಸ್ಪಾಟ್ಗಳು ಕಡಿಮೆಯಾಗಿವೆ ಎಂದು ಪಾಲಿಕೆ ತಿಳಿಸಿದೆ. ಆದರೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಕುತ್ತಿರುವವರಿಗೆ ದಂಡ ವಿಧಿಸುವಂತೆ ಆಯುಕ್ತರು ಮಾರ್ಷಲ್ಗಳಿಗೆ ನಿರ್ದೇಶನ ನೀಡಿದರು.
ಕಸ ವಿಂಗಡಣೆ ಮತ್ತು ವಿಲೇವಾರಿ ಕುರಿತು ಸಾಹಸ್ ಎನ್ಜಿಒ ನಡೆಸುತ್ತಿರುವ ಜಾಗೃತಿ ಕಾರ್ಯವನ್ನೂ ಅವರು ಮೆಚ್ಚಿದರು. ಸಾಹಸ್ ಪ್ರತಿನಿಧಿಗಳು, ನಿವಾಸಿಗಳ ಸಂಘದ ಪದಾಧಿಕಾರಿಗಳು, ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ಗಳು ಪರಿಶೀಲನೆ ವೇಳೆ ಉಪಸ್ಥಿತರಿದ್ದರು.
