KCET 2026 ಮೂರನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ಮೊದಲ ಬಾರಿಗೆ Choice-4 ಆಯ್ಕೆ ಪರಿಚಯಿಸಿದ KEA
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ CET ಕೋರ್ಸ್ಗಳ ಮೂರನೇ ಹಾಗೂ ಅಂತಿಮ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶುಕ್ರವಾರ ಪ್ರಕಟಿಸಿದ್ದು, ಮೂರನೇ ಸುತ್ತಿನಲ್ಲಿ ಹೊಸದಾಗಿ ಸೀಟು ಪಡೆದ ಅಭ್ಯರ್ಥಿಗಳಿಗೆ ಮೊದಲ ಬಾರಿಗೆ Choice-4 ಮೂಲಕ ಕೌನ್ಸೆಲಿಂಗ್ನಿಂದ ಹೊರಬರುವ ಅವಕಾಶ ಕಲ್ಪಿಸಿದೆ.
ಮೂರನೇ ಸುತ್ತಿನಲ್ಲಿ ಮೊದಲ ಬಾರಿಗೆ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಸೆಪ್ಟೆಂಬರ್ 5ರ ಸಂಜೆ 5 ಗಂಟೆಯೊಳಗೆ Choice-4 ಆಯ್ಕೆ ಮಾಡಿಕೊಂಡು ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರಬರಬಹುದು ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಆದರೆ, ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಸಂಬಂಧಿಸಿದ ಕಾಲೇಜಿಗೆ ಪ್ರವೇಶ ಪಡೆದ ಬಳಿಕ ಕೇವಲ ಸೀಟು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಮೂರನೇ ಸುತ್ತಿನಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳಿಗೆ Choice-4 ಆಯ್ಕೆ ಲಭ್ಯವಿರುವುದಿಲ್ಲ. ಅಂತಹ ಅಭ್ಯರ್ಥಿಗಳು ತಮ್ಮ ಕಾಲೇಜು ಪ್ರವೇಶವನ್ನು ಕಡ್ಡಾಯವಾಗಿ ಮುಂದುವರಿಸಬೇಕಿದ್ದು, ಮೂರನೇ ಸುತ್ತಿನ ಅಂತಿಮ ಫಲಿತಾಂಶಕ್ಕಾಗಿ ಕಾಯಬೇಕು.
ಅಂತಿಮ ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳು ತಮಗೆ ಹಂಚಿಕೆಯಾದ ಕಾಲೇಜಿನಲ್ಲಿ ಕಡ್ಡಾಯವಾಗಿ ಪ್ರವೇಶ ಪಡೆಯಬೇಕು. ಬೇರೆ ಕಾರಣಗಳನ್ನು ನೀಡಿ ಹಂಚಿಕೆಯಾದ ಸೀಟನ್ನು ನಿರಾಕರಿಸಲು ಅವಕಾಶ ಇರುವುದಿಲ್ಲ ಎಂದು KEA ತಿಳಿಸಿದೆ.
ಅದಾದ ಬಳಿಕ ಹಂಚಿಕೆಯಾದ ಎಂಜಿನಿಯರಿಂಗ್ ಸೀಟು ಬೇಡವೆಂದು ನಿರ್ಧರಿಸುವ ಅಭ್ಯರ್ಥಿಗಳು ನಿಗದಿತ ಶುಲ್ಕದ ಜೊತೆಗೆ ಶುಲ್ಕದ ಐದು ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಇಂತಹ ಪ್ರಕರಣಗಳನ್ನು ಸರ್ಕಾರಿ ಕೋಟಾದ ಸೀಟು ತಡೆಹಿಡಿದ ಪ್ರಕರಣವೆಂದು ಪರಿಗಣಿಸಲಾಗುವುದು ಮತ್ತು ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ ಎಂದು KEA ಎಚ್ಚರಿಸಿದೆ.
Choice-4 ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳಿಂದ ತೆರವಾಗುವ ಎಲ್ಲ ಸೀಟುಗಳನ್ನು ಲಭ್ಯವಿರುವ ಸೀಟುಗಳ ಪಟ್ಟಿಗೆ ಮತ್ತೆ ಸೇರಿಸಲಾಗುತ್ತದೆ. ಬಳಿಕ ಅಭ್ಯರ್ಥಿಗಳು ಈಗಾಗಲೇ ದಾಖಲಿಸಿರುವ ಆಯ್ಕೆಗಳು ಮತ್ತು ಆದ್ಯತೆಗಳನ್ನು ಪರಿಗಣಿಸಿ ಮೂರನೇ ಸುತ್ತಿನ ಸೀಟು ಹಂಚಿಕೆಯನ್ನು KEA ಮರುಚಾಲನೆ ಮಾಡಿ ಅಂತಿಮ ಫಲಿತಾಂಶ ಪ್ರಕಟಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಎಂಜಿನಿಯರಿಂಗ್ ಜೊತೆಗೆ ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ಪಶುವೈದ್ಯಕೀಯ ವಿಜ್ಞಾನ, B.Sc. ನರ್ಸಿಂಗ್, B.Pharm, Pharm-D, BPT, BPO ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ಗಳೂ ಸೇರಿವೆ.
