ಸಂಗ್ರಹ ಚಿತ್ರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ. ಚಿತ್ರ: ಸಂಗ್ರಹ
ಬೆಂಗಳೂರು: ಪಿಜಿ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಮುಂಗಡ ಹಣ ಪಾವತಿಸಲು ನ.21ರವರೆಗೂ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ನ.23ರಂದು ಬೆಳಿಗ್ಗೆ 11 ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸೀಟು ಹಂಚಿಕೆ ಫಲಿತಾಂಶ ಸೇರಿದಂತೆ ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುತ್ತದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶಾಲೆಗಳಲ್ಲಿನ ಉಳಿಕೆ ಮೂಲ ವೃಂದದ (ಆರ್‌ಪಿಸಿ) ಹುದ್ದೆಗಳಿಗೆ ನ.22ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಪ್ರಸನ್ನ ಅವರು ತಿಳಿಸಿದ್ದಾರೆ. ನ.22ರಂದು ಬೆಳಗಿನ ಅವಧಿಯಲ್ಲಿ ಎಲ್ಲ ವಿಷಯಗಳ ಅಭ್ಯರ್ಥಿಗಳಿಗೆ ಸಾಮಾನ್ಯ ಜ್ಞಾನ ಪತ್ರಿಕೆಯ ಪರೀಕ್ಷೆ ಇರುತ್ತದೆ; ಮಧ್ಯಾಹ್ನದ ಅವಧಿಯಲ್ಲಿ ಕನ್ನಡ ಮತ್ತು ವಿಜ್ಞಾನ ವಿಷಯಗಳ ನಿರ್ದಿಷ್ಟ ಪತ್ರಿಕೆ-2ಗಳಿಗೆ ಮಾತ್ರ ಪರೀಕ್ಷೆ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.
ಉಳಿದ ವಿಷಯಗಳ ನಿರ್ದಿಷ್ಟ ಪತ್ರಿಕೆಗಳ ವೇಳಾಪಟ್ಟಿ ಬೇರೆಯೇ ಇದ್ದು, ಆ ಪ್ರಕಾರ ಮುಂದಿನ ದಿನಗಳಲ್ಲಿ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗುವುದು; ಈ ವಿಷಯದಲ್ಲಿ ಗೊಂದಲ ಬೇಡ ಎಂದು ಪ್ರಸನ್ನ ಅವರು ಕೋರಿದ್ದಾರೆ.
ಇದಕ್ಕೂ ಮುನ್ನ, ಪಿಜಿ ವೈದ್ಯಕೀಯ ಎರಡನೇ ಸುತ್ತಿನ ಸೀಟು ಹಂಚಿಕೆ ನ.17ರಿಂದ ಆರಂಭವಾಗಲಿದೆ ಎಂದು ಕೆಇಎ ತಿಳಿಸಿತ್ತು.
