ಕಡತ ಚಿತ್ರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ.
ಬೆಂಗಳೂರು: ಯುಜಿ ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ 3ನೇ ಸುತ್ತಿನ ಸೀಟು ಹಂಚಿಕೆ ಹಾಗೂ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್‌ಗಳ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಶುಕ್ರವಾರ ತಿಳಿಸಿದ್ದಾರೆ.
ಯುಜಿ ಆಯುಷ್: 3ನೇ ಸುತ್ತಿಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ನವೆಂಬರ್ 22ರಂದು ಬೆಳಿಗ್ಗೆ 11 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಪ್ರಸನ್ನ ಹೇಳಿದ್ದಾರೆ. ನ.22ರಂದು ಸಂಜೆ 4 ಗಂಟೆಗೆ ತಾತ್ಕಾಲಿಕ ಹಾಗೂ ನ.23ರಂದು ಬೆಳಿಗ್ಗೆ 11 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ನ.23ರಿಂದ 25ರವರೆಗೆ ಶುಲ್ಕ ಪಾವತಿಸಿ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ನ.26ರೊಳಗೆ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು.
ಇದುವರೆಗೂ ಯಾವುದೇ ಸೀಟು ಹಂಚಿಕೆಯಾಗದವರು ಹಾಗೂ ಸಿಕ್ಕ ಸೀಟಿಗೆ ಪ್ರವೇಶ ಪಡೆದು ಇನ್ನೂ ಉತ್ತಮ ಕಾಲೇಜಿನ ಸೀಟಿಗೆ ಅಪೇಕ್ಷೆಪಡುವ ಅಭ್ಯರ್ಥಿಗಳು ಕೂಡ ಈ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಅವರು ತಿಳಿಸಿದ್ದಾರೆ. ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಯಾವುದೇ ಚಾಯ್ಸ್ ದಾಖಲಿಸದಿರುವವರು ಹಾಗೂ ಚಾಯ್ಸ್-4 ಆಯ್ಕೆ ಮಾಡಿದವರಿಗೆ ಈ ಸುತ್ತಿನಲ್ಲಿ ಆಪ್ಷನ್ಸ್ ದಾಖಲಿಸಲು ಅವಕಾಶ ಇರುವುದಿಲ್ಲ; ವೈದ್ಯಕೀಯ, ದಂತ ವೈದ್ಯಕೀಯ ಸೀಟು ಹಂಚಿಕೆ ನಂತರ ಕಾಲೇಜಿಗೆ ಪ್ರವೇಶ ಪಡೆದವರಿಗೂ ಈ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಸೀಟು ಹಂಚಿಕೆ ನಂತರ ನಿಗದಿತ ದಿನಾಂಕದೊಳಗೆ ಕಾಲೇಜಿನಲ್ಲಿ ಪ್ರವೇಶ ಪಡೆಯುವುದು ಕಡ್ಡಾಯ; ಇಲ್ಲದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪ್ರಸನ್ನ ಎಚ್ಚರಿಸಿದ್ದಾರೆ.
ಪಿಜಿ ದಂತ ವೈದ್ಯಕೀಯ: ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಕ್ಲೇಮ್ ಚೀಟಿ ಡೌನ್‌ಲೋಡ್ ಮಾಡಿಕೊಂಡು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಸೂಚಿಸಲಾಗಿದೆ ಎಂದು ಪ್ರಸನ್ನ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇನ್ನೂ 69 ಸೀಟು ಬಾಕಿ ಉಳಿದಿದ್ದು, ಆ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಹಿಂದೆ ಸೀಟು ಹಂಚಿಕೆಯಾದವರು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಲ್ಲ.
ಅರ್ಹ ಅಭ್ಯರ್ಥಿಗಳು ನ.23ರಂದು ಮಧ್ಯಾಹ್ನ 2 ಗಂಟೆಯೊಳಗೆ ₹7 ಲಕ್ಷ ಮುಂಗಡ ಹಣ ಪಾವತಿಸಿ, ಅದೇ ದಿನ ಸಂಜೆ 5 ಗಂಟೆಯೊಳಗೆ ಆಪ್ಷನ್ಸ್ ದಾಖಲಿಸಬೇಕು. ನ.23ರಂದು ರಾತ್ರಿ 8 ಗಂಟೆಗೆ ಸೀಟು ಹಂಚಿಕೆಯ ತಾತ್ಕಾಲಿಕ ಹಾಗೂ ನ.24ರಂದು ಬೆಳಿಗ್ಗೆ 11 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ನ.26ರೊಳಗೆ ಉಳಿಕೆ ಶುಲ್ಕ ಕಟ್ಟಿ, ನ.27ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಅವರು ವಿವರಿಸಿದ್ದಾರೆ.
