Home ಚಿಕ್ಕಬಳ್ಳಾಪುರ ನೂರು ಜನ ಅಡ್ಡ ಬಂದರೂ ಕೋಮುಲ್ ವಿಭಜಿಸುವುದು ಖಚಿತ: ಡಾ ಸುಧಾಕರ್

ನೂರು ಜನ ಅಡ್ಡ ಬಂದರೂ ಕೋಮುಲ್ ವಿಭಜಿಸುವುದು ಖಚಿತ: ಡಾ ಸುಧಾಕರ್

36
0
Komul will be split despite opposition Dr Sudhakar

ತನಿಖೆಯಾದರೆ ಜೈಲಿಗೆ ಹೋಗುತ್ತಾರೆ ಎಂದು ಅವರಿಗೂ ಗೊತ್ತಿದೆ

ಚಿಕ್ಕಬಳ್ಳಾಪುರ:

ಶಾಸಕರಾದ ಶಿವಶಂಕರರೆಡ್ಡಿ, ರಮೇಶ್ ಕುಮಾರ್ ಅವರಂತಹ ನೂರು ಜನ ಅಡ್ಡ ಬಂದರೂ ಕೋಮುಲ್ ವಿಭಜಿಸುವುದಂತೂ ಖಚಿತ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ನಡಿ ಸಾಲ ವಿತರಣೆಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಬೇರ್ಪಡಿಸಲು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಪತ್ರ ಬರೆದಿದ್ದರು. ಆದರೆ ಅವರ ಕೈಯಲ್ಲಿ ಆಗಲಿಲ್ಲ. ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ನಮ್ಮ ಜಿಲ್ಲೆಯ ಪಾಲು ನಮಗೆ ಸಿಗಬೇಕು ಎಂದು ಕೋರಿದ್ದೇನೆ. ಪ್ರತಿ ಬಾರಿ ಕೋಲಾರದಲ್ಲಿರುವ ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟಕ್ಕೆ ಚಿಕ್ಕಬಳ್ಳಾಪುರದ ರೈತರು ಹೋಗಬೇಕೆಂದರೆ ಸಾಧ್ಯವಿಲ್ಲ. ಇದರಲ್ಲಿ ಶಿವಶಂಕರರೆಡ್ಡಿ ಅವರು ರಾಜಕೀಯ ಮಾಡಬಾರದು ಎಂದರು.

Komul will be split despite opposition Dr Sudhakar

ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಶಾಸಕ ರಮೇಶ್ ಕುಮಾರ್ ರಿಂಗ್ ಮಾಸ್ಟರ್ ಆಗಿದ್ದಾರೆ. ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿಭಜನೆಗೆ ಬಿಡುತ್ತಿಲ್ಲ. ಶ್ರೀನಿವಾಸಗೌಡರು ರಮೇಶ್ ಕುಮಾರ್ ಅವರಿಂದ ಮಕ್ಮಲ್ ಟೋಪಿ ಹಾಕಿಸಿಕೊಳ್ಳುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲೂ ರಾಜಕೀಯ ಬೆರೆಸಲಾಗುತ್ತಿದೆ. ಇದರಲ್ಲಿ ಪಾರದರ್ಶಕ ತನಿಖೆಯಾಗಬೇಕಿದ್ದು, ತನಿಖೆಗೆ ಒಪ್ಪದೆ ತಡೆಯಾಜ್ಞೆ ತಂದಿದ್ದಾರೆ. ಇದರಲ್ಲೇ ಕಳ್ಳರು ಯಾರು ಎಂದು ಗೊತ್ತಾಗುತ್ತದೆ. ಸಾಚ ಆಗಿದ್ದರೆ ತನಿಖೆ ಆಗಿ ಸತ್ಯ ಎಂದು ಹೇಳುತ್ತಿದ್ದರು. ಸತ್ಯ ಹೊರಗೆ ಬಂದರೆ ಜೈಲಿಗೆ ಹೋಗುತ್ತೀರಿ ಎಂದು ಗೊತ್ತಿದೆ. ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಹೊರಗೆಳೆಯದೆ ನಾನು ವಿರಮಿಸುವುದಿಲ್ಲ. ಇಂತಹ ಭ್ರಷ್ಟಾಚಾರಿಗಳಿಗೆ ಸಹಕಾರ ಇಲಾಖೆಯಲ್ಲಿ ಅವಕಾಶವಿದ್ದು, ಇದನ್ನು ಮುಖ್ಯಮಂತ್ರಿಗಳು, ಸಹಕಾರ ಸಚಿವರು ಗಮನಿಸಿದ್ದಾರೆ ಎಂದರು.

ಗೌರಿಬಿದನೂರಿಗೆ ಶಾಸಕರು ನೀರು ನೀಡಲಿಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಮಾಡುತ್ತೇನೆ. ಮಂಚೇನಹಳ್ಳಿಯಲ್ಲಿ ತಾಯಿ ಮತ್ತು ಶಿಶು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಗೌರಿಬಿದನೂರಿನಲ್ಲೂ ತಾಲೂಕು ಆಸ್ಪತ್ರೆ ನಿರ್ಮಿಸಲಾಗುವುದು. ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಮುಂದಿನ ಮೂರು ತಿಂಗಳೊಳಗೆ ಜಮೀನು ನೀಡಲಾಗುವುದು. ಎತ್ತಿನಹೊಳೆ ಯೋಜನೆಯಡಿ ಹೆಚ್ಚು ಅನುದಾನ ನೀಡಿದ್ದು, ಶೀಘ್ರದಲ್ಲೇ ನೀರು ನೀಡಲಾಗುವುದು. ಕೃಷ್ಣಾ ನದಿ ನೀರಿನ ಪಾಲನ್ನು ಈ ಭಾಗದ ರೈತರಿಗೆ ನೀಡಲು ಪ್ರಯತ್ನ ಮಾಡಲಾಗುತ್ತಿದೆ. ಆಂಧ್ರಪ್ರದೇಶದಿಂದಲೂ ನೀರು ಹಂಚಿಕೆ ಮಾಡಲು ಚರ್ಚಿಸಲಾಗಿದೆ ಎಂದರು.

ಈ ಭಾಗದಲ್ಲಿ ಮಾವಿನ ಶೇಖರಣಾ ಸಾಮರ್ಥ್ಯ ಹೆಚ್ಚಿಸಬೇಕಿದೆ. ಜೊತೆಗೆ ಸಂಸ್ಕರಣಾ ಘಟಕಗಳನ್ನು ನಿರ್ಮಿಸಬೇಕಿದೆ. ಆಲೂಗಡ್ಡೆ ದರ ಕಡಿಮೆ ಇದ್ದರೆ, ಚಿಪ್ಸ್ ಗೆ ಬೆಲೆ ಹೆಚ್ಚಿರುತ್ತದೆ. ಟೊಮ್ಯಾಟೊಗೆ ದರ ಕಡಿಮೆ ಇದ್ದರೆ, ಸಾಸ್ ಗೆ ಬೆಲೆ ಹೆಚ್ಚಿರುತ್ತದೆ. ಇದಕ್ಕಾಗಿ ಚಿಕ್ಕಬಳ್ಳಾಪುರ, ಕೋಲಾರದ ತೋಟಗಾರಿಕಾ ಬೆಳೆಗಳಿಗೆ ಸಂಸ್ಕರಣಾ ಘಟಕ ನಿರ್ಮಿಸಬೇಕಿದೆ. ಈ ಮೂಲಕ ರೈತರಿಗೆ ನೆಮ್ಮದಿಯ ಬದುಕು ನೀಡಲಾಗುವುದು ಎಂದರು.

ಇಂದು 88 ಲಕ್ಷ ರೂ. ಹಣವನ್ನು ರೈತರಿಗೆ ಸಾಲವಾಗಿ ನೀಡುತ್ತಿರುವುದು ಸಹಕಾರ ಕ್ಷೇತ್ರದ ಉತ್ತಮ ಕಾರ್ಯಕ್ರಮ. ಸಹಕಾರ ಕ್ಷೇತ್ರದಲ್ಲಿ ರಾಜ್ಯದ 2 ಕೋಟಿ ಹಾಗೂ ದೇಶದ 30 ಕೋಟಿ ಜನರು ತೊಡಗಿಸಿಕೊಂಡಿದ್ದಾರೆ. ಮಹಾರಾಷ್ಟ್ರ, ಗುಜರಾತ್ ನಂತರ ಕರ್ನಾಟಕ ಹೆಚ್ಚು ತೊಡಗಿಸಿಕೊಂಡಿದೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ಉಪ ಕಸುಬಾಗಿದೆ ಎಂದರು.

LEAVE A REPLY

Please enter your comment!
Please enter your name here