ಶುಕ್ರವಾರವೂ ಬೆಂಗಳೂರಿನಲ್ಲಿ ಮಳೆಯ ಆರ್ಭಟ; ಕೋರಮಂಗಲ, ಎಂಜಿ ರಸ್ತೆ, ಯುಬಿ ಸಿಟಿ ಸೇರಿ ಹಲವೆಡೆ ಜಲಾವೃತ, ಟ್ರಾಫಿಕ್ ಅಸ್ತವ್ಯಸ್ತ
ಬೆಂಗಳೂರು, ಮೇ 29: ಶುಕ್ರವಾರವೂ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ನಗರದ ಹಲವು ಪ್ರಮುಖ ಪ್ರದೇಶಗಳು ಜಲಾವೃತಗೊಂಡು ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವಂತಾಯಿತು. ಕೋರಮಂಗಲ, ಎಂಜಿ ರಸ್ತೆ, ಯುಬಿ ಸಿಟಿ, ಶಿವಾಜಿನಗರ, ರಿಚ್ಮಂಡ್ ಸರ್ಕಲ್, ಶಾಂತಿನಗರ, ಕೆಆರ್ ಸರ್ಕಲ್, ಯಶವಂತಪುರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಅವಾಂತರ ಸೃಷ್ಟಿಯಾಯಿತು.
ಕೋರಮಂಗಲದ ಸೋನಿ ಸಿಗ್ನಲ್ ಸಮೀಪ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ನಿಧಾನಗೊಂಡಿತ್ತು. ನೀರು ತುಂಬಿಕೊಂಡ ರಸ್ತೆಗಳ ಮೂಲಕ ಸಂಚರಿಸಲು ವಾಹನ ಸವಾರರು ಹರಸಾಹಸ ಪಡಬೇಕಾಯಿತು.
ಎಂಜಿ ರಸ್ತೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಇದೇ ಪರಿಸ್ಥಿತಿ ಕಂಡುಬಂದಿತು. ರಸ್ತೆಗಳ ಮೇಲೆ ಮಳೆ ನೀರು ನಿಂತಿದ್ದರಿಂದ ಕಚೇರಿಯಿಂದ ಮನೆಗೆ ತೆರಳುತ್ತಿದ್ದ ಸಾವಿರಾರು ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.
ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಯುಬಿ ಸಿಟಿ ಸುತ್ತಮುತ್ತಲಿನ ರಸ್ತೆಗಳೂ ಜಲಾವೃತಗೊಂಡಿದ್ದು, ವಾಹನ ಸವಾರರು ನೀರು ತುಂಬಿದ ರಸ್ತೆಗಳಲ್ಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಪರಿಣಾಮ ಹಲವು ಕಡೆ ಟ್ರಾಫಿಕ್ ಜಾಮ್ ಉಂಟಾಯಿತು.
ಶಿವಾಜಿನಗರದ ನಾಲಾ ರಸ್ತೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು. ಮಳೆ ಬಂದಾಗಲೆಲ್ಲಾ ಈ ಭಾಗದಲ್ಲಿ ಇದೇ ಸಮಸ್ಯೆ ಮರುಕಳಿಸುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಹಲವು ಅಂಡರ್ಪಾಸ್ಗಳೂ ಜಲಾವೃತಗೊಂಡಿದ್ದವು. ಶಿವಾನಂದ ಸರ್ಕಲ್ ರೈಲ್ವೆ ಅಂಡರ್ಪಾಸ್ನಲ್ಲಿ ಕಾರೊಂದು ನೀರಿನಲ್ಲಿ ಸಿಲುಕಿಕೊಂಡಿದ್ದು, ವಾಹನವನ್ನು ಹೊರತೆಗೆಯಲು ಚಾಲಕರು ಮತ್ತು ಸಿಬ್ಬಂದಿ ಹರಸಾಹಸ ಪಟ್ಟರು. ಕೆಆರ್ ಸರ್ಕಲ್ ಸೇರಿದಂತೆ ಹಲವು ಅಂಡರ್ಪಾಸ್ಗಳಲ್ಲಿ ನೀರು ತುಂಬಿಕೊಂಡ ಕಾರಣ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ರಿಚ್ಮಂಡ್ ಸರ್ಕಲ್ ಮತ್ತು ಶಾಂತಿನಗರ ಪ್ರದೇಶಗಳಲ್ಲಿ ಮಳೆ ನೀರು ರಸ್ತೆಗಳ ಮೇಲೆ ನಿಂತ ಪರಿಣಾಮ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಕಚೇರಿ ಸಮಯದ ನಂತರ ಮನೆಗೆ ತೆರಳುತ್ತಿದ್ದ ಪ್ರಯಾಣಿಕರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡರು.
ಮಹಾಲಕ್ಷ್ಮಿ ಲೇಔಟ್, ಯಶವಂತಪುರ ಹಾಗೂ ಕೆಆರ್ ಪುರಂ ಪ್ರದೇಶಗಳಲ್ಲಿಯೂ ರಸ್ತೆಗಳು ಜಲಾವೃತಗೊಂಡಿದ್ದವು. ಕೆಆರ್ ಪುರಂ ಭಾಗದಲ್ಲಿ ಮಳೆಯೊಂದಿಗೆ ಆಲಿಕಲ್ಲು ಮಳೆಯೂ ಸುರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬನ್ನೇರುಘಟ್ಟ ಮುಖ್ಯರಸ್ತೆಯ ತಾವರೆಕೆರೆ ಮೆಟ್ರೋ ನಿಲ್ದಾಣ ಸಮೀಪದ ರಸ್ತೆಗಳಲ್ಲಿ ಇನ್ನೂ ನೀರು ನಿಂತಿದ್ದು, ಮುಖ್ಯ ರಸ್ತೆ ಹಾಗೂ ಸರ್ವಿಸ್ ರಸ್ತೆ ಎರಡೂ ಭಾಗಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನೀರಿನಲ್ಲಿ ಸಿಲುಕಿ ಐಷಾರಾಮಿ ಎಸ್ಯುವಿ ವಾಹನೊಂದು ಕೆಟ್ಟು ನಿಂತಿರುವ ಘಟನೆ ಕೂಡ ವರದಿಯಾಗಿದೆ.
ನಗರದ ಹಲವೆಡೆ ಮರಗಳು ಧರೆಗುರುಳಿದ್ದು, ಕೆಲ ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಳೆ ನೀರು ಸರಿಯಾಗಿ ಹರಿದು ಹೋಗದ ಕಾರಣ ಒಳಚರಂಡಿ ವ್ಯವಸ್ಥೆಯ ವೈಫಲ್ಯ ಮತ್ತೊಮ್ಮೆ ಬಹಿರಂಗಗೊಂಡಿದೆ.
ಜಲಾವೃತಗೊಂಡ ಅಂಡರ್ಪಾಸ್ಗಳಿಗೆ ಭೇಟಿ ನೀಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಪರಿಸ್ಥಿತಿ ಪರಿಶೀಲಿಸಿ, ನೀರು ಶೀಘ್ರ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮರುಕಳಿಸುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಅಲ್ಪಾವಧಿಯ ಮಳೆಯಲ್ಲೇ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿರುವುದು ಬೆಂಗಳೂರಿನ ಮಳೆ ನೀರು ನಿರ್ವಹಣೆ ಮತ್ತು ನಗರ ಮೂಲಸೌಕರ್ಯ ವ್ಯವಸ್ಥೆಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದ್ದು, ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
