ಮಳೆಯ ನಡುವೆ ವಿಜಯನಗರ ಕ್ಲಬ್ ಕಾಂಪೌಂಡ್ ಗೋಡೆ ಕುಸಿತ; ಆಟೋ ಚಾಲಕ ಸಾವು
ಬೆಂಗಳೂರು, ಮೇ 29: ಬೋರಿಂಗ್ ಆಸ್ಪತ್ರೆ ಸಮೀಪದ ಕಾಂಪೌಂಡ್ ಗೋಡೆ ಕುಸಿತದಲ್ಲಿ ಏಳು ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಬೆಂಗಳೂರಿನಲ್ಲಿ ಮತ್ತೊಂದು ಮಳೆ ಅವಾಂತರ ಜೀವ ಬಲಿಯಾಗಿದೆ. ವಿಜಯನಗರ ಕ್ಲಬ್ನ ಕಾಂಪೌಂಡ್ ಗೋಡೆ ಕುಸಿದು ಆಟೋ ಚಾಲಕನೊಬ್ಬ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ಮೃತರನ್ನು ಗಂಗೊಂಡನಹಳ್ಳಿ ನಿವಾಸಿ ಶಿವಬೋರಯ್ಯ (56) ಎಂದು ಗುರುತಿಸಲಾಗಿದೆ. ಭಾರೀ ಮಳೆ ಹಾಗೂ ಗಾಳಿಯ ನಡುವೆಯೇ ಸಂಜೆ ಸುಮಾರು 6.45ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ವಿಜಯನಗರ ಕ್ಲಬ್ನ ಕಾಂಪೌಂಡ್ ಗೋಡೆಯ ಪಕ್ಕದಲ್ಲೇ ಆಟೋ ನಿಲ್ಲಿಸಿಕೊಂಡು ಶಿವಬೋರಯ್ಯ ನಿಂತಿದ್ದರು. ಈ ವೇಳೆ ಏಕಾಏಕಿ ಸುಮಾರು 10 ರಿಂದ 12 ಅಡಿ ಎತ್ತರ ಹಾಗೂ 25 ರಿಂದ 30 ಅಡಿ ಉದ್ದದ ಹಳೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ.
ಗೋಡೆ ನೇರವಾಗಿ ಆಟೋ ಮೇಲೆ ಬಿದ್ದ ಪರಿಣಾಮ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರೊಳಗೆ ಸಿಲುಕಿದ ಶಿವಬೋರಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಚಾಲಕನನ್ನು ಬದುಕಿಸಲು ಸಾಧ್ಯವಾಗಲಿಲ್ಲ.
ವಿಜಯನಗರ ಕ್ಲಬ್ನ ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿರುವ ಈ ಕಾಂಪೌಂಡ್ ಗೋಡೆ ಹಲವು ವರ್ಷಗಳಷ್ಟು ಹಳೆಯದಾಗಿದ್ದು, ಇಂತಹ ಅವಘಡ ಇದೇ ಮೊದಲ ಬಾರಿಗೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗೋಡೆ ಕುಸಿತದ ಪರಿಣಾಮ ಸಮೀಪದಲ್ಲಿದ್ದ ಮೂರುರಿಂದ ನಾಲ್ಕು ವಿದ್ಯುತ್ ಕಂಬಗಳು ಕೂಡ ನೆಲಕ್ಕುರುಳಿದ್ದು, ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆ ಕುರಿತು ಮಾಹಿತಿ ಪಡೆದ ವಿಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಬಿಎ ಹಾಗೂ ಇತರೆ ನಾಗರಿಕ ಸಂಸ್ಥೆಗಳ ಅಧಿಕಾರಿಗಳು ಕೂಡ ಸ್ಥಳ ಪರಿಶೀಲನೆ ನಡೆಸಿ ಪರಿಸ್ಥಿತಿಯ ಅವಲೋಕನ ಮಾಡಿದರು.
ಮೃತ ಶಿವಬೋರಯ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳದಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ಅವಶೇಷ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಗೋಡೆ ಕುಸಿತದ ನಿಖರ ಕಾರಣ ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ.
ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹಳೆಯ ಕಟ್ಟಡಗಳು, ಕಾಂಪೌಂಡ್ ಗೋಡೆಗಳು ಹಾಗೂ ಮರಗಳ ಸಮೀಪ ವಾಹನ ನಿಲುಗಡೆ ಮಾಡದಂತೆ ಮತ್ತು ಆಶ್ರಯ ಪಡೆಯದಂತೆ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
