ಸಂಗ್ರಹ ಚಿತ್ರ: ವಾರ್ಡ್ ಒನ್ ಅಭಿಯಾನದ ಎರಡನೇ ಹಂತಕ್ಕೆ ಚಾಲನೆ ನೀಡಿದ ವೇಳೆ ಕೆ.ಆರ್. ಪುರಂ ಟಿನ್ ಫ್ಯಾಕ್ಟರಿ ಜಂಕ್ಷನ್ ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ ಮತ್ತು ಅಧಿಕಾರಿಗಳು. ಚಿತ್ರ: ಜಿಬಿಎ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಎಲ್ಲ ಐದು ನಗರ ಪಾಲಿಕೆಗಳಲ್ಲಿ ಜೆಟ್ಟಿಂಗ್ ಯಂತ್ರಗಳನ್ನು ಬಳಸಿ ಜಂಕ್ಷನ್‌ಗಳು, ಪಾದಚಾರಿ ಮಾರ್ಗ, ರಸ್ತೆಬದಿ ಗೋಡೆಗಳು, ಬಸ್ ತಂಗುದಾಣಗಳು ಹಾಗೂ ಮೇಲ್ಸೇತುವೆ ಪಿಲ್ಲರ್‌ಗಳನ್ನು ಪ್ರೆಶರ್ ವಾಷ್ ಮಾಡಿ ಸ್ವಚ್ಛಗೊಳಿಸಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ ಎಂದು ಜಿಬಿಎ ಗುರುವಾರ ಹೊರಡಿಸಿದ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಐದು ನಗರ ಪಾಲಿಕೆಗಳಲ್ಲಿ ನಡೆಯುತ್ತಿರುವ ವಾರ್ಡ್ ಒನ್ ಅಭಿಯಾನವನ್ನು ಪರಿಶೀಲಿಸಲು ವರ್ಚುವಲ್ ಸಭೆ ನಡೆಸಿದ ಸಚಿವರು, ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳು ಕಣ್ಣಿಗೆ ಕಾಣುವಂತೆ ಸ್ವಚ್ಛವಾಗಿ ಕಾಣಲು ಹೆಚ್ಚಿನ ಒತ್ತಡದ ಜೆಟ್ಟಿಂಗ್ ಯಂತ್ರಗಳನ್ನು ಬಳಸಿ ಸಾರ್ವಜನಿಕ ಮೂಲಸೌಕರ್ಯವನ್ನು ತೊಳೆದು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಯಂತ್ರಗಳನ್ನು ನಿಯೋಜಿಸಲು ತಕ್ಷಣ ವ್ಯವಸ್ಥೆ ಮಾಡಿಕೊಂಡು ತಮ್ಮ ವ್ಯಾಪ್ತಿಯಲ್ಲಿ ವ್ಯವಸ್ಥಿತ ಸ್ವಚ್ಛತೆ ಕೈಗೊಳ್ಳಬೇಕು ಎಂದು ಅವರು ಪಾಲಿಕೆಗಳಿಗೆ ಸೂಚಿಸಿದರು ಎಂದು ಪ್ರಕಟಣೆ ಹೇಳಿದೆ.
ಸ್ವಚ್ಛತಾ ಕಾರ್ಯಕ್ಕೆ ಅಮೂಲ್ಯ ಕುಡಿಯುವ ನೀರು ಬಳಕೆಯಾಗದಂತೆ, ಬೆಂಗಳೂರು ಜಲಮಂಡಳಿಯ ಸಮೀಪದ ಸಂಸ್ಕರಣಾ ಘಟಕಗಳಿಂದ ಸರಬರಾಜಾಗುವ ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸಂಬಂಧಿತ ಸಂಸ್ಕರಣಾ ಘಟಕಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಸಮೀಪದ ಘಟಕಗಳನ್ನು ಗುರುತಿಸಿ, ವಿಳಂಬವಿಲ್ಲದೆ ಸ್ವಚ್ಛತಾ ಕಾರ್ಯ ಆರಂಭಿಸಬೇಕು ಎಂದು ಸೂಚಿಸಲಾಗಿದೆ.
ನವೆಂಬರ್ 1ರಂದು ಆರಂಭವಾದ ವಾರ್ಡ್ ಒನ್ ಅಭಿಯಾನವನ್ನು ತೀವ್ರಗೊಳಿಸಿ, ಸ್ವಚ್ಛತೆಯನ್ನು ಯಾವುದೇ ಒಂದು ಸಂಸ್ಥೆಯ ಜವಾಬ್ದಾರಿ ಎಂದು ನೋಡದೆ ವಿವಿಧ ಇಲಾಖೆಗಳ ಸಮನ್ವಯದ ಕ್ರಮದ ಮೂಲಕ ಕಣ್ಣಿಗೆ ಕಾಣುವ ಸುಧಾರಣೆ ತರಬೇಕು ಎಂದು ಸಚಿವರು ಸೂಚಿಸಿದರು. ಶನಿವಾರ, ನವೆಂಬರ್ 21ರಂದು ನಡೆಯಲಿರುವ ಮುಂದಿನ ವಾರ್ಡ್ ಒನ್ ಅಭಿಯಾನದ ಸಿದ್ಧತೆ ಪರಿಶೀಲಿಸಿ, ಪರಿಣಾಮಕಾರಿ ಅನುಷ್ಠಾನಕ್ಕೆ ಹಾಗೂ ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಕ್ರಿಯ ಭಾಗವಹಿಸುವಿಕೆಗೆ ಕ್ರಮ ವಹಿಸಲು ತಿಳಿಸಿದರು.
ಕೋಣನಕುಂಟೆ ಕ್ರಾಸ್‌ನಲ್ಲಿನ ಸ್ಥಳೀಯ ಮೂಲಸೌಕರ್ಯ ಕೊರತೆಗಳನ್ನು ನೀಗಿಸಲು ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೋ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಗ್ರ ಸುಧಾರಣೆ ಕೈಗೊಳ್ಳುವಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಐಲ್ಯಾಂಡ್ ಅಭಿವೃದ್ಧಿ, ಪಾದಚಾರಿ ಮಾರ್ಗ ಅಭಿವೃದ್ಧಿ ಹಾಗೂ ಸೂಕ್ತ ಲೇನ್ ಮಾರ್ಕಿಂಗ್ ಇದರಲ್ಲಿ ಸೇರಿದ್ದು, ಸುಗಮ ಸಂಚಾರಕ್ಕೆ ಫ್ರೀ ಲೆಫ್ಟ್ ವ್ಯವಸ್ಥೆ ಕುರಿತು ಪರಿಶೀಲಿಸಲೂ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ ರಾವ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಶಿಲ್ಪಾ ನಾಗ್, ರಮೇಶ್ ಕೆ.ಎನ್. ಮತ್ತು ಜಗದೀಶ್ ಜಿ, ಹಾಗೂ ಅಪರ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಕಾರ್ಯಪಾಲಕ ಅಭಿಯಂತರರು ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಇದಕ್ಕೂ ಮುನ್ನ, ವಾರ್ಡ್ ಒನ್ ಅಭಿಯಾನದಡಿ 273 ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಿದ್ದಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ತಿಳಿಸಿತ್ತು.
