110 ವರ್ಷದ ಇತಿಹಾಸದಲ್ಲಿ ಹೊಸ ದಾಖಲೆ: ಕೆಎಸ್ಡಿಎಲ್ಗೆ ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ
ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್ಡಿಎಲ್) ತನ್ನ 110 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ₹2,016 ಕೋಟಿ ವಹಿವಾಟು ಮತ್ತು ₹507 ಕೋಟಿ ಲಾಭ ದಾಖಲಿಸಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಈ ಕುರಿತು ದೊಡ್ಡ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಮಾಹಿತಿ ನೀಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ “ಮೈಸೂರು ಸ್ಯಾಂಡಲ್ ಸಾಧನೆಯ ಶಿಖರ” ಕಾರ್ಯಕ್ರಮದಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಸನ್ಮಾನಿಸಲಾಯಿತು ಹಾಗೂ ಸ್ಮರಣಿಕೆ ಬಿಡುಗಡೆ ಮಾಡಲಾಯಿತು.
ಕೆಎಸ್ಡಿಎಲ್ 105 ವರ್ಷಗಳಲ್ಲಿ ₹1,000 ಕೋಟಿ ವಹಿವಾಟು ಸಾಧಿಸಿದ್ದರೆ, ಕೇವಲ ನಾಲ್ಕು ವರ್ಷಗಳಲ್ಲಿ ಅದನ್ನು ₹2,000 ಕೋಟಿಗೆ ಏರಿಸಿದೆ ಎಂದು ಸಚಿವರು ತಿಳಿಸಿದರು. 2022–23ರಲ್ಲಿ ₹1,375 ಕೋಟಿ ಇದ್ದ ವಹಿವಾಟು, ಕಳೆದ ಮೂರು ವರ್ಷಗಳಲ್ಲಿ ₹641 ಕೋಟಿ ಹೆಚ್ಚಳ ಕಂಡಿದೆ.
ಕಂಪನಿಯ ಉತ್ಪನ್ನಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದ್ದು, 34ರಿಂದ 94ಕ್ಕೆ ಏರಿಕೆಯಾಗಿದೆ. ಮಾರುಕಟ್ಟೆ ಪ್ರವೃತ್ತಿಗೆ ಅನುಗುಣವಾಗಿ 57 ಹೊಸ ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ಯಾವುದೇ ಹೊಸ ನೇಮಕಾತಿ ಅಥವಾ ಯಂತ್ರೋಪಕರಣಗಳ ಖರೀದಿ ಇಲ್ಲದೆ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ. 26,000 ಮೆಟ್ರಿಕ್ ಟನ್ ಸಾಮರ್ಥ್ಯವಿದ್ದರೂ 2025–26ರಲ್ಲಿ 47,494 ಮೆಟ್ರಿಕ್ ಟನ್ ಉತ್ಪಾದನೆ ಸಾಧಿಸಲಾಗಿದೆ.

₹507 ಕೋಟಿ ಲಾಭದಲ್ಲಿ ₹157 ಕೋಟಿ ಸರ್ಕಾರಕ್ಕೆ ಲಾಭಾಂಶವಾಗಿ ನೀಡಲಾಗುತ್ತದೆ ಹಾಗೂ ₹5 ಕೋಟಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುತ್ತದೆ. ಕಳೆದ ವರ್ಷದ ₹135 ಕೋಟಿಗಿಂತ ₹22 ಕೋಟಿ ಹೆಚ್ಚು ಲಾಭಾಂಶ ಇದಾಗಿದೆ.
ಆಧುನಿಕ ವಾಣಿಜ್ಯ ಮಾರ್ಗಗಳಿಂದ ₹420 ಕೋಟಿ ಹಾಗೂ ಇ-ಕಾಮರ್ಸ್ ಮೂಲಕ ₹120 ಕೋಟಿ ಆದಾಯ ಬಂದಿದೆ. 2028ರೊಳಗೆ ₹3,000 ಕೋಟಿ ಮತ್ತು 2030ರೊಳಗೆ ₹5,000 ಕೋಟಿ ವಹಿವಾಟು ಸಾಧಿಸುವ ಗುರಿ ಹೊಂದಲಾಗಿದೆ. ವಿಜಯಪುರದಲ್ಲಿ 50 ಏಕರೆ ಪ್ರದೇಶದಲ್ಲಿ ಹೊಸ ಘಟಕ ಸ್ಥಾಪನೆಗೆ ₹229 ಕೋಟಿ ಮಂಜೂರಾಗಿದೆ.
ಚಂದನದ ಸ್ಥಿರ ಪೂರೈಕೆಗೆ ‘ಗ್ರೋ ಮோர் ಸ್ಯಾಂಡಲ್ವುಡ್’ ಯೋಜನೆ ಕೈಗೊಳ್ಳಲಾಗಿದ್ದು, 10 ವರ್ಷಗಳಲ್ಲಿ 10,000 ಏಕರೆ ಪ್ರದೇಶದಲ್ಲಿ ಚಂದನ ಬೆಳೆ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ. ರೈತರಿಗೆ ಪ್ರತಿ ಸಸಿಗೆ ₹500 ಪ್ರೋತ್ಸಾಹಧನ ನೀಡಲಾಗುತ್ತದೆ. ಜಿಕೆವಿಕೆ ಬೆಂಗಳೂರು ಮತ್ತು ವಿಜಯಪುರ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪೀಠಗಳನ್ನು ಸ್ಥಾಪಿಸಲಾಗುತ್ತದೆ.
₹15 ಕೋಟಿ ಮೌಲ್ಯದ ಯಂತ್ರೋಪಕರಣಗಳ ಖರೀದಿಗೆ ಟೆಂಡರ್ ಹಾಕಲಾಗಿದ್ದು, ರಫ್ತು ವಿಸ್ತರಣೆಗೂ ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ 174 ಟನ್ ಚಂದನವನ್ನು ರೈತರಿಂದ ಖರೀದಿಸಿ ₹6.08 ಕೋಟಿ ಪಾವತಿ ಮಾಡಲಾಗಿದೆ.
ಬೆಂಗಳೂರು, ದಾಬಸಪೇಟೆ, ಮೈಸೂರು ಮತ್ತು ಶಿವಮೊಗ್ಗದಲ್ಲಿರುವ ಖಾಲಿ ಜಾಗಗಳ ಉಪಯೋಗಕ್ಕೆ ಯೋಜನೆ ರೂಪಿಸಲಾಗಿದೆ. ಕಾರ್ಮಿಕರಿಗೆ ಪ್ರೋತ್ಸಾಹಧನ ನೀಡುವ ಬಗ್ಗೆ ಪರಿಗಣಿಸುವಂತೆ ಸಚಿವರು ಸೂಚಿಸಿದರು.
ಕೆಎಸ್ಡಿಎಲ್ ಅಧ್ಯಕ್ಷ ಸಿ. ಎಸ್. ಅಪ್ಪಾಜಿ ನಡಗೌಡ ಅವರು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆ ಸಾಧ್ಯತೆಗಳನ್ನು ಪರಿಶೀಲಿಸಲಾಗಿದೆ ಎಂದು ಹೇಳಿದರು. ಯುಎಇ ಮಾರುಕಟ್ಟೆಗೆ ಪ್ರವೇಶಿಸುವ ಯೋಜನೆಯೂ ಇದೆ.
ನಿರ್ದೇಶಕ ಡಾ. ಪಿ. ಕೆ. ಎಂ. ಪ್ರಶಾಂತ್ ಅವರು ಕಾರ್ಮಿಕರ ವೇತನ ಒಪ್ಪಂದಗಳಿಗೆ ₹4.83 ಕೋಟಿ ಹಾಗೂ ಕ್ಯಾಂಪಸ್ ಸಂರಕ್ಷಣೆಗೆ ₹20 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ನೂರಾರು ಸಿಬ್ಬಂದಿ ಭಾಗವಹಿಸಿದ್ದರು.
