ಬನಶಂಕರಿ ಬಳಿ ಮತ್ತೆ ಚಿರತೆ ಪ್ರತ್ಯಕ್ಷ; ಆತಂಕದಲ್ಲಿ ಸ್ಥಳೀಯರು
ಬೆಂಗಳೂರು: ಬನಶಂಕರಿ ಆರನೇ ಹಂತದ ಕರಿಯಣ್ಣನಪಾಳ್ಯ ಸಮೀಪದ ತುರಹಳ್ಳಿ ಅರಣ್ಯದ ಅಂಚಿನಲ್ಲಿ ಶನಿವಾರ ಸಂಜೆ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಸಂಜೆ 6.30ರಿಂದ 7 ಗಂಟೆಯ ನಡುವೆ ಅರಣ್ಯದ ಅಂಚಿನಲ್ಲಿರುವ ವಸತಿ ಪ್ರದೇಶದ ಸಮೀಪ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕೆಲಕಾಲ ಅಲ್ಲೇ ತಂಗಿದ್ದು, ಬೀದಿ ನಾಯಿಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ನಿವಾಸಿಗಳು ತಿಳಿಸಿದ್ದಾರೆ.
ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿ ಪಟಾಕಿ ಸಿಡಿಸುವ ಮೂಲಕ ಚಿರತೆಯನ್ನು ಅರಣ್ಯದೊಳಕ್ಕೆ ಓಡಿಸುವ ಕಾರ್ಯಾಚರಣೆ ನಡೆಸಿದರು. ತಡರಾತ್ರಿವರೆಗೂ ಕಾರ್ಯಾಚರಣೆ ಮುಂದುವರಿದಿದ್ದರೂ ಚಿರತೆಯನ್ನು ಸೆರೆಹಿಡಿಯಲು ಸಾಧ್ಯವಾಗಿಲ್ಲ.
ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಹಲವು ಬಾರಿ ಚಿರತೆ ಕಾಣಿಸಿಕೊಂಡಿದ್ದು, ಈ ಹಿಂದೆ ಬೀದಿ ನಾಯಿಯನ್ನು ಹೊತ್ತೊಯ್ದ ಘಟನೆ ಕೂಡ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಸಾರ್ವಜನಿಕರು ಅರಣ್ಯದ ಅಂಚಿನತ್ತ ತೆರಳದಂತೆ ಹಾಗೂ ಬೀದಿ ನಾಯಿಗಳಿಗೆ ಆಹಾರ ಹಾಕದಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.
ಅರಣ್ಯದ ಗಡಿಯ ಕಾಂಪೌಂಡ್ ಗೋಡೆಯನ್ನು ಎತ್ತರಿಸುವುದು ಸೇರಿದಂತೆ ಶಾಶ್ವತ ಕ್ರಮ ಕೈಗೊಂಡು ಚಿರತೆ ವಸತಿ ಪ್ರದೇಶಕ್ಕೆ ಬರದಂತೆ ತಡೆಯಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಇತ್ತೀಚಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪ್ರದೇಶದ ಮೇಲೆ ನಿಗಾ ಮುಂದುವರಿಸಿದೆ.
