2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ವಯಸ್ಸು, ಕಲುಷಿತ ರಾಜಕಾರಣ ಉಲ್ಲೇಖಿಸಿದ ಸಿದ್ದರಾಮಯ್ಯ
ಬೆಂಗಳೂರು, ಜುಲೈ 26: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದು, ವಯಸ್ಸು, ಆರೋಗ್ಯ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಣ ಮತ್ತು ಭ್ರಷ್ಟಾಚಾರದ ಪ್ರಭಾವ ಹೆಚ್ಚುತ್ತಿರುವುದನ್ನು ತಮ್ಮ ನಿರ್ಧಾರಕ್ಕೆ ಕಾರಣವೆಂದು ಹೇಳಿದ್ದಾರೆ. ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿದು ಜನರ ಕಷ್ಟ-ಸುಖಗಳಿಗೆ ಧ್ವನಿಯಾಗಿರುತ್ತೇನೆ ಎಂದಿದ್ದಾರೆ.
ಶನಿವಾರ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದ ಕುರಿತು ಭಾನುವಾರ ಎಕ್ಸ್ನಲ್ಲಿ ಹಂಚಿಕೊಂಡಿರುವ ಸಂದೇಶದಲ್ಲಿ, ವರುಣ ಕ್ಷೇತ್ರದ ಜನರು ಮತ್ತೊಮ್ಮೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದರೂ ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.
ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕ್ಷೇತ್ರದ ಜನರೇ ತಮ್ಮನ್ನು ಬೆಂಬಲಿಸಿ ಗೆಲ್ಲಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಅವರು ಹೇಳಿದ್ದಾರೆ.
ತಮಗೆ ಈಗ 79 ವರ್ಷವಾಗಿದ್ದು, ರಾಜ್ಯ ಸರ್ಕಾರದ ಅವಧಿ ಮುಗಿಯುವ ವೇಳೆಗೆ 81-82 ವರ್ಷ ವಯಸ್ಸಾಗಿರುತ್ತದೆ. ಆಗ ಈಗಿನಂತೆಯೇ ಆರೋಗ್ಯ ಮತ್ತು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
2028ರ ವೇಳೆಗೆ ತಮ್ಮ ರಾಜಕೀಯ ಜೀವನಕ್ಕೆ 50 ವರ್ಷಗಳು ಪೂರ್ಣಗೊಳ್ಳಲಿದ್ದು, 1978ರಲ್ಲಿ ತಾಲೂಕು ಮಂಡಳಿ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ್ದಾಗಿ ಸ್ಮರಿಸಿದರು. ಸೋಲು-ಗೆಲುವು ಎರಡನ್ನೂ ಕಂಡಿದ್ದರೂ ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ ಹಾಗೂ ಆತ್ಮಸಾಕ್ಷಿಗೆ ದ್ರೋಹ ಮಾಡಿಲ್ಲ ಎಂಬ ತೃಪ್ತಿ ಇದೆ ಎಂದರು.
ಇಂದು ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಮತದಾರರಿಗೆ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲ ಇಲ್ಲದಂತಾಗಿದ್ದು, ಇದೇ ಕಾರಣಗಳಿಂದ ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಕಳೆದ ಐದು ದಶಕಗಳಿಂದ ಕರ್ನಾಟಕದ ಜನತೆ ತಮ್ಮನ್ನು ತಮ್ಮಲ್ಲೊಬ್ಬರಂತೆ ಪ್ರೀತಿಸಿ ಬೆಂಬಲಿಸಿದ್ದಾರೆ. ಆ ಋಣವನ್ನು ಎಂದಿಗೂ ಮರೆಯುವುದಿಲ್ಲ. ಚುನಾವಣಾ ರಾಜಕಾರಣದಿಂದ ಹಿಂದೆ ಸರಿದರೂ ಉಳಿದ ಜೀವನವನ್ನು ಜನಸೇವೆಗೆ ಮೀಸಲಿಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
