Home ಬೆಂಗಳೂರು ನಗರ ಸಿ.ಟಿ ರವಿ ನಾಲಿಗೆ ಬಿಗಿ ಹಿಡಿದು ಮಾತಾಡಲಿ: ರಾಮಲಿಂಗಾ ರೆಡ್ಡಿ

ಸಿ.ಟಿ ರವಿ ನಾಲಿಗೆ ಬಿಗಿ ಹಿಡಿದು ಮಾತಾಡಲಿ: ರಾಮಲಿಂಗಾ ರೆಡ್ಡಿ

70
0

ಬೆಂಗಳೂರು:

‘ದೇಶದ ಸ್ವಾತಂತ್ರ್ಯಕ್ಕಾಗಿ 2 ವರ್ಷ ಜೈಲು ಸೇರಿ, 16 ವರ್ಷಗಳ ದೇಶದ ಪ್ರಧಾನಿಯಾಗಿ ಬಾಂಗ್ಲಾ ವಿಮೋಚನೆ, ಬಡವರ ಪರ ಅನೇಕ ಕಾರ್ಯಕ್ರಮಗಳನ್ನು ಕೊಟ್ಟು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಅವರು ಎಚ್ಚರಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುರುಮಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಹುಕ್ಕಾ ಬಾರ್, ಗಾಂಜಾ, ಕುಡಿದು ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ ರವಿ ಹಾಗೂ ಬಿಜೆಪಿಯವರ ಸಂಸ್ಕೃತಿ’ ಎಂದು ಕಿಡಿಕಾರಿದರು.

‘ಕಾಂಗ್ರೆಸ್ ಪಕ್ಷ ಬಡವರಿಗಾಗಿ ಹಸಿವು ನೀಗಿಸಲು ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಮಾಡಲಾಗಿದೆ. ಆದರೆ ಸಿ.ಟಿ ರವಿ ಅವರು ಇಂದಿರಾಗಾಂಧಿ ಅವರ ಹೆಸರಲ್ಲಿ ಹುಕ್ಕಾ ಬಾರ್ ಬೇಕಾದರೆ ಮಾಡಿಕೊಳ್ಳಲಿ ಎಂದು ಆಡಿರುವ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಆಚಾರವಿಲ್ಲದ ನಾಲಿಗೆ ಏನುಬೇಕಾದರೂ ಮಾತನಾಡುತ್ತದೆ. ಇಂದಿರಾ ಗಾಂಧಿ ಅವರ ಹೆಸರನ್ನು ಹೇಳುವ ಯೋಗ್ಯತೆ ಬಿಜೆಪಿ ನಾಯಕರಿಗಿಲ್ಲ’ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ಆಗಲಿ, ಆರ್ ಎಸ್ ಎಸ್ ಆಗಲಿ ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಇವರು ಯಾರ ಜತೆ ಶಾಮೀಲಾಗಿದ್ದರು ಎಂಬುದನ್ನು ನೋಡಿದರೆ ಇವರ ಬಗ್ಗೆ ತಿಳಿಯುತ್ತದೆ. ಸಿ.ಟಿ ರವಿ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಇತಿ ಮಿತಿಯಲ್ಲಿ ಮಾತನಾಡಬೇಕು, ಇಂತಹ ಉದ್ಧಟತನದ ಮಾತುಗಳನ್ನು ನಿಲ್ಲಿಸಬೇಕು. ನಾವು ಅವರ ಮುಖಂಡರ ವಿರುದ್ಧ ಇದಕ್ಕಿಂತ ತೀಕ್ಷ್ಣವಾಗಿ ಮಾತನಾಡಲು ನಮಗೂ ಬರುತ್ತದೆ’ ಎಂದು ವಾಗ್ದಾಳಿ ನಡೆಸಿದರು.

‘ಸಿ.ಟಿ ರವಿ ಅವರಿಂದಾಗಲಿ, ಬಿಜೆಪಿಯವರಿಂದಾಗಲಿ ಈ ರಾಜ್ಯ ಹಾಗೂ ದೇಶಕ್ಕೆ ಯಾವುದೇ ಕೊಡುಗೆ ಇಲ್ಲ. ಐಪಿಎಸ್ ಹುದ್ದೆಯಲ್ಲಿದ್ದ ಅಣ್ಣಾಮಲೈ ಅವರನ್ನು ಹುದ್ದೆಯಿಂದ ಬಿಡಿಸಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಅವರನ್ನು ತಮಿಳುನಾಡು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ರಾಜ್ಯದ ವಿರುದ್ಧ ನಿಲ್ಲುವಂತೆ ಮಾಡುತ್ತಿರುವುದು ಸಿ.ಟಿ ರವಿ ಅವರೇ’ ಎಂದು ರಾಮಲಿಂಗಾ ರೆಡ್ಡಿ ಅವರು ತಿಳಿಸಿದರು.

ನಂತರ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಅವರು, ‘ಸಿ.ಟಿ ರವಿ ಅವರ ಮಾತುಗಳನ್ನು ಕೇಳಿದರೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತೆ ಕಾಣುತ್ತಿದೆ. ಅವರ ಭಾಷೆ ಬಳಕೆ ಇದಕ್ಕೆ ಸಾಕ್ಷಿ. ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಅವರ ಮಾತುಗಳು ಅವರ ಆಚಾರ ವಿಚಾರವನ್ನು ತಿಳಿಸುತ್ತದೆ’ ಎಂದರು.

ಇಂದಿರಾ ಅವರ ಪಾದದ ಧೂಳಿಗೂ ರವಿ ಸಮರಲ್ಲ: ಈಶ್ವರ್ ಖಂಡ್ರೆ

‘ಸಿ.ಟಿ ರವಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾದದ ಧೂಳಿಗೂ ಸಮರಲ್ಲ. ಬಿಜೆಪಿಯವರು ಇಂತಹ ಹೇಳಿಕೆ ನೀಡಿ ದೇಶ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರಲು ಪ್ರಚೋದಿಸುತ್ತಿದ್ದಾರೆ. ಇವರು ರಾಜಕೀಯದಲ್ಲಿರಲು ಲಾಯಕ್ಕಿಲ್ಲ. ಸಿ.ಟಿ ರವಿ ಅವರನ್ನು ಪ್ರಧಾನ ಕಾರ್ಯದರ್ಶಿ ಮಾಡಿದ್ದು, ಇವರಿಗೆ ಚಂಬಲ್ ಘಾಟ್ ಉಸ್ತುವಾರಿ ನೀಡಬೇಕು. ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ’ ಎಂದರು.

‘ಮೇಕೆದಾಟು ಯೋಜನೆ ರಾಜ್ಯದ ಹಕ್ಕು. ಈಗಾಗಲೇ ಸುಪ್ರೀಂ ಕೋರ್ಟ್, ನ್ಯಾಯಾಧಿಕರಣ ತೀರ್ಪು ನೀಡಿದ್ದು, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಆದರೂ ರಾಜ್ಯದ ಹಕ್ಕನ್ನು ಕಸಿಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ತಮಿಳುನಾಡಿಗೆ ಹೆದರಿ ಕರ್ನಾಟಕಕ್ಕೆ ಅನ್ಯಾಯ ಎಸಗುತ್ತಿದ್ದಾರೆ. ಸಿ.ಟಿ ರವಿ ಅವರು ತಮಿಳುನಾಡಿನ ಪರವಾಗಿ ವಕಾಲತ್ತು ವಹಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚಿಕ್ಕಮಗಳೂರು ಜನ ರವಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ತಮಿಳುನಾಡಿನ ಉಸ್ತುವಾರಿ ಆಗಿರುವ ಕಾರಣ ರವಿ ಅವರು ತಮಿಳುನಾಡಿನ ಪರ ವಕಾಲತ್ತು ವಹಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರಿಗೆ ಛೀಮಾರಿ ಹಾಕಲಾಗಿದೆ. ಇಷ್ಟಾದರೂ ಅವರಿಗೆ ಮಾನ ಮರ್ಯಾದೆ ಇಲ್ಲ. ಅದಕ್ಕಾಗಿ ತಮಿಳುನಾಡಿನ ಪರ ಮಾತನಾಡುತ್ತಿದ್ದಾರೆ. ಅವರು ಬೇಕಾದರೆ ತಮಿಳುನಾಡಿನಲ್ಲಿ ಹೋಗಿ ವಾಸ ಮಾಡಲಿ. ನಿತ್ಯ ಹುಕ್ಕಾ ಬಾರ್ ಮಾಡುವವರು, ಹಾಡಹಗಲೇ ದರೋಡೆ ಮಾಡುವವರಿಗೆ ಅಂತಹದ್ದೇ ಆಲೋಚನೆ ಬರುತ್ತದೆ. ಇದನ್ನು ನಾನು ಖಂಡಿಸುತ್ತೇನೆ. ಇಂದಿರಾಗಾಂಧಿ ಅವರ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here