ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿ. ಚಿತ್ರ: ಕಡತ ಚಿತ್ರ
ಬೆಂಗಳೂರು: ತಲಘಟ್ಟಪುರ ಕೆರೆಯ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಕರ್ನಾಟಕ ಲೋಕಾಯುಕ್ತ ಅಸಮಾಧಾನ ವ್ಯಕ್ತಪಡಿಸಿದ್ದು, ಒತ್ತುವರಿ ತೆರವುಗೊಳಿಸಲು ಮತ್ತೊಂದು ಅವಕಾಶ ನೀಡಿ, ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಪ್ರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದೆ ಎಂದು ಲೋಕಾಯುಕ್ತರ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ತಲಘಟ್ಟಪುರ ಕೆರೆಯ ಒತ್ತುವರಿಯನ್ನು ತೆರವುಗೊಳಿಸುವಂತೆ ಲೋಕಾಯುಕ್ತ ಸೆಪ್ಟೆಂಬರ್ 1ರಂದು ಆದೇಶ ನೀಡಿತ್ತು. ಸಾಕಷ್ಟು ಕಾಲಾವಕಾಶ ನೀಡಿದ ನಂತರವೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗಾಗಿ ನಿಯೋಜಿತ ಅಧಿಕಾರಿಯನ್ನು (Designated Officer) ನೇಮಕ ಮಾಡುವ ಸಂಬಂಧವೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಲೋಕಾಯುಕ್ತ ಅಸಮಾಧಾನ ವ್ಯಕ್ತಪಡಿಸಿದೆ.
ನವೆಂಬರ್ 16ರಂದು ನಡೆದ ವಿಚಾರಣೆಯಲ್ಲಿ ಹಾಜರಾದ ಪಾಲಿಕೆಯ ವಲಯ-1ರ ಕೆರೆಗಳ ನಿರ್ವಹಣಾ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಶರತ್ ಆರ್.ಎಂ., ಪಾಲಿಕೆಯ ವ್ಯಾಪ್ತಿಯ ಕೆರೆಗಳಿಗೆ ನಿಯೋಜಿತ ಅಧಿಕಾರಿಗಳನ್ನು ನೇಮಕ ಮಾಡುವಂತೆ ಕೋರಿ ಪಾಲಿಕೆಯ ಆಯುಕ್ತರು ನವೆಂಬರ್ 9ರಂದು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ತಲಘಟ್ಟಪುರ ಕೆರೆಗೆ ಸಂಬಂಧಿಸಿದಂತೆ ವಲಯ-1ರ ಅಂಜನಾಪುರ ವಿಭಾಗದ ಕಾರ್ಯಪಾಲಕ ಅಭಿಯಂತರರನ್ನು ನಿಯೋಜಿತ ಅಧಿಕಾರಿಯಾಗಿ ನೇಮಕ ಮಾಡುವಂತೆ ಪ್ರಸ್ತಾಪಿಸಲಾಗಿದ್ದು, ಈ ಕುರಿತು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಅಧಿಸೂಚನೆ ಹೊರಡಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಕೆರೆಯ ಒತ್ತುವರಿ ತೆರವುಗೊಳಿಸುವುದು, ಕೆರೆಗಳನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ಧಿಪಡಿಸುವುದು ಅತ್ಯಂತ ಆದ್ಯತೆಯ ವಿಷಯಗಳಾಗಿವೆ. ಕೆರೆಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದ್ದು, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಈ ಕರ್ತವ್ಯವನ್ನು ಅತ್ಯಂತ ಆದ್ಯತೆ ಮತ್ತು ದಕ್ಷತೆಯಿಂದ ನಿರ್ವಹಿಸಬೇಕಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಅಂತಹ ಬದ್ಧತೆ ಮತ್ತು ಕಾರ್ಯತತ್ಪರತೆ ಕಂಡುಬರುತ್ತಿಲ್ಲ ಎಂದು ಲೋಕಾಯುಕ್ತ ಅಭಿಪ್ರಾಯಪಟ್ಟಿದೆ. ನಿಯೋಜಿತ ಅಧಿಕಾರಿಯನ್ನು ನೇಮಕ ಮಾಡದಿದ್ದರೂ, ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿರುವ ಸಮರ್ಥ ಅಧಿಕಾರಿಗೆ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಬಹುದಾಗಿತ್ತು. ಆದರೆ ಈ ನಿಟ್ಟಿನಲ್ಲಿಯೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಲೋಕಾಯುಕ್ತ ಗಮನಿಸಿದೆ.
ಈ ಪ್ರಕರಣದಲ್ಲಿ ಹಾಜರಾಗಬೇಕಿದ್ದ ಬೆಂಗಳೂರು ದಕ್ಷಿಣ ಉಪವಿಭಾಗದ ಉಪವಿಭಾಗಾಧಿಕಾರಿಗಳು ಹಾಜರಾಗದೆ, ಸುಪ್ರೀಂ ಕೋರ್ಟ್‌ನಲ್ಲಿನ ಪ್ರಕರಣವೊಂದರ ಕಾರ್ಯನಿಮಿತ್ತ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಕೋರಿದ್ದಾರೆ. ಅವರ ಪರವಾಗಿ ಹಾಜರಾದ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಶೀಲ್ದಾರ್ ಅಶ್ವತ್ಥ ಎಂ.ಬಿ. ಅವರು, ಒತ್ತುವರಿದಾರರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಆದೇಶಗಳನ್ನು ಹೊರಡಿಸಲಾಗುವುದು ಎಂದು ತಿಳಿಸಿದ್ದು, ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರು ತಲಘಟ್ಟಪುರ ಕೆರೆ ಒತ್ತುವರಿಯನ್ನು ಕಾನೂನು ಪ್ರಕಾರ ತೆರವುಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ವಿವಿಧ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸುವುದರಿಂದ ಮಾತ್ರ ಯಾವುದೇ ಪರಿಣಾಮಕಾರಿ ಫಲಿತಾಂಶ ದೊರೆಯುವುದಿಲ್ಲ; ಸ್ಥಳದಲ್ಲಿಯೇ ಕಾರ್ಯಪ್ರವೃತ್ತರಾಗಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಲೋಕಾಯುಕ್ತ ಸ್ಪಷ್ಟಪಡಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು 2027ರ ಜನವರಿ 12ಕ್ಕೆ ಮುಂದೂಡಲಾಗಿದೆ.
