ಕರ್ನಾಟಕದಲ್ಲಿ ಹೂಡಿಕೆ ಕುರಿತು ಸಿಂಗಪುರದಲ್ಲಿ ಎಸ್ಎಟಿಎಸ್, ಎಸ್ಟಿ ಎಂಜಿನಿಯರಿಂಗ್, ಜಾಪ್ಫಾ ಜತೆ ಎಂ ಬಿ ಪಾಟೀಲ ಮಾತುಕತೆ
ಬೆಂಗಳೂರು: ರಾಜ್ಯದ ವೈಮಾನಿಕ, ಲಾಜಿಸ್ಟಿಕ್ಸ್, ಆಹಾರ ಸಂಸ್ಕರಣೆ ಮತ್ತು ಉತ್ಪಾದನಾ ವಲಯಗಳಿಗೆ ಬಂಡವಾಳ ಆಕರ್ಷಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಗುರುವಾರ ಸಿಂಗಪುರದಲ್ಲಿ ಎಸ್ಎಟಿಎಸ್, ಎಸ್ಟಿ ಎಂಜಿನಿಯರಿಂಗ್, ಜಾಪ್ಫಾ, ನಾರ್ಡಿಕ್ ಫ್ಲೋ ಕಂಟ್ರೋಲ್ ಮತ್ತು ತಕ್ರಾಲ್ ಕಾರ್ಪೊರೇಷನ್ ಜತೆ ಮಾತುಕತೆ ನಡೆಸಿದರು.
ಸಚಿವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿರುವ ತನ್ನ ಕಾರ್ಯಾಚರಣೆ ವಿಸ್ತರಣೆಗೆ ಎಸ್ಎಟಿಎಸ್ ಆಸಕ್ತಿ ವ್ಯಕ್ತಪಡಿಸಿದೆ. ಕರ್ನಾಟಕದಲ್ಲಿ ಫೀಡ್ ಮಿಲ್ ಹಾಗೂ ಆಹಾರ ಸಂಸ್ಕರಣೆ ಘಟಕ ಸ್ಥಾಪಿಸುವ ಸಾಧ್ಯತೆ ಕುರಿತು ಜಾಪ್ಫಾ ಚರ್ಚಿಸಿದೆ.
ಹೂಡಿಕೆ ಆಕರ್ಷಣೆಯ ಪ್ರಯತ್ನದ ಭಾಗವಾಗಿ ಸಿಂಗಪುರ್ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಸ್ಐಸಿಸಿಐ) ಪ್ರತಿನಿಧಿಗಳೊಂದಿಗೂ ಪಾಟೀಲ ವಿಚಾರ ವಿನಿಮಯ ನಡೆಸಿದರು.

ಎಸ್ಎಟಿಎಸ್ ವಿಸ್ತರಣೆ, ತರಬೇತಿ ಅಕಾಡೆಮಿ ಕುರಿತು ಚರ್ಚೆ
ಬೆಂಗಳೂರಿನಲ್ಲಿ ಕಾರ್ಗೋ ನಿರ್ವಹಣೆ, ಶೀತಲಗೃಹಗಳು, ಏರ್ಪೋರ್ಟ್ ಲಾಜಿಸ್ಟಿಕ್ಸ್ ಮತ್ತು ಉಗ್ರಾಣಗಳಲ್ಲಿ ಈಗಾಗಲೇ ಕ್ರಿಯಾಶೀಲವಾಗಿರುವ ಎಸ್ಎಟಿಎಸ್ ತನ್ನ ಸಾಮರ್ಥ್ಯ ವಿಸ್ತರಣೆಗೆ ಆಸಕ್ತಿ ತೋರಿದೆ. ಈ ಸಂಬಂಧ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್) ಜತೆ ಚರ್ಚೆ ಪ್ರಗತಿಯಲ್ಲಿದೆ ಎಂದು ಪಾಟೀಲ ತಿಳಿಸಿದರು.
ತನ್ನ ವೈಮಾನಿಕ ಮತ್ತು ಲಾಜಿಸ್ಟಿಕ್ಸ್ ಚಟುವಟಿಕೆಗಳಿಗೆ ಅಗತ್ಯ ಕೌಶಲ್ಯ ಒದಗಿಸಲು ಕರ್ನಾಟಕದಲ್ಲಿ ತರಬೇತಿ ಅಕಾಡೆಮಿ ಸ್ಥಾಪಿಸುವ ಒಲವನ್ನೂ ಕಂಪನಿ ವ್ಯಕ್ತಪಡಿಸಿದೆ ಎಂದರು.

ವೈಮಾನಿಕ, ಆಹಾರ ಸಂಸ್ಕರಣೆ ವಲಯದ ಅವಕಾಶಗಳು
ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಮಗ್ರ ಪುನಶ್ಚೇತನದ (ಎಂಆರ್ಒ) ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಎಸ್ಟಿ ಎಂಜಿನಿಯರಿಂಗ್ ಭಾರತದಲ್ಲಿ ನೆಲೆ ಸ್ಥಾಪಿಸಲು ಆಸಕ್ತಿ ಹೊಂದಿದೆ. ರಾಜ್ಯದ ವೈಮಾನಿಕ ಉದ್ಯಮದ ವ್ಯವಸ್ಥೆ ಮತ್ತು ನೀತಿಗಳ ಕುರಿತು ನಿಯೋಗವು ಕಂಪನಿಗೆ ವಿವರಿಸಿದೆ ಎಂದು ಪಾಟೀಲ ಹೇಳಿದರು.
ಪಶು ಆಹಾರ ಮತ್ತು ಆಹಾರ ಸಂಸ್ಕರಣೆ ವಲಯದ ಜಾಪ್ಫಾ ಕಂಪನಿ ಕರ್ನಾಟಕದಲ್ಲಿ ಫೀಡ್ ಮಿಲ್ ಹಾಗೂ ಆಹಾರ ಸಂಸ್ಕರಣೆ ಘಟಕ ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸಿದೆ. ಇದಕ್ಕಾಗಿ ರಾಜ್ಯದಲ್ಲಿರುವ ಸೂಕ್ತ ಸ್ಥಳಗಳ ಕುರಿತು ಚರ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಉತ್ಪಾದನೆ, ಡ್ರೋನ್ ವಲಯದಲ್ಲಿ ಸಹಭಾಗಿತ್ವ
ವಾಲ್ವ್ ಮತ್ತು ಸಾಗರ ಸಂಬಂಧಿತ ಉದ್ಯಮದಲ್ಲಿ ಕಾರ್ಯನಿರ್ವಹಿಸುವ ನಾರ್ಡಿಕ್ ಫ್ಲೋ ಕಂಟ್ರೋಲ್ ಕಂಪನಿಗೆ ಕರ್ನಾಟಕಕ್ಕೆ ಭೇಟಿ ನೀಡಿ ರಾಜ್ಯದ ಉತ್ಪಾದನಾ ಹಾಗೂ ಎಂಜಿನಿಯರಿಂಗ್ ವ್ಯವಸ್ಥೆಯನ್ನು ಅಧ್ಯಯನ ಮಾಡುವಂತೆ ಆಹ್ವಾನಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಈಗಾಗಲೇ ನೆಲೆ ಹೊಂದಿರುವ ತಕ್ರಾಲ್ ಕಾರ್ಪೊರೇಷನ್, ಸ್ಕೈಲಾರ್ಕ್ ಡ್ರೋನ್ಸ್ನಲ್ಲಿ ಮಾಡಿರುವ ಹೂಡಿಕೆಯ ವಿವರ ಹಂಚಿಕೊಂಡಿದೆ. ಹೆಚ್ಚಿನ ಸಹಭಾಗಿತ್ವ ಕುರಿತು ಚರ್ಚಿಸಲಾಗಿದ್ದು, ತನ್ನ ಒಂದು ಕಂಪನಿ ಕರ್ನಾಟಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಆಸಕ್ತಿ ಹೊಂದಿರುವುದನ್ನು ತಕ್ರಾಲ್ ತಿಳಿಸಿದೆ ಎಂದು ಹೇಳಿದರು.
ಆಯಾ ಸಭೆಗಳಲ್ಲಿ ತಕ್ರಾಲ್ನ ಸತ್ಬೀರ್ ಸಿಂಗ್ ಮತ್ತು ಸತ್ಪಾಲ್ ಸಿಂಗ್, ನಾರ್ಡಿಕ್ನ ಡೋರ್ಕಾಸ್ ಟಿಯೊ, ಜಾಪ್ಫಾದ ಬಿಲ್ಲಿ ಥಾಮ್ ಮತ್ತು ಸಿಂಥಾ ಲಿಮ್, ಎಸ್ಎಟಿಎಸ್ನ ಬಾಬ್ ಚೀ, ವೆಂಡಿ ಲೋ ಮತ್ತು ಯಿನ್ ಫನ್ ಥಿಮ್ ಹಾಗೂ ಎಸ್ಟಿ ಎಂಜಿನಿಯರಿಂಗ್ನ ಕೆವಿನ್ ಚೌ ಭಾಗವಹಿಸಿದ್ದರು.
ರಾಜ್ಯದ ನಿಯೋಗದಲ್ಲಿ ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
