ಮಂಗಳವಾರ ದೇವನಹಳ್ಳಿಯಲ್ಲಿ ನಡೆದ ಕಾಲಿನ್ಸ್ ಏರೋಸ್ಪೇಸ್ ಎಂಆರ್‌ಒ ಘಟಕದ ಶಂಕುಸ್ಥಾಪನೆ ಸಮಾರಂಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (ಎಡ) ಮತ್ತು ಇತರರು. ಚಿತ್ರ: ಸಚಿವ ಎಂ.ಬಿ. ಪಾಟೀಲರ ಮಾಧ್ಯಮ ಗುಂಪು
ಬೆಂಗಳೂರು: ಬೆಂಗಳೂರು ಸಮೀಪದ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ ಪ್ರದೇಶದಲ್ಲಿ ಕಾಲಿನ್ಸ್ ಏರೋಸ್ಪೇಸ್ ಕಂಪನಿಯ ದೇಶದ ಮೊದಲ ವಿಮಾನ ನಿರ್ವಹಣೆ ಮತ್ತು ದುರಸ್ತಿ (ಎಂಆರ್‌ಒ) ಘಟಕದ ನಿರ್ಮಾಣಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಂಗಳವಾರ ಭೂಮಿಪೂಜೆ ನೆರವೇರಿಸಿದರು. ಈ ಘಟಕದಿಂದ 2,100 ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಘಟಕ ನಿರ್ಮಾಣಕ್ಕೆ ಸರ್ಕಾರ 26 ಎಕರೆ ಜಾಗ ನೀಡಿದೆ ಎಂದು ಪಾಟೀಲ ಹೇಳಿದರು. ಈ ಘಟಕದ ಮೂಲಕ ಕಾಲಿನ್ಸ್ ಏರೋಸ್ಪೇಸ್ ಏಷ್ಯಾ-ಪೆಸಿಫಿಕ್ ಪ್ರದೇಶದ ವಿಶಾಲ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತು ಮೂಡಿಸಲಿದ್ದು, ದೇಶದ ಏರೋಸ್ಪೇಸ್ ವಲಯದಲ್ಲಿ ಶೇ 65ರಷ್ಟು ಪಾಲು ಹೊಂದಿರುವ ಕರ್ನಾಟಕ ಇಲ್ಲಿಂದ ರಫ್ತು ವಹಿವಾಟನ್ನೂ ನಡೆಸಲಿದೆ ಎಂದರು. ಕಂಪನಿ ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ 200 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಕಳೆದ ವರ್ಷದ ನವೆಂಬರ್‌ನಲ್ಲಿ ದೇವನಹಳ್ಳಿಯಲ್ಲೇ ತಯಾರಿಕಾ ಘಟಕವನ್ನು ಉದ್ಘಾಟಿಸಲಾಗಿದೆ ಎಂದು ಅವರು ತಿಳಿಸಿದರು.
ಘಟಕದ ಕಾರ್ಯ
ಇದು ಜಾಗತಿಕ ಮಟ್ಟದ ಮೂಲ ಸಲಕರಣೆ ತಯಾರಕ (ಒಇಎಂ) ಕಂಪನಿಯೊಂದು ಭಾರತದಲ್ಲಿ ಸ್ಥಾಪಿಸುತ್ತಿರುವ ಪ್ರಪ್ರಥಮ ಘಟಕ. ಎಟಿಆರ್ 42 ಮತ್ತು ಎಟಿಆರ್ 72 ವಿಮಾನಗಳಲ್ಲಿರುವ 568ಎಫ್ ಸರಣಿಯ ಪ್ರೊಪೆಲ್ಲರ್‌ಗಳಿಗೆ ಹಾಗೂ ಸೇನೆ ಬಳಸುವ ಸಿ295 ವಿಮಾನಗಳಿಗೆ ಬೇಕಾದ ಸೇವೆಗಳನ್ನು ಇದು ಒದಗಿಸಲಿದೆ. ಇದರಿಂದ ಬೆಂಗಳೂರು ಏಷ್ಯಾ-ಪೆಸಿಫಿಕ್ ಪ್ರದೇಶದ ವಿಮಾನ ಸೇವೆಗಳ ಕೇಂದ್ರವಾಗಿ ಬೆಳೆಯಲಿದೆ ಮತ್ತು ರಾಜ್ಯದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೂ ಅನುಕೂಲವಾಗಲಿದೆ ಎಂದು ಪಾಟೀಲ ವಿವರಿಸಿದರು.
ಏರೋಸ್ಪೇಸ್ ನೀತಿ ಮತ್ತು ಹೂಡಿಕೆದಾರರ ಸಮಾವೇಶ
ರಾಜ್ಯವು ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ಜಾರಿಗೆ ತಂದಿದ್ದು, 2031ರೊಳಗೆ ಈ ವಲಯಕ್ಕೆ ₹60,000 ಕೋಟಿ ಬಂಡವಾಳ ಆಕರ್ಷಿಸಿ 60,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ ಎಂದು ಪಾಟೀಲ ಹೇಳಿದರು. ಎಂಆರ್‌ಒಗಳ ಅಭಿವೃದ್ಧಿ, ವಿಮಾನ ತಯಾರಿಕೆಗೆ ಬೇಕಾದ ಸಮಗ್ರ ಕಾರ್ಯಪರಿಸರ ಸೃಷ್ಟಿ, ರಕ್ಷಣಾ ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಉತ್ತೇಜನ ಸೇರಿದಂತೆ ಏಳು ಮುಖ್ಯ ವಿಭಾಗಗಳನ್ನು ಗುರುತಿಸಲಾಗಿದೆ.
ಏಪ್ರಿಲ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮುನ್ನ ಜಾಗತಿಕ ಒಇಎಂ ಕಂಪನಿಗಳು, ಟೈಯರ್-1 ಕಂಪನಿಗಳು ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಒಟ್ಟುಗೂಡಿಸಿ ಸಮಾವೇಶ ನಡೆಸಲಾಗುವುದು ಎಂದು ಅವರು ತಿಳಿಸಿದರು. ಪ್ರಾದೇಶಿಕ ವಿಮಾನಯಾನ ಸಂಪರ್ಕ ಜಾಲ ಬೆಳೆಯುತ್ತಿದ್ದು, ರಕ್ಷಣಾ ಇಲಾಖೆಗೂ ವೈಮಾನಿಕ ಸೇವೆ, ನಿರ್ವಹಣೆ, ದುರಸ್ತಿಯ ಅಗತ್ಯ ಹೆಚ್ಚುತ್ತಿರುವುದರಿಂದ ಎಂಆರ್‌ಒ ಘಟಕಗಳಿಗೆ ಬೇಡಿಕೆ ಹೆಚ್ಚಿದೆ; ವೈಮಾಂತರಿಕ್ಷ ವಲಯದಲ್ಲಿ ಸ್ವಾವಲಂಬನೆಗೆ ಸ್ಥಳೀಯವಾಗಿ ಎಂಆರ್‌ಒ ಘಟಕಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ರಾಜ್ಯವು ಪ್ರತ್ಯೇಕ ನಾಗರಿಕ ವಿಮಾನಯಾನ ನೀತಿಯನ್ನು ರೂಪಿಸಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ಸಿಗಲಿದೆ; ಈ ನೀತಿ ಉಡಾನ್ ಯೋಜನೆಗೂ ನೆರವಾಗಲಿದೆ ಎಂದು ಪಾಟೀಲ ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್, ಕಾಲಿನ್ಸ್ ಏರೋಸ್ಪೇಸ್ ಮುಖ್ಯಸ್ಥ ಅಜಯ್ ಮಹಾಜನ್ ಮತ್ತು ಕಂಪನಿಯ ಪ್ರೊಪೆಲ್ಲರ್ ಸಿಸ್ಟಮ್ ಪ್ರಧಾನ ವ್ಯವಸ್ಥಾಪಕ ಜಾನ್ ಫ್ರಾಂಕೋಯಿಸ್ ಚನುವಾತ್ ಮಾತನಾಡಿದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಕಾಲಿನ್ಸ್ ಸಂಸ್ಥೆಯ ಹಿರಿಯ ನಿರ್ದೇಶಕ ಬಿನು ಕೃಷ್ಣಮೂರ್ತಿ ಉಪಸ್ಥಿತರಿದ್ದರು.
