ಬೆಂಗಳೂರು:
ಬೆಂಗಳೂರು ಒಳಚರಂಡಿ ವ್ಯವಸ್ಥೆ ಸರಿಪಡಿಸಲು ವಿಶೇಷ ಸಭೆ ಕರೆದು ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಳೆಯಿಂದ ಹಾನಿಗೊಳಗಾದ ಎಚ್.ಎಸ್.ಆರ್ ಬಡಾವಣೆ, ಮಡಿವಾಳ, ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಕೆರೆಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿಗಳು ಅಗರ ಪಕ್ಕದಲ್ಲಿರುವ ಬಡಾವಣೆಗಳಿಗೆ ನೀರು ಮನೆಗಳಿಗೆ ನುಗ್ಗಿ ಅನಾಹುತಗಳಾಗಿವೆ. 15-20 ಕೆರೆಗಳ ನೀರು ಮೇಲ್ಮಟ್ಟದಿಂದ ಅಗರ ಕೆರೆಗೆ ಹರಿದು ಬರುತ್ತಿದೆ. ಇದನ್ನು ತಡೆಗಟ್ಟಿ ಸಾಮರ್ಥ್ಯವನ್ನು ಹೆಚ್ಚಿಸಲು ಮುಖ್ಯ ಚರಂಡಿ ದುರಸ್ಥಿ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಅಗರ ಸುತ್ತುಲಿನ ಬಡಾವಣೆಗಳಿಗೆ ಪ್ರತ್ಯೇಕ ಚರಂಡಿ ನಿರ್ಮಾಣ ಕಾರ್ಯವನ್ನು 4-5 ತಿಂಗಳಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ. ಒಳಚರಂಡಿ ಹಾಗೂ ಕೊಳಚೆ ನೀರನ್ನು ಪ್ರತ್ಯೇಕ ಮಾಡಲು ಅಗತ್ಯ ಕ್ರಮವಹಿಸಲಾಗುವುದು ಎಂದರು.
ಬಡಾವಣೆಗಳಲ್ಲಿ ಯು.ಜಿ.ಡಿ ಲೆವೆಲ್ ಗಳಲ್ಲಿ ವ್ಯತ್ಯಾಸ ಉಂಟಾಗಿದ್ದು, ಅದನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ. ಅಗರ ಎಸ್.ಟಿ.ಪಿ ಘಟಕದ ಸಾಮರ್ಥ್ಯ 35 ಎಂ.ಎಲ್‌ಡಿ ಇದ್ದರೂ ಕೇವಲ 25 ಎಂ.ಎಲ್.ಡಿ ನೀರನ್ನು ಸಂಸ್ಕರಿಸುತ್ತಿದೆ. ಪರಿಶೀಲನೆ ವೇಳೆಯಲ್ಲಿ ಸಂಸ್ಕರಿತ ನೀರೂ ಸಹ ಚರಂಡಿಗೆ ಸೇರುತ್ತಿರುವುದನ್ನು ಗಮನಿಸಿದ್ದು, ತಕ್ಷಣವೇ ಇದನ್ನು ಸರಿಪಡಿಸಿ, ನೇರವಾಗಿ ಕೆರೆಗಳಿಗೆ ಹರಿಸಬೇಕೆಂದು ಈಗಾಗಲೇ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.
ಮಡಿವಾಳ ಕೆರೆಗೆ ಹೊಂದಿಕೊಂಡಂತೆ ಇರುವ 4 ಎಂ.ಎಲ್.ಡಿ ಎಸ್.ಟಿ.ಪಿ ಘಟಕ ಕಾರ್ಯಾರಂಭ ಮಾಡಿಲ್ಲ. 4-5 ತಿಂಗಳ ಅವಧಿಯಲ್ಲಿ ಅದು ಕೂಡ ಸಂಪೂರ್ಣವಾಗಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ ಎಂದರು.
ಸಮನ್ವಯ
ಬಿ.ಬಿ.ಎಂ.ಪಿ, ಬೆಸ್ಕಾಂ, ಬಿ.ಡಬ್ಲೂ ಎಸ್.ಎಸ್.ಬಿ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದರು.
ಗುಂಡಿ ಮುಚ್ಚಲು ಕ್ರಮ
ಗುಂಡಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದ್ದು, ಸಮಸ್ಯೆ ಬಗೆಹರಿಸಲು ಸಭೆ ಕರೆದು, ಪರಿಶೀಲಿಸಲಾಗುವುದು. ಸತತ ಮಳೆಯಿಂದಾಗಿ ದುರಸ್ತಿ ಸಾಧ್ಯವಾಗುತ್ತಿಲ್ಲ. ಮಳೆ ಬಿಡುವು ನೀಡಿದ ಕೂಡಲೇ ಗುಂಡಿಗಳನ್ನು ಮುಚ್ಚಲು ಸಮರೋಪಾದಿಯಲ್ಲಿ ಕ್ರಮವಹಿಸಲಾಗುವುದು ಎಂದರು.
ಶಾಸಕ ಸತೀಶ್ ರೆಡ್ಡಿ, ಬಿ.ಬಿ.ಎಂ.ಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆಡಳಿತಾಧಿಕಾರಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.
ಇಲ್ಲಿ ಓದಿ: ಎಚ್‌ಎಸ್‌ಆರ್ ಬಡಾವಣೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ
Also Read: CM promises master plan for Bengaluru’s drainage system