Home ಬಾಗಲಕೋಟ ಮೇಕೆದಾಟು ಯೋಜನೆಯ: ಅಂದಿನ ಕಾನೂನು ಸಚಿವರದ ಟಿಪ್ಪಣಿ ಹಾಗೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅನುಮೋದನೆಯ ನಂತರವೂ...

ಮೇಕೆದಾಟು ಯೋಜನೆಯ: ಅಂದಿನ ಕಾನೂನು ಸಚಿವರದ ಟಿಪ್ಪಣಿ ಹಾಗೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅನುಮೋದನೆಯ ನಂತರವೂ ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನಿಷ್ಕ್ರಿಯರಾಗಿದ್ದರು: ಸಚಿವ ಗೋವಿಂದ ಕಾರಜೋಳ ಟೀಕಿ

99
0
Mekedatu Project: Then Water Resource Minister MB Patil was inactive despite clearance from then Law Minister and the then Chief Minister Siddaramaiah, alleges Govind Karjol

ಕಾರಜೋಳ ರವರಿಂದ ಇನ್ನೊಂದು ದಾಖಲೆ ಬಿಡುಗಡೆ

ಬಾಗಲಕೋಟೆ/ಬೆಂಗಳೂರು:

ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವ ಕುರಿತು 2013 ರಿಂದ 2018 ರವರೆಗೆ ಅಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಪಶುಸಂಗೋಪನಾ ಮತ್ತು ಮುಜರಾಯಿ ಸಚಿವರಾಗಿದ್ದ, ಟಿ.ಬಿ.ಜಯಚಂದ್ರ ರವರು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದ ಸಕರಾತ್ಮಕ ಟಿಪ್ಪಣಿ ಹಾಗೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅನುಮೋದನೆಯ ನಂತರವೂ ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಯಾವುದೇ ಕ್ರಮ ಕೈಗೊಳ್ಳದೇ ನಿಷ್ಕ್ರಿಯರಾಗಿದ್ದರು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ಕಟುವಾಗಿ ಟೀಕಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಂದಿನ ಕಾನೂನು ಸಚಿವರು ಕಡತದ LAW 15 CWD 2013 ನಲ್ಲಿ ಮಾಡಿದ ಟಿಪ್ಪಣಿಯನ್ನು ವಿವರಿಸಿದರು.

“ಕಾವೇರಿ ನೀರು ಹಂಚಿಕೆ ವಿಷಯದ ಬಗ್ಗೆ ರಚಿತವಾಗಿರುವ ಕಾವೇರಿ ಜಲ ವಿವಾದ ನ್ಯಾಯಾಧಿಕರಣ ನೀಡಿರುವ ಆದೇಶ ತಮಗೆ ತಿಳಿದಿರುವ ವಿಷಯವಾಗಿದೆ. ಸದರಿ ನ್ಯಾಯಾಧಿಕರಣದ ಅಂತಿಮ ಆದೇಶದಂತೆ ಕರ್ನಾಟಕ ರಾಜ್ಯವು ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ಸದರಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ಅದರಂತೆ ಮೇಕೆದಾಟು ಜಲವಿದ್ಯುತ್ ಸಮಸ್ಯೆಯು ಗಂಭೀರವಾಗಿರುವುದರಿಂದ ಹಾಗೂ ನಾವು ಜನತೆಗೆ ನೀಡಿರುವ ಭರವಸೆಯಂತೆ ವಿದ್ಯುತ್ ಉತ್ಪಾದನೆಯನ್ನು ಹೆಚ್ಚು ಮಾಡಲೇಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಈ ಪ್ರತಿಷ್ಟಿತ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಈಗಾಗಲೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವಲ್ಲಿ ಸಾಕಷ್ಟು ವಿಳಂಬವಾಗಿದೆ. ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಂಬಂಧ ಮೇಲ್ಕಂಡ ಕಂಡಿಕೆಗಳಲ್ಲಿ ಅಡ್ವೋಕೇಟ್ ಜನರಲ್ ರವರು ನೀಡಿರುವ ಸಕಾರಾತ್ಮಕ ಅಭಿಪ್ರಾಯ ಮತ್ತು ಇತರೆ ಮಾಹಿತಿಯನ್ನು ಅವಗಾಹಿಸಿ ಈ ಕೂಡಲೇ ಯೋಜನೆಯನ್ನು ಪ್ರಾರಂಭಿಸಲು ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಬೇಕಾಗಿದೆ ಕೋರಿದೆ”. ಎಂದು ವಿವರವಾದ ಮತ್ತು ಸ್ಪಷ್ಟವಾದ ಟಿಪ್ಪಣಿಯನ್ನು ಮುಖ್ಯಮಂತ್ರಿಗಳಿಗೆ ಕಡತದಲ್ಲಿ ಕಳುಹಿಸಿದ್ದಾರೆ ಮತ್ತು ಅಂದು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಈ ಟಿಪ್ಪಣಿಯನ್ನು ಅನುಮೋದಿಸಿ, ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್ರಿಗೆ ಕಳುಹಿಸಿದ್ದು ಸರ್ಕಾರದ ಕಡತಗಳಲ್ಲಿ ದಾಖಲಾಗಿದೆ ಎಂದು ಗೋವಿಂದ ಕಾರಜೋಳ ರವರು ವಿವರಿಸಿದ್ದಾರೆ.

ಇಷ್ಟೆಲ್ಲಾ ಕಡತಗಳಲ್ಲಿ ಅನುಮೋದನೆ ದೊರಕಿದ ಮೇಲೆಯೂ ಸಹ ಯಾಕೆ ಕಾಮಗಾರಿಯನ್ನು ಅಂದಿನ ಕಾಂಗ್ರೆಸ್ ಸರ್ಕಾರ ಪ್ರಾರಂಭ ಮಾಡಲಿಲ್ಲ. ಈಗ ಮೇಕೆದಾಟು ಪಾದಯಾತ್ರೆ ಕೇವಲ ಒಂದು ಗಿಮಿಕ್ ಎಂದು ಸಚಿವರು ಹೇಳಿದರು. 12-11-2014 ರಂದೇ ಯೋಜನೆಗೆ ಅನುಮೋದನೆ ನೀಡಲಾಗಿದ್ದರೂ ಸಹ ಯಾಕೆ ಯೋಜನೆಯನ್ನು ಜಾರಿಗೊಳಿಸಲು ಮೀನಾಮೇಷ ಮಾಡಲಾಯಿತು ಎಂದು ಸಚಿವರು ಪ್ರಶ್ನಿಸಿದರು.

ಭಾನುವಾರ ಆರಂಭಗೊಂಡಿರುವ ಕಾಂಗ್ರೆಸ್ ನೇತೃತ್ವದ ಮೇಕೆದಾಟು ಪಾದಯಾತ್ರೆ ತನ್ನ ನಾಯಕರ ನಾಯಕತ್ವಕ್ಕಾಗಿ ನಡೆದ ಪೈಪೋಟಿಯೇ ಹೊರತು ಹೊರತು ಬೇರೇನೂ ಅಲ್ಲ. ರಾಜ್ಯದ ಹಿತದೃಷ್ಟಿಯಿಂದ ಪಾದಯಾತ್ರೆ ರೂಪಿಸಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ರವರು ಟೀಕಿಸಿದರು.

ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ಭಾಗವಹಿಸುವವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಕಾಂಗ್ರೆಸ್‌ಗೆ ಯಾವುದೇ ಕಾಳಜಿ ಇಲ್ಲದಿರುವುದು ಕಳವಳಕಾರಿಯಾಗಿದೆ ಎಂದರು.

“ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕು. ಹಾಗಾಗಿ ನಮ್ಮ ಸರ್ಕಾರ ಅವರನ್ನು ನಿರ್ಬಂಧಿಸಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಜನಸಂದಣಿ ಮತ್ತು 100 ಪ್ರತಿಶತ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸುವಂತೆ ನಾನು ಕಾಂಗ್ರೆಸ್ ನಾಯಕರನ್ನು ಒತ್ತಾಯಿಸುತ್ತೇನೆ. ಈ ಪಾದಯಾತ್ರೆಯು ರಾಜ್ಯದ ಹಿತದೃಷ್ಟಿಯಿಂದ ಅಲ್ಲ. ಕಾಂಗ್ರೆಸ್‌ ನಾಯಕರ ನಾ ಮೇಲೂ ತಾ ಮೇಲೂ ಎಂಬ ಪೈಪೋಟಿಗೆ ಕಾರಣವಾಗಿದೆ ಎಂದರು.

ಪಾದಯಾತ್ರೆಯಲ್ಲಿ ಕಾನೂನು ಉಲ್ಲಂಘಿಸುವವರ ವಿರುದ್ಧ ಸರ್ಕಾರವು ಏಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳಿದಾಗ, ಕಾರಜೋಳ ಹೇಳಿದರು: “ಕಾನೂನು ಎಲ್ಲರಿಗೂ ಒಂದೇ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

ಎಂ ಬಿ ಪಾಟೀಲ್ ವಿಶ್ವಮಾನವ:

ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ಕಾರಜೋಳ ಅವರು ಅಸಮರ್ಥರು, ಅನರ್ಹರು ಎಂಬ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಪಾಟೀಲ್ ಅವರೊಂದಿಗೆ ನನ್ನನ್ನು ಹೋಲಿಕೆ ಮಾಡಿಕೊಳ್ಳುತ್ತಿಲ್ಲ. ನಾನು ಸಾಮಾನ್ಯ ಹಿನ್ನೆಲೆಯಿಂದ ಬಂದಿದ್ದೇನೆ ಮತ್ತು ವಿಧಾನಸೌಧದವರೆಗೂ ತಲುಪಿದ್ದೇನೆ. ಎಂ.ಬಿ.ಪಾಟೀಲರು ವಿಶ್ವಮಾನವ, ವಿಶ್ವರೂಪಿ, ಬ್ರಹ್ಮಜ್ಞಾನಿ.ಇತರರ ಬಗ್ಗೆ ಮಾತನಾಡುವಾಗ ನಿಮ್ಮ ನಾಲಗೆಯ ಮೇಲೆ ಹಿಡಿತವಿರಲಿ ಎಂದು ಸಚಿವರು ಟೀಕಿಸಿದರು. ವಿಜಯಪುರ-ಬಾಗಲಕೋಟದಿಂದ ಬರುವ ನನ್ನಂತಹ ಸಾಮಾನ್ಯ ವ್ಯಕ್ತಿ ಜಲಸಂಪನ್ಮೂಲ ಸಚಿವನಾಗಿದ್ದಾನೆ ಎಂದು ನಿಮಗೆ ಮತ್ಸರ ಉಂಟಾಗಿರಬಹುದು ಎಂದು ಹೇಳಿದರು. 2013ರ ಕೂಡಲ ಸಂಗಮ ಪಾದಯಾತ್ರೆಯ ಫಲಿತಾಂಶವೇನು?ಆಲಮಟ್ಟಿಗೆ ಐದು ವರ್ಷಗಳಲ್ಲಿ 2670 ಕೋಟಿ ಮಾತ್ರ ಖರ್ಚು ಮಾಡಿದ್ದೀರಿ, ಇದಕ್ಕಾಗಿ ನಾಚಿಕೆಪಡಬೇಕು ಎಂದು ಹೇಳಿದ ಅವರು ಇದೀಗ ಮಾಡುತ್ತಿರುವ ಮೇಕೆದಾಟು ಪಾದಯಾತ್ರೆ ನೆಪಮಾತ್ರಕ್ಕೆ ಆಗಿದ ಎಂದು ಸಚಿವರು ವಿವರಿಸಿದರು.

LEAVE A REPLY

Please enter your comment!
Please enter your name here