ಬೆಂಗಳೂರು:
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ಗಾಗಿ ಇಂದು ಮಹದೇವಪುರ ಕ್ಷೇತ್ರದ ವಿವಿಧ ಭಾಗಗಳಿಗೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಬಿಡಿಎ ಅಧ್ಯಕ್ಷ ಎಸ್ಆರ್ ವಿಶ್ವನಾಥ ಮತ್ತು ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.
ಮೊದಲು ಮಹದೇವಪುರ ಕ್ಷೇತ್ರದ ಕೋನದಾಸಪುರದಲ್ಲಿ ಭೂಸ್ವಾಧೀನಗೊಂಡ ಕೋನದಾಸಪುರ ಗ್ರಾಮದ ಜಮೀನಲ್ಲಿ ಚತುಷ್ಪಥ ರಸ್ತೆ ನಿರ್ಮಿಸುವ ಸ್ಥಳಕ್ಕೆ ಭೇಟಿ ನೀಡಿದ ಅವರು ಅಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣ, ಉಪನಗರ ಬಸ್ ನಿಲ್ದಾಣ ಕ್ಕಾಗಿ ಸ್ಥಳ ಕಾಯ್ದಿರಿಸುವ ಬಗ್ಗೆ ಚರ್ಚೆ ನಡೆಸಿದರು.
ನಂತರ ದೊಡ್ಡಬನಹಳ್ಳಿಯಲ್ಲಿ ಬಿಡಿಎ ವತಿಯಿಂದ ನಿರ್ಮಿಸಿರುವ ವಸತಿ ಸಂಕೀರ್ಣ ಕ್ಕೆ ಭೇಟಿ ನೀಡಿದ ಅವರು ಮೂಲಭೂತ ಸೌಕರ್ಯಗಳ ಕೊರತೆಯಿಂದ ಅಲ್ಲಿನ ನಿವಾಸಿಗಳಿಗೆ ಆಗುತ್ತಿರುವ ಅನಾನುಕೂಲಗಳ ಬಗ್ಗೆ ಬಿಡಿಎ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರು ಮತ್ತು ಸಮಸ್ಯೆಗಳ ನಿವಾರಣೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲು ತಿಳಿಸಿದರು.
ಅಲ್ಲಿಂದ ವರ್ತೂರು ಕೆರೆ ಕಾಮಗಾರಿ ಬಗ್ಗೆ ಬಿಡಿಎ ಅಧ್ಯಕ್ಷರು ಹಾಗೂ ಅಧಿಕಾರಿಗಳೊಂದಿಗೆ ಪರಿವೀಕ್ಷಣೆ ನಡೆಸಿದ ಸಚಿವ ಅರವಿಂದ ಲಿಂಬಾವಳಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ, ಅದನ್ನು ವೇಗ ಗೊಳಿಸಬೇಕು, ಈಗಿರುವ ಟಿಪ್ಪರ್ ಗಳ ಸಂಖ್ಯೆಯನ್ನು ದ್ವಿಗುಣಗೊಳಿಸ ಬೇಕು ಎಂದು ಅವರು ಹೇಳಿದರು.
ಕೆರೆಯಿಂದ ಎತ್ತಲಾಗುತ್ತಿರುವ ಹೂಳನ್ನು ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಾಕುತ್ತಿದ್ದು ಅದನ್ನು 15ರಿಂದ 20 ಕಿಲೋಮೀಟರ್ ವ್ಯಾಪ್ತಿಗೆ ಹೆಚ್ಚಿಸಬೇಕೆಂದು ಅವರು ಸೂಚಿಸಿದರು.
ಮಹದೇವಪುರ ಕ್ಷೇತ್ರದ ಗುಂಜೂರಿನಲ್ಲಿ ಬಿಡಿಎ ವತಿಯಿಂದ ನಿರ್ಮಿಸಿರುವ ವಸತಿ ಸಂಕೀರ್ಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಸಾಕಷ್ಟು ದೂರುಗಳು ಅದನ್ನು ಪ್ರತ್ಯಕ್ಷವಾಗಿ ಪರಿಶೀಲಿಸಲು ಅಲ್ಲಿಗೆ ಭೇಟಿ ನೀಡಿದ ಸಚಿವ ಅರವಿಂದ ಲಿಂಬಾವಳಿ ಹಾಗೂ ಬಿಡಿಎ ಅಧ್ಯಕರು ಅಲ್ಲಿನ ಕುಂದುಕೊರತೆಗಳನ್ನು ಆಲಿಸಿದರು, ವಿದ್ಯುತ್ ಸಂಪರ್ಕ ದಲ್ಲಿ ಇರುವ ಲೋಪಗಳು ,ನೀರು ಪೂರೈಕೆಯಲ್ಲಿ ಕೊರತೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಸೂಚಿಸಿದರು. ವಾಹನ ನಿಲುಗಡೆ ಸಮಸ್ಯೆ ಬಗೆಹರಿಸಲು ಮತ್ತು ಒಳಚರಂಡಿ ಮೇಲೆ ಸ್ಲಾಬ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಲಿಫ್ಟು, ಕಾಂಪೌಂಡ್ ಗೋಡೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಬೆಳ್ಳಂದೂರು ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.